೧೯೫೪ರಲ್ಲಿ ಬಿಡುಗಡೆಯಾದ ‘ಬೇಡರ ಕಣ್ಣಪ್ಪ’ ಕನ್ನಡ ಚಿತ್ರೋದ್ಯಮಕ್ಕೆ ಅಭೂತಪೂರ್ವ ತಿರುವು ನೀಡಿತು. ಕುಂಟುತ್ತಾ ಸಾಗಿದ್ದ ಚಿತ್ರೋದ್ಯಮ ಈ ಚಿತ್ರ ತೆರೆಕಂಡ ನಂತರ ತನ್ನ ವೇಗವನ್ನು ವೃದ್ಧಿಸಿಕೊಂಡಿತು. ಜಿನುಗುವ ಹಳ್ಳವಾಗಿದ್ದ ಚಿತ್ರರಂಗ ಜೀವನದಿಯಾಗಿ ಹರಿಯಲಾರಂಭಿಸಿತು. ಕನ್ನಡಚಿತ್ರರಂಗದ ಅಸ್ಮಿತೆಯೊಂದು ಆರಂಭವಾಗಿದ್ದೇ ಈ ಚಿತ್ರದಿಂದ. ಗಲ್ಲಾಪೆಟ್ಟಿಗೆಯಲ್ಲೂ ಯಶಸ್ಸು ಸಾಧಿಸಿದ ‘ಬೇಡರ ಕಣ್ಣಪ್ಪ’ ಅಂಧಕಾರದಲ್ಲಿ ಎಡವಿ ಸಾಗುತ್ತಿದ್ದ ಚಿತ್ರರಂಗಕ್ಕೆ ಬೆಳಕಾಯಿತು.
೧೯೩೪ರಿಂದ ಆರಂಭವಾದ ಕನ್ನಡ ಚಿತ್ರರಂಗದಲ್ಲಿ ‘ಬೇಡರ ಕಣ್ಣಪ್ಪ’ ಚಿತ್ರ ಬಿಡುಗಡೆಯಾಗುವವರೆಗೂ (೧೯೫೪) ಎರಡು ದಶಕದಲ್ಲಿ ಕೇವಲ ನಲವತ್ತು ಚಿತ್ರಗಳನ್ನು ಮಾತ್ರ ತಯಾರಾಗಿದ್ದವು. ಕಣ್ಣಪ್ಪ ಬಿಡುಗಡೆಯಾದ ಮುಂದಿನ ಇಪ್ಪತ್ತು ವರ್ಷಗಳಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ ೩೯೪ಕ್ಕೇರಿತು ಎಂದರೆ ಚಿತ್ರೋದ್ಯಮದಲ್ಲಾದ ಬದಲಾವಣೆಯ ಚಿತ್ರಣವೊಂದು ಸ್ಪಷ್ಟವಾಗುತ್ತದೆ. ಕನ್ನಡ ಚಲನಚಿತ್ರರಂಗದ ಔನ್ನತ್ಯಕ್ಕೆ ‘ಬೇಡರ ಕಣ್ಣಪ್ಪ’ ಚಿತ್ರವೇ ಏಕೈಕ ಕಾರಣವೆಂದು ಹೇಳುವುದು ಅತಿಶಯೋಕ್ತಿ ನಿಜ. ಆದರೆ ಚಿತ್ರೋದ್ಯಮಕ್ಕೆ ಬೇಕಾದ ಕಸುವನ್ನು ಈ ಚಿತ್ರ ನೀಡಿತೆಂಬುದರಲ್ಲಿ ಎರಡು ಮಾತಿಲ್ಲ.
