
(ಮೊದಲುಮಾತು)
ಈ ಕವಿತೆಯ ಮೂಲವು ನನ್ನ ಪತ್ನಿಯ ಒಂದು ಸ್ವಪ್ನದಲ್ಲಿದೆ. ವಿಧ ವಿಧವಾಗಿ ಪಲ್ಲಟಗೊಂಡಿದ್ದರೂ ಆ ಸ್ಪಪ್ನವಸ್ತುವು ಎರಡನೆಯ ಹಾಗು ಮೂರನೆಯ ಭಾಗಗಳಲ್ಲಿ ವ್ಯಕ್ತವಾಗಿದೆ. ಚಿತ್ರವನ್ನ ಪೂರ್ತಿಗೊಳಿಸಲೆಂದು ಉಳಿದ ಭಾಗಗಳನ್ನು ನಾನು ಹೆಣೆದುಕೊಂಡೆನು.
ನನ್ನ ಮನಸ್ಸನ್ನು ಆಕರ್ಷಿಸಿದುದೆಂದರೆ “ಮರದ ಒಳಮೈಯ್ಯಿಂದ ಬಂದ ಆ ಊರವವೇ” ಸರಿ. ಭಾವನೆಯಲ್ಲಿ-ವಿಶ್ವಾಸದಲ್ಲಿ – ಶಕ್ತಿಯಿದ್ದುದಾದರೆ ಆದು ಕೊನೆಗೊಮ್ಮೆ ಸಮಾಧಾನವನ್ನು ಹೊಂದಲೇಬೇಕು. ಯಾವ ಭಾವನೆಯೇ ಇರಲಿ, ಅದು ಬಲವಂತವಾಗಬೇಕಾದರೆ ಅದರ ಬುಡದಲ್ಲಿ ದೃಢವಾದ ವಿಶ್ವಾಸಬೇಕು. ತಾಯವ್ವನ ವಾತ್ಸಲ್ಯದಲ್ಲಿ ನಾನು ಕಾಣಬಯಸಿದ್ದು ಈ ತೆರನಾದ ವಿಶ್ವಾಸ; ಅದರ ಫಲವಾಗಿ ಬರುವ ದರ್ಶನ.
ಆದರೆ ಈ ಸನ್ನಿವೇಶವನ್ನು ಚಿತ್ರಿಸಬೇಕೆಂದು ವಿಚಾರಿಸಿದಾಗ ಅದಕ್ಕೊಂದು ಕಥೆಯ ಕುಂದಣವು ಅವಶ್ಯವೆನಿಸಿತು. ಕೂಸು ಗಿಳಿಯಾಗಿದ್ದ ಕಥೆ, ಇಲ್ಲವೆ ಇನ್ನೊಂದು ರೂಪವಿಶೇಷವನ್ನು ಹೊಂದಿದ ಕಥೆ, ಇವೇ ಮುಂತಾದ ಕಥೆಗಳನ್ನು ಕೇಳಿದ್ದ ನನಗೆ ಇದನ್ನೊಂದು ಜಾನಪದ ಕಥೆಯನ್ನಾಗಿ ಮಾಡಬಹುದೆಂದು ಹೊಳೆಯಿತು. ಇಂತು ಮೊದಲು ಮಾಡಿ ನಾನು ತಾಯವ್ವನ ಕಥೆಯನ್ನು ರಚಿಸಲು ಪ್ರಾರಂಭಸಿದೆನು. ಆದರೆ ‘ಮರದ ಒಳಮೈಯ್ಯಿಂದ ಬಂದ ಆ ಊರವ’ಕ್ಕೆ ಮೊದಲಿನಿಂದ ಮೋಹಿಸಿದ್ದ ನನ್ನ ಕಲ್ಪನಾಶಕ್ತಿಯು ಮೊದಲನೆಯ ಭಾಗದಲ್ಲಿ ಎಚ್ಚರಗೊಂಡಂತೆ ತೋರಲಿಲ್ಲ. ಕವಿತೆಯು ನಿಜವಾಗಿ ಮೂರನೆಯ ಭಾಗದಿಂದ ಸುರುವಾಗಿರುವದೆಂದೇ ನನ್ನ ಭಾವನೆ. ಮೊದಲಿನ ಪದ್ಯಗಳನ್ನು ಈ ಕಾವ್ಯದ ಹಿನ್ನೆಳಲೆಂದು (Back ground) ಮಾತ್ರ ಉಪಯೋಗಿಸಬಹುದು.
