ಅವ್ವಾ ನೋಡಿರೆ! ಮಲ್ಲಾರಿ ಮಾರ್‍ತಂಡನ,
ಎಲ್ಲರನು ಗೆಲ್ಲಲು ನಿಂತ ಜಗಜಟ್ಟಿಯ.
ಅವ್ವಾ ನೋಡಿರೆ! ಗುಡ್ಡದ ಕುಮಾರಸ್ವಾಮಿಯ,
ದೇವರ ದಣ್ಣಾಯಕನ,
ಶಾಂತ ಸುಕುಮಾರ ಸುಬ್ಬಯ್ಯನ.
ಅವ್ವಾ ನೋಡಿರೆ! ಕುಳಿತಿರುವ ರತಿಯಿಲ್ಲದ ಕಾಮಣ್ಣನ
ನನ್ನ ತನುಜನಾಗಿ ಬಂದ ಅನಂಗನ.
ಅವ್ವಾ, ನೋಡಿರೆ! ಜೋಕುಮಾರನ,
ಬಡವರ ಬೆಂಬಲದವನ,
ಸಡಗರದ ಸೆಟ್ಟಿಯ.
ಆವ್ವಾ ನೋಡಿರೆ! ಸಿಂಗಾರದ ರಂಗನಾಯಕನ.
ಚೆಲುವ ಚೆನ್ನ ಕೇಶವನ,
ಮಲಗಿದ ಅನಂತಶಯನನ.
ಅವ್ವಾ ನೋಡಿರೆ! ಭೂವೈಕುಂಠನಿವಾಸಿ.
ವೆಂಕಟರಮಣನ
ತೆರೆಗೈ ತಿರಕನ.
ಅವ್ವಾ ನೋಡಿರೆ! ಮುದ್ದು ವಿಠಲನ,
ದಾಸರ ದಾಸನ, ಟೊಂಕದ ಮೇಲೆ ಕೈಯಿಟ್ಟವನ.
*****


