‘ಬೇಡರ ಕಣ್ಣಪ್ಪ’ ಚಿತ್ರದ ಯಶಸ್ಸಿನ ಹಿಂದೆ ಅನೇಕ ಅಂಶಗಳಿವೆ. ಅದಾಗಲೇ ರಂಗಭೂಮಿಯಲ್ಲಿ ಯಶಸ್ಸು ಕಂಡಿದ್ದ ಈ ನಾಟಕವನ್ನು ತೆರೆಗೆ ತರಲು ಗುಬ್ಬಿ ವೀರಣ್ಣನವರು ಆಶಿಸಿದ್ದರು. ತಮ್ಮ ಗುಬ್ಬಿ ಕರ್ನಾಟಕ ಫಿಲಂಸ್ ಸಂಸ್ಥೆಯ ಮೂಲಕ ಈ ಚಿತ್ರವನ್ನು ತಯಾರಿಸಲು ನಿರ್ಧರಿಸಿದರು. ಅದರಂತೆ ರಂಗಭೂಮಿ-ಸಿನಿಮಾ ಕ್ಷೇತ್ರದ ನಿಕಟ ಸಂಪರ್ಕ ಹೊಂದಿದ್ದ ಹಾಗೂ ತಮ್ಮ ಹಿಂದಿನ ನಿರ್ಮಾಣ ‘ಗುಣ ಸಾಗರಿ’ಯನ್ನು ನಿರ್ದೇಶಿಸಿದ್ದ ಎಚ್.ಎಲ್.ಎನ್.ಸಿಂಹರವರೇ ‘ಬೇಡರ ಕಣ್ಣಪ್ಪ’ ಚಿತ್ರವನ್ನು ನಿರ್ದೇಶಿಸಲು ಆಯ್ಕೆ ಮಾಡಿದರು. ಆಗಿನ್ನೂ ನಾಟಕರಂಗದಲ್ಲಿ ‘ಎಸ್.ಪಿ.ಮುತ್ತುರಾಜ’ನಾಗಿದ್ದ ಕಲಾವಿದನನ್ನು ಕರೆತಂದು ನಾಯಕನ ಪಾತ್ರ ನೀಡಿದರು. ಮುಂದೆ ಕನ್ನಡಿಗರ ಮನೆಮಾತಾದ ‘ರಾಜ್‌ಕುಮಾರ್’ ಎಂದು ನಾಮಕರಣ ಮಾಡಿದರು. ಜೊತೆಗೆ ಮತ್ತೊಬ್ಬ ನಟ ಟಿ.ಆರ್.ನರಸಿಂಹರಾಜು ಅವರನ್ನೂ ಚಿತ್ರರಂಗಕ್ಕೆ ಪರಿಚಯಿಸಿದರು. ಚಿತ್ರರಂಗದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಜಿ.ವಿ.ಅಯ್ಯರ್ ಮತ್ತೊಂದು ಮುಖ್ಯ ಭೂಮಿಕೆಯನ್ನು ನಿರ್ವಹಿಸಿದರು. ನಾಯಕಿಯಾಗಿ ಎಂ. ಪಂಡರೀಬಾಯಿ ಸೇರ್ಪಡೆಯಾದರು.
ಇದೊಂದು ಶುಷ್ಕ ಮಾಹಿತಿ ಮಾತ್ರ. ಆದರೆ ಈ ಎಲ್ಲರ ಸಂಗಮದಿಂದ ತಯಾರಾದ ಚಿತ್ರ ಮಾತ್ರ ಇಂದಿಗೂ ಹೊಸತೆನ್ನುವ ರೀತಿಯಲ್ಲಿ ಕಾಣಿಸುವುದರ ಹಿಂದೆ ಅನೇಕ ಸಂಗತಿಗಳಿವೆ. ಇದೊಂದು ಭಕ್ತಿ ಪ್ರಧಾನ ಚಿತ್ರ. ಈ ಚಿತ್ರ ನಿರ್ಮಾಣವಾಗುವ ಮೊದಲೂ ‘ಪುರಂದರದಾಸ’ (೧೯೩೭), ‘ಭಕ್ತ ಪ್ರಹ್ಲಾದ’ (೧೯೪೨), ‘ಹೇಮರೆಡ್ಡಿ ಮಲ್ಲಮ್ಮ’ (೧೯೪೫), ‘ಮಹಾತ್ಮಾ ಕಬೀರ್’ (೧೯೪೭), ‘ಭಕ್ತ ರಾಮದಾಸ’, ‘ಭಕ್ತ ಕುಂಬಾರ’ (೧೯೪೮) ಮತ್ತು ‘ಸತಿ ತುಳಸಿ’ (೧೯೪೯) ಎಂಬ ಏಳು ಭಕ್ತಿ ಪ್ರಧಾನ ಚಿತ್ರಗಳು ಬಿಡುಗಡೆಯಾಗಿದ್ದವು. ‘ಹೇಮರೆಡ್ಡಿ ಮಲ್ಲಮ್ಮ’ ಚಿತ್ರವನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಹರಿಭಕ್ತಿ ಪ್ರಚಾರದ ಕತೆಯ ಚಿತ್ರಗಳು. ‘ಬೇಡರ ಕಣ್ಣಪ್ಪ’ ಮಾತ್ರ ಶಿವಭಕ್ತನ ಕತೆಯ ಚಿತ್ರ. ಇಂದಿಗೂ ‘ಬೇಡರ ಕಣ್ಣಪ್ಪ’ ಭಕ್ತಿಪ್ರಧಾನ ಚಿತ್ರಗಳಲ್ಲಿ ಒಂದು ಮಾನದಂಡವಾಗಿ ಅಂಗೀಕೃತವಾಗಿದೆ. ಭಕ್ತಿಗಂಧದ ಎಲ್ಲ ಸೂಕ್ಷ್ಮತೆಗಳನ್ನು ಈ ಚಿತ್ರ ಅರಗಿಸಿ ಕೊಂಡ ಕಾರಣಕ್ಕೆ ಅದು ಕನ್ನಡ ಚಿತ್ರರಂಗದ ಮೈಲುಗಲ್ಲಾಗಿ ನಿಂತಿದೆ.