ಮೂರನೆಯ ಭಾಗವನ್ನು ಬರೆದಾಗ ನನ್ನನ್ನು ಸೆಳೆದ ಭಾವನೆಯಿಂದ ಬಿಡುಗಡೆ ಹೊಂದಿದೆನು. ಆದರೆ ತಾಯವ್ವನ ಕಥೆಯನ್ನು ಮುಗಿಸುವದೂ ನನ್ನ ಕಲ್ಪನೆಯು ಪಡೆಯಲೆಳಸಿದ ಸಮಗ್ರತೆಗೆ ಅವಶ್ಯವಾದ ಮಾತು. ಅವಳ ಭಾವನೆಯು ಈ ರೀತಿಯಾಗಿ ಫಲದಾಯಕವಾದಾಗ ಅವಳ ಜೀವನವೂ ವಿಶೇಷವಾಗಿ ಮಾರ್ಪಾಟು ಹೂಂದಿರಬಹುದೆಂದು ನಂಬಿದ ನನ್ನ ಕಲ್ಪನೆಯು ಆ ಬಾಳುವೆಯ ಹೊಸತನವನ್ನು ನಾಲ್ಕನೆಯ ಭಾಗದಲ್ಲಿ ಯಥಾವತ್ತಾಗಿ ಚಿತ್ರಿಸಲು ಹವಣಿಸಿತು. ಒಂದು ಅದ್ಭುತವನ್ನು ಕಂಡು ಆ ಅನುಭವದೊಂದಿಗೆ ಬೆರೆತ ಜೀವನದ ಸಾಮಾನ್ಯತೆಯು ತುಸುವಾದರೂ ಸರಿದೇ ಸರಿಯುವದು. ಕೊನೆಯ ಭಾಗವು ಒಂದು ಉತ್ಪ್ರೇಕ್ಷೆ, ಒಂದು ಅಲಂಕಾರ.
ಪುಣೆ | ವಿನಾಯಕ
೧೦-೧೧-೧೯೩೪
ತಾಯವ್ವನ ಸಮಾಧಿ
೧
ಒಂದೂರು; ಆ ಊರಿ-
ನೊಂದು ಮನೆಯೊಳಗಿತ್ತು
ಗಂಡ ಹೆಂಡತಿಯೊಂದು ಸುಖದ ಜೋಡು.
ಒಂದು ದಿನ ಅವರಿಗಿರು-
ವೊಂದೆ ಮಗು ತೀರಿತ್ತು.
ಏಳರೊಳಗಿರಲಿಲ್ಲ, ಬಂತು ಕೇಡು.
ಎದ್ದು ಉನ್ಮಾದಿನಿಯು
ಮುದ್ದು ಕುವರನ ಶವವ
ಎತ್ತಿಕೊಂಡೊಯ್ದಾಳೊ ಬನದ ಬಳಿಗೆ!
ಎಲ್ಲ ಹರಹಿದ ತಲೆಯು;
ಎಲ್ಲೆಯರಿಯದ ಸೆರಗು;
ಮಲ್ಲಿಗೆಯ ಮೆಯ್ಯು ಬಿರಿತಿಹುದು ಚಳಿಗೆ!
“ಜಾಜಿಮಲ್ಲಿಗೆಯಂಥ
ರಾಜಸುತನನು ಪಡೆದೆ.
ಬೀಜವಂಕುರಿಸದಲೆ ಆಳಿವುದುಂಟೆ?
ಪ್ರಜೆಗಳನು ಕೊಲುವಂಥ
ನೈಜ ನಿಯಮಗಳನ್ನು
ಸೃಜಿಸುತಿರೆ ದೇವನಲಿ ನ್ಯಾಯವುಂಟೆ?”
“ನೆರೆದವರು ನೀವೆಲ್ಲ
ಕರದಿ ಸ್ಪರ್ಶಿಸಿ ನೋಡಿ!
ಮರೆತಿಲ್ಲ ಮಗುವಿನ್ನು ತನ್ನ ನಗೆಯ.
