ಮೂಲ: ರವೀಂದ್ರನಾಥ ಠಾಕೂರ್
ಗೀತಾಂಜಲಿ (He whom I enclose with thy name.. ಎಂಬ ಕಾವ್ಯಖಂಡ)

ಯಾರ ಬಳಸಿ ನಿಂತಿರುವೆನೊ
ನನ್ನ ಹೆಸರಿನಲ್ಲಿ,
ಅಳುತಿರುವನು ಸಿಲುಕಿ ಅವನು
ಈ ಕೂಪದಲ್ಲಿ.

ಹಗಲಿರುಳೂ ಮನಸುರಿದು
ಗೋಡೆಯೊಂದ ಸುತ್ತಲೂ
ಕಟ್ಟುತಿರುವೆ, ಚಕ್ರಬಂಧ
ಮುಟ್ಟುತ್ತಿದೆ ಮುಗಿಲು.

ಗೋಡೆಗೋಡೆ ನಡುವೆ ತೆರೆವ
ಕಾಳತಿಮಿರ ಕೂಪ,
ಮೆಲುಮೆಲ್ಲನೆ ನುಂಗುತ್ತಿದೆ
ನನ್ನ ನೈಜರೂಪ.

ಆದರೇನು ನನ್ನ ಕಣ್ಣು
ಗೋಡೆ ನೆತ್ತಿಯೆಡೆಗೆ,
ಹೆಮ್ಮೆ ಒಳಗೆ ಈ ಮಣ್ಣಲಿ
ಎತ್ತಿದಂಥ ನಿಲುವಿಗೆ;
ಸಣ್ಣದೊಂದು ಬಿರುಕು ಕೂಡ
ನನ್ನ ಹೆಸರ ಗೀರದಂತೆ
ಮಣ್ಣುಮರಳ ಒತ್ತಿಯೊತ್ತಿ
ಮೆತ್ತಿರುವೆನು ಗೋಡೆಗೆ

ಈ ಎಚ್ಚರ ಇಷ್ಟು ಶ್ರಮಕೆ
ಪಡೆದುದೇನು ಕಡೆಗೆ,
ಸರಿಯುತ್ತಿದೆ ನನ್ನ ನೈಜ –
ಬಿಂಬ ಕಣ್ಣ ಮರೆಗೆ!
*****