ಬಾಳ್ಗಡಲು ಕೆರಳಿಹುದು, ಕಾರಿರುಳು ಬೆಳೆದಿಹುದು
ಮನದ ಮನೆಯಲಿ ಭೀತಿ ನಡುಗುತಿಹುದು
ನೀಲಿಮಾಪಥದಲ್ಲಿ ಅಭ್ರರಥ ತಾರೆಗಳ
ತುಳಿದರೆದು ಬಾನೆದೆಯ ಸೀಳಿರುವುದು
ಅಪ್ಪಿ ತಿರೆಯೆದೆಯನ್ನು ತೆಪ್ಪಗಿಹ ಮೆಲುಗಾಳಿ
ನೂರು ನಾಲಗೆ ಚಾಚಿ ಒದರುತಿಹುದು
-‘ಗುಡ್ಡಗಳ ಚಲಿಸುವೆನ್ಮು ಕಡಲನ್ನು ಕಡೆಯುವೆನು
ಸ್ವರ್ಗಸಿಂಹಾಸನವ ನಡುಗಿಸುವೆನು’
ಕಡಲತೆರೆ ಹುಚ್ಚೆದ್ದು ಹಾವಿನೊಲು ಹೆಡೆಗಳನು
ಅಪ್ಪಳಸಿ ಅಬ್ಬರಿಸಿ ಮುತ್ತುತಿಹವು
ಮರಣ ಜಿವ್ಹೆಯ ಹಾಗೆ ತುತ್ತಲಿಕೆ ಸುತ್ತಿಹವು
ತಮ್ಮ ಬಲೆಯನು ಹರಡಿ, ಎಳೆಯುತಿಹವು.
ನನ್ನ ಈ ಕಿರಿ ನಾವೆ ಹಿರಿಗಡಲ ಮಡಿಲಲ್ಲಿ
ಏಳುತ್ತ ಮುಳುಗುತ್ತ ತೇಲುತಿಹುದು
ನೀರಗೋರಿಯ ಕಂಡ ನೂರು ನಾವೆಯಕಂಡು
ತತ್ತರಿಸಿ ಒಳಗೊಳಗೆ ಕುಸಿಯುತಿಹುದು.
ತೆರೆಗೆ ತುತ್ತಾಗುವುದೊ? ದೈವರಕ್ಷಿತವಾಗಿ
ದಂಡೆಯಲಿ ಬಂದರವ ಸೇರಬಹುದೊ?
-ದಿಗ್ಭ್ರಾಂತ ನಿರೆಯಿಂತು ಆಕಾಶದಂಚಿನಲಿ
ಹೊನ್ನ ಹೊಳೆಯೊಲು ಕಾಂತಿ ಹೊಮ್ಮುತಿಹುದು
ಬಾನ್ನೀರ ಚುಂಬನದ ಚೆಲುವು ನೈದಿಲೆಯಲ್ಲಿ
ಕಿರಣ ಪಿಚ್ಛವ ಹರಡಿ ಕುಳಿತಿರುವನು
ದೇವನೋ ಯಕ್ಷನೋ, ಸ್ವಪ್ನ ಮಂದಿರ ರಚಿಸಿ
ಸಾಹಸಕೆ ಕರೆಯುತಿಹ ಶಿಲ್ಪಿವರನು.
ಅದುವೆನಗೆ ನಿತ್ಯವೂ ಧೈರ್ಯ, ಜೀವನ ಸ್ಫುರಣ,
ಆಸೆಗಳ ಚಿರವಾದ ಸುಮಬಂಧನ.
ಅದ ನೋಡಿದೀ ನಾವೆ ಪಕ್ಕಗಳ ಹರಡುವುದು
ನೀರ್ವಕ್ಕಿಯೊಲು ನೆಗೆದು ಮುನ್ನಡೆವುದು.
*****



