ಈ ಮುದ್ದು ಕುವರನಿಗೆ
ಯಾ ಮರಣ ಬರಬಹುದು?
ಆ ಮರಣ ಕದಡಿಸಿಹುದೆನ್ಸ ಬಗೆಯ!”
“ಸತಿಯನುಳುಹಿಸಿಕೊಳಲು
ಸುತನ ಬಿಸುಟಿದ ಪತಿಯೆ!
ಇದು ಯಾವ ನಗೆಗೇಡು! ಎಂಥ ಕೇಡು!
ನಿಮ್ಮ ಮನೆ ತೊರೆದೆನಿದೊ!
ಎತ್ತಿಕೊಂಡೆನು ಮಗುವ;
ನಿಮ್ಮ ನಟನೆಯ ಕೋಪಕಿದುವೆ ಸೇಡು!
ಮಲಗಿತೇಕೀ ಕೂಸು?
ಅಲುಗಿರಲಿ ಇನ್ನೀಸು;
ಕಾಲಂದುಗೆಯು ಇಲ್ಲದಿದ್ದ ಕೂಸು!
ನನಗಿರಲಿ-ಇನ್ನೀಸು
ದಿನವಿರಲಿ ಈ ಸೊಗಸು!
ಕೂಸಿರಲು ಇನ್ನೇಕೆ ಹಾಸು ಬೀಸು!”
“ತೋಳೆ ತೊಟ್ಟಿಲವೆಂದೆ;
ಅದಕೆ ಮಲಗಿದೆ ಜಾಣ!
ತೋಳೆ ಕೈತಾಳವಿದೆ. ಎದ್ದು ಕೇಳು!
ಮೊಲೆದುಂಬಿರುವ ಹಾಲು
ನಿನಗಾಗಿ ಸುರಿಯುತಿದೆ;
ಅಲ್ಲ! ಹೊಯ್ಹಾಲಲ್ಲ! ಎದ್ದು ಏಳು!”
“ಇನ್ನು ನಿದ್ದೆಯೊಳಿಹನು;
ಬನ್ನ ಗೊಳಿಸಲು ಬೇಕು
ಚೆನ್ನಿಗನ; ಅಂದರೆಚ್ಚರಗೊಳುವನು!
ಮರದ ರೆಂಬೆಯಲಿರಿಸಿ
ಅರಿಯದೊಲು ಸಾಗಿದರೆ
ಮರುಚಣವೆ ಅರಮರವು ಮುಗಿದಳುವನು!”
“ಇದೊ! ಹರಿದೆ ಸೀರೆಯನು!
ಕೊಂಬೆಗಿದ ಕಟ್ಟುವೆನು-
ಎದೆಯ ಮಾಣಿಕ್ಯವನು, ಕರುಳ ಸೊದೆಯ;
ಕೊಂಬೆಗಳ ಗೂಡಿನಲಿ
ಇಂಬಾಗಿ ಇರಿಸಿಹೆನು;
ನಂಬುವಿಯೊ ಇಲ್ಲವೋ ಈ ಪ್ರಮದೆಯ?”
“ಹುಚ್ಚೆದ್ದು ಕಿತ್ತೋಡಿ
ಕಚ್ಚಿ ತುಟಿಯಲಿ ತುಟಿಯ
ಮುಚ್ಚು ಮರೆಯಿಲ್ಲದಲೆ ಮುತ್ತಿಡುವೆನು.
ಬಚ್ಚಿಟ್ಟು ಎದೆಯಲೆದೆ,
ಅಚ್ಚೊತ್ತಿ ಮೊಗದಿ ಮೊಗ,
ಎಚ್ಚರಿಯೆ ಕತ್ತಿನಲಿ ಕತ್ತಿಡುವೆನು.”
ಹೀಗಂದು ಸಾಗಿದಳು
ಮಗುವಿರಿಸಿ ಮರದಲ್ಲಿ
ಮರುಳಿ ಬರಬೇಕೆಂದು ಕರೆಯಲೊಡನೆ!
ಶವದ ಕರೆ ಕೇಳಿಸದು;
ಶವ ಕೂಡ ಕಾಣಿಸದು,-
ಮರುಮರುಳಿ ನೋಡುತಿರೆ ಮ್ಲಾನವದನೆ!
ಓಡಿ ಬಂದಳು ತಿರುಗಿ.
ನೋಡಿದರೆ ಮಗುವಿಲ್ಲ!
ಹಾಡಿಕೊಂಡಳುತಿದ್ದಳಾಕೆ ವನದಿ.
ಇನಿದಾದ ದನಿಯೊಂದು
ಮರದಲ್ಲಿ ಕೇಳಿ ಬರೆ
ನವ ಶಾಂತಿಯಂಕುರಿಸಿತವಳ ಮನದಿ!
೨
“ಮರದ ಒಳಮೆಯ್ಯಿಂದ ಬಂದ ಊರವವು
ಭೈರವನ ನಾಟ್ಯವಲ್ಲ.
ನನ್ನ ಪ್ರಾಣದ ಗಿಳಿಯು ಅಲ್ಲಿಂದ ನುಡಿಯುತಿರೆ
ಆದು ಏನು ಚೋದ್ಯವಲ್ಲ.”
“ಕನ್ನವುರವನು ನುಂಗಿ ಕಿವಿಯೆ ಹೊನ್ನಾದಂತೆ
ತರುವಿಗಿರೆ ಬಸಿರು ಬಯಕೆ,
ನನ್ನ ಹಸುಳನ ಧರಿಸಿ ಶ್ರೀಮಂತವಾಗಿಹುದು:
ಹಸಿರೆ ತಳಿರುಡಿಗೆಯದಕೆ.”
“ಕೇಳಿದೇನಚ್ಚರಿಯು! ಎಲೆ ಎಲೆಯು ಕರೆಯುತಿದೆ
‘ಎಲೆಲ್ಲೆ! ತಾಯ್! ನಿಲ್ಲು! ನಿಲ್ಲು!
ನೀ ಕೂರ್ತ ತಳಿರಾಗಿ ಭಳಿರೆಂದು ಬರುತಿಹೆನು?’
ಇದು ನನ್ನ ಕೂಸ ಸೊಲ್ಲು!”
“ಪ್ರಾಸಕನು ಪ್ರಾಸವಿರುವಂತೆ ಕೂಸದು, ತಾಯೆ!
ಗಳಿಗೆಯಾಟವು ಎಂದಿಗೂ!
ಬೀಜಮಂತ್ರಾಕ್ಷರದ ತೆರದಿ ಈ ತಳಿರಾಟ
ಹೊಸತಿಹುದು ಎಂದೆಂದಿಗೂ!”
“ಎಲೆ ಎಲೆಯು ನಗುತಿಹುದು; ಎಲೆ ಎಲೆಯು ಅಳುತಿಹುದು:-
ನನ್ನಣುಗನಳುವು ನಗುವು.
ಅಹಹ! ಚೀತನೆಗೊಂಡು ಮತ್ತೆ ಧಾವಿಸಿ ಬಂತೊ
ನನ್ನ ತಾಯ್ತನದ ಸೊಗವು!”
೩
“ಉದ್ಧರಿಸಿ ಉದ್ದಾರವಾಗುವಂತಹ ಮಹಿಮೆ
ಬಂತು ನಿನಗೆನ್ನ ಮಗು, ವಿದ್ಯಾಧರಾ!
ಇದ್ದೊಬ್ಬ ಕುವರನನು ಕಳಕೊಂಡ ಹಳವಂಡ
ಬಯಲಾಯ್ತು ನಿನ್ನ ಬರವಿಗೆ ಸೋದರಾ!”
“ಪರ್ಣೋಪಪರ್ಣವದು ಗಾನ ಹೊರಹೊಮ್ಮುತಿರೆ
ಕರ್ಣೋಪಕರ್ಣವಾಗಿರದೆ ತಾನು?
ನೂರೊಂದು ಗಿಳಿವಿಂಡು, ಕೋಕಿಲದ ಎಳೆವಿಂಡು,-
ಇವನ್ನೆಲ್ಲ ಮೇಲ್ಗಟ್ಟಿ ಬಾರದೇನು?”
“ಎಲೆಯ ಹಿಂದಕೆ ನಕ್ಕು ಮುಂದೆ ಹೆಜ್ಜೆಯನಿಕ್ಕು;
ಮೊಗ್ಗೆಯೆದೆಯಾಗುತ್ತ ಮೊಗವ ತೋರು!
ಸುಮನೋವಿಕಾಸದಲಿ ಮೃದುಹಾಸ ಸಿಕ್ಕಿರಲಿ;
ಸುಗ್ಗಿಯೆದೆನಾಡಿನಲಿ ಕಂಪು ಬೀರು!”
“ಮನಸಿಜ-ವಸಂತರನು ಗೆಳೆಯರನು ಮಾಡಿಕೊಳು;
ನಿನ್ನ ಮುದ್ದುಗಳೆಲ್ಲ ಮಧುರವಿರಲಿ.
ಬನದೇವಿಯರ ಕಂಡು ಮನ್ನಣೆಯನಿತ್ತು, ಬಾ;
ನಿನ್ನ ಮಾತುಗಳೆಲ್ಲ ಚೆದುರವಿರಲಿ!”
“ಈ ಹೆಮ್ಮರವ ಕಿತ್ತು ಮನೆಯ ತೋಟದಲಿಟ್ಟು
ದಿನವು ದನಿಯಾಲಿಸುತ ನಲಿಯಲೇನೆ?
ಆವರಿಗೀ ಪಾರಿಜಾತದ ಕತೆಯನುಸುರುತ್ತ
ಸಖಿಯರೊಡನೆಯೆ ಕಾಲ ಕಳೆಯಲೇನೆ?”
ಮರವು ಒಲ್ಲೆನ್ನುತಿದೆ; ಎಲೆಗಳನು ಕಂಪಿಸುತ
ಬಂಡನೆಬ್ಬಿಸುವಂತೆ ರೋದಿಸುವವು.
ಗಾಳಿವಂಡಿತನಲ್ಲಿ ಕಲಿತು ಬಂದವರಂತೆ
ಮತ್ತೆ ಹಲಕೆಲವಿನ್ನು ವಾದಿಸುವವು.”
“ಎಲ್ಲೆ ಸುತನಲ್ಲಿ ಮನೆ; ಲತೆಯಂತೆ ಬೆಳೆದಿಲ್ಲಿ
ನಿಲ್ಲಬಹುದಿರಲೀರ್ವರೊಂದೆ ಗುಟ್ಟು.
ಅವನ ಹೂಗಣೆಗೆನ್ನ ಕುಸುಮಗಳ ಮೊನೆ ಮಾಡಿ
ಹೂವ ತಲೆದುಡಿಗೆಯಲಿ ಕೈಯ್ಯನಿಟ್ಟು.”
“‘ಆ’ ಎ೦ದು ‘ಊ’ ಎಂದು ಮರವಂದು ಎಲೆಯಂದು
ನೆಲಗಾಳಿಯಂದಂದು ಇರಲು ದುಂದು,-
‘ಮಗುವೆ! ಜೋ! ಜೋ!’ ಎಂದು ಬಾಯಂದು ಮೆಯ್ಯಂದು
ತೆರಳಬಹುದಮ್ಮಯ್ಯ! ಜೀವವಂಡು!,
೪
ಎನಿತೊ ದಿನಗಳು ಬಂದು
ವನವಾಸ ಕಳೆದಿಹವು.
ಬನದಲಿಹಳಾ ತಾಯಿ ಸುತನ ಬಳಿಗೆ.
ಮಲ್ಲಿಗೆಯ ಮೆಯ್ಯವಳು
ಎಲ್ಲೆಯರಿತಿಹ ಸೆರಗ
ಮೆಲ್ಲನಿರಿಸುತ ನಡುಗದಿಹಳು ಚಳಿಗೆ!
ಪತಿ ಬಂದು ಯಾಚಿಸಿದ;
ಊರರಸ ಸೂಚಿಸಿದ;
ನೆರೆದ ಯೋಷಿತೆಯರತಿ ಯೋಚಿಸಿದರು.
ಮರವನೀಪರಿ ನೋಡಿ
ಏನು ಪಡೆದಿಹಳೇನೊ!
ಊರವರು ಬಂದು ಆಲೋಚಿಸಿದರು.
ಮೆಲ್ಲನೆಂದಳು ತಾಯಿ:
“ಇಲ್ಲಿಹುದು ಸ್ವನಿವಾಸ;
ಇಲ್ಲಿಹುದು ನನ್ನೆದೆಯು ತೆರೆದ ನಾಡು.
ಹುಚ್ಚಲ್ಲ, ಕಿಚ್ಚಲ್ಲ
ಹೆಚ್ಚೇನು ಹೇಳುವದು?
ನೆಚ್ಚುವದು. ದೇಶಕಿಲ್ಲಾವ ಕೇಡು.”
“ಕಂದಮೂಲಗಳನ್ನು
ತಿಂದು ತೀಗುವೆನಿಲ್ಲಿ.
ಮಂದಿ ತಂದಿಹುದನೇನೆಂದು ತಿಂಬೆ?
ಋತುವಿಗೊಂದೆಲೆಯಂತೆ
ಬಡಿಸಿ ತಂದಿಡಬಹುದು;
ಅದು ನಿಮ್ಮ ಮಮತೆಯ ಪ್ರಸಾದವೆಂಬೆ!”
ವ೦ದಿಸುತ ಕಳುಹಿದಳು
ಗಂಡನನು, ಹಿರಿಯರನು
ಉಂಡುಟ್ಟು ಬಾಳ್ವುದೆನೆ ಬಿನ್ನವಿಸುತ;
ಊರವರ ಬೀಳ್ಕೊಂಡು
ಮೀರಿ ಬಹ ಪ್ರೀತಿಯನು
ತೋರುತ್ತ ಕಂಗಳಲಿ, ಸಂತವಿಸುತ:
ಬಾಳಿದಳು ಮಾತಾಯಿ;
ಆಳಿದಳು ಬನವನ್ನು;
ಆಳಿದಳು ಜನತೆಯಾ ಸುಮನವನ್ನು!
ಆ ಮರದ ಬದಿಗೊಮ್ಮೆ
ಸುಳಿದೆಯಾದೊಡೆ, ಪಥಿಕ!
ಹೇ! ದೇವಿ! ನಿನಗೊಂದು ನಮನವೆನ್ನು!
೫
ಪಾರಿಜಾತದಡಿಯಲಿ
ಇಹುದದೋ ಸಮಾಧಿಯು!
ಅಲ್ಲಿ ಹೋಗಿ ತಿಳಿಯಲು
ಇಹುದೆ ನಿನಗೆ ಅವಧಿಯು?
ಅಲ್ಲಿ ಹಕ್ಕಿ ನುಡಿವುವು
ಕುಳಿತು ಮರದ ಕೊಂಬೆಗೆ;
ಗಾನ ಮುಡುಪಿದೆನುವವು
ನಮ್ಮ ನಾಡಿನಂಬೆಗೆ.
ಅಲ್ಲಿ ಪಾರಿಜಾತವು
ಸುರಿಸಿ ಸುಮನವೃಷ್ಟಿಯ,
ನುಡಿವುದಿಲ್ಲಿ ಫಲಿಸಿತು
ಫಲವು ದಿವ್ಯ ದೃಷ್ಟಿಯ.
ಅಲ್ಲಿ ಮಲ್ಲಿಕಾಲತೆ
ತಳಿರಗುಡಿಯನೇರಿಸಿ
ಸುತ್ತುತಿಹುದು ಮರವನು
ತನ್ನ ಮುಗುಳನರಳಿಸಿ.
ಒಯ್ಯನಲ್ಲಿ ಸುಳಿಯುವ
ಗಂಧವಹರು ಆಡುತ
ಕಂಡು ಆ ಸುಗಂಧಿಯ
ನಿಂತೆ ಇಹರು ನೋಡುತ.
ಅಲ್ಲಿ ಸೂರ್ಯ ಚಂದ್ರರು
ತಮ್ಮ ನಿತ್ಯ ಯಾತ್ರೆಯ
ನಿಲ್ಲಿಸುತ್ತ ಕಾಣ್ವರು
ದಿನವು ಆ ಪವಿತ್ರೆಯ!
ಪಾರಿಜಾತದಡಿಯಲಿ
ಇಹುದದೋ! ಸಮಾಧಿಯು.
ಅಲ್ಲಿ ಹೋಗಿ ತಿಳಿಯಲು
ಇಹುದೆ ನಿನಗೆ ಅವಧಿಯು?
*****
ಜಾನುವರಿ ೧೯೩೪