ಭಾರತೀಯ ಸಂಸ್ಕೃತಿ, ಅದರಲ್ಲೂ ಕರ್ನಾಟಕದ ಸಾಹಿತ್ಯ-ಸಂಸ್ಕೃತಿಯ ಸಂದರ್ಭದಲ್ಲಿ ಭಕ್ತಿಪಂಥ ಮತ್ತು ಸಾಹಿತ್ಯಕ್ಕೆ ವಿಶಿಷ್ಟವಾದ ಸ್ಥಾನವಿದೆ. ಯಜಮಾನ ಧರ್ಮವೊಂದು ತನ್ನ ಕಠೋರತೆಯಿಂದ ಜನವಿಮುಖವಾದಾಗ ಅದನ್ನು ಜನಮುಖಿಯಾಗಿಸಿದ್ದು ಭಕ್ತಿ ಪಂಥ. ಮಠಮಾನ್ಯಗಳ, ದೇವಸ್ಥಾನಗಳ ಗರ್ಭಗುಡಿಯಲ್ಲಿ ರೂಪುಗೊಂಡ ಧಾರ್ಮಿಕ ರೀತಿ ರಿವಾಜುಗಳು ತಮ್ಮ ಮಡಿವಂತಿಕೆ ಮತ್ತು ಸಂಪ್ರದಾಯಶರಣತೆಯಿಂದಾಗಿ ಮಾನವ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಬಾಳಬಂಧನಕಾರಿ ವ್ಯವಸ್ಥೆಯನ್ನು ರೂಪಿಸಿದಂಥವು. ತಳಸಮುದಾಯಗಳಿಗೆ ದೇವರು, ಅಧ್ಯಾತ್ಮವನ್ನು ನಿರಾಕರಿಸಿದಂಥವು. ಈ ಬಂಧನಕಾರಿ ವ್ಯವಸ್ಥೆಗೆ ಪ್ರತಿರೋಧ ಒಡ್ಡಿದ್ದೇ ಭಕ್ತಿ ಪಂಥ. ಭಕ್ತರು ಕಟ್ಟಡಗಳ ಚೌಕಟ್ಟಿನಲ್ಲಿದ್ದ ದೈವವನ್ನು ನಿರಾಕರಿಸಿ ಬಯಲಿನಲ್ಲಿ ದೇವರನ್ನು ಅರಸಿದವರು. ಯಾವ ಧರ್ಮವು ಶ್ರಮವನ್ನೂ ಕೀಳಾಗಿ ಕಂಡಿತೋ, ಅಂಥ ಕಾಯಕವನ್ನೇ ಆರಾಧಿಸಿದ ಅವರು ಸಾಂಸ್ಥಿಕ ಧರ್ಮದ ವಿರುದ್ಧ ಬಂಡಾಯವೆದ್ದವರು. ದೇವರನ್ನು ತಲುಪುವ ಪರ್ಯಾಯ ಮಾರ್ಗವನ್ನು ಅನ್ವೇಷಿಸಿದವರು. ‘ಮೋಕ್ಷ’ ಎಂಬ ವೈಯಕ್ತಿಕ ಬಿಡುಗಡೆಯ ಗುರಿಯಿದ್ದ ಧರ್ಮವನ್ನು ಸಮುದಾಯದ ವಿಮೋಚನೆಗೆ ಎಳೆತಂದವರು. ಹಾಗಾಗಿ ಸಾಂಸ್ಥಿಕ ಧರ್ಮಕ್ಕೆ ತಣ್ಣನೆಯ ಪ್ರತಿರೋಧವನ್ನು ಒಡ್ಡಿ ದೇವರು, ಧರ್ಮವನ್ನು ಬಯಲಿಗೆ ಎಳೆತಂದು ಆರಾಧಿಸಿದ ತಳಸಮುದಾಯದ ಸಂತರ ಬಗ್ಗೆ ಜನರಲ್ಲಿ ಆಳದಲ್ಲೆಲ್ಲೋ ಅನುಕಂಪವಿದೆ, ಪ್ರೀತಿಯಿದೆ, ಗೌರವವಿದೆ. ಆ ಕಥನವನ್ನು ಸಮುದಾಯಕ್ಕೆ ಮನದಟ್ಟು ಮಾಡುವ ರೀತಿಯಲ್ಲಿ ‘ಬೇಡರ ಕಣ್ಣಪ್ಪ’ ರೂಪುಗೊಂಡಿತ್ತು. ಆದ್ದರಿಂದ ಅದು ಗೆದ್ದು, ಭಕ್ತಿಪ್ರಧಾನ ಚಿತ್ರಗಳ ಪರಂಪರೆಯನ್ನೆ ಹುಟ್ಟುಹಾಕಿತು. ಆದರೆ ಈ ತಳಸಮುದಾಯಗಳ ಸಂತರ ವಿಜಯವನ್ನು ನಿರಾಕರಿಸದ ಸಾಂಸ್ಥಿಕ ಧರ್ಮ ಅವರ ಔನ್ನತ್ಯಕ್ಕೆ ಅವರ ಹಿಂದಿನ ಜನ್ಮದ ಶ್ಲೇಷಾಂಶಗಳು, ದೈವಾಂಶಗಳು ಮುಖ್ಯ ಕಾರಣವೆಂಬ ತರ್ಕವನ್ನು ಜೋಡಿಸಿ ತನ್ನ ತೆಕ್ಕೆಗೇ ಎಳೆದುಕೊಂಡು ಅವರನ್ನು ಪುಣ್ಯೀಕರಿಸಿದ ಚರ್ಚೆ ಇಲ್ಲಿ ಅನಗತ್ಯ. ಯಾಕೆಂದರೆ ಕಣ್ಣಪ್ಪನಿಗಾಗಲೀ, ಗೋರ, ಕನಕ, ಕಾಳಿದಾಸನಿಗಾಗಲೀ, ಅವನ ಸ್ವಪ್ರಯತ್ನಕ್ಕಿಂತ ‘ದೈವ ಕೃಪೆ’ಯ ಅಂಶಗಳಿಂದಲೇ ಸಾರ್ಥಕ್ಯ ಪಡೆವುದು ಸಾಧ್ಯವಾಯಿತೆಂಬ ಉಪಕತೆಗಳು ಎಲ್ಲ ಸಂತರ ಬದುಕಿಗೆ ಅಂಟಿಕೊಂಡಿವೆ. ಈ ಸಾಂಸ್ಕೃತಿಕ ರಾಜಕಾರಣ ಇತಿಹಾಸದುದ್ದಕ್ಕೂ ಅಡೆತಡೆಯಿಲ್ಲದೆ ನಡೆದು ಬಂದಿದೆ. ಬುದ್ಧ ದಶಾವತಾರದ ಸರಣಿಯಲ್ಲಿ ಸೇರಿಕೊಂಡದ್ದೂ ಹಾಗೆಯೇ! (ಇತ್ತೀಚಿನ ಉದಾಹರಣೆಯೊಂದು ಇಲ್ಲಿದೆ. ಎಲ್ಲ ತಳ ಸಮುದಾಯಗಳಿಗೂ ವಿವೇಚನೆಯನ್ನು ಬೋಧಿಸಿ, ವಿಮೋಚನೆಯ ಹಾದಿಯನ್ನು ತೋರಿದ ಮತ್ತು ಧರ್ಮ ಕಠೋರತೆಯನ್ನು ಖಂಡಿಸಿ ಬಯಲನ್ನೇ ಆಲಯವಾಗಿ ಮಾಡಿಕೊಂಡ ಕೈವಾರ ನಾರಣಪ್ಪನನ್ನು ರಾಮಾನುಜಾಚಾರ್ಯರ ಅವತಾರವೆಂದು ಒಪ್ಪಿಸುವ ಕಾರ್ಯ ಈಗ ಭರದಿಂದ ಸಾಗುತ್ತಿರುವ ಪರಿ ನೋಡಿದರೆ ನಮ್ಮ ಹಿಂದಿನ ಕೆಳವರ್ಗದ ಸಂತರ ಬದುಕಿಗಾಗಿರಬಹುದಾದ ಅನಾಹುತ ಅರ್ಥವಾದೀತು).
ಅದೇನೇ ಇರಲಿ, ‘ಬೇಡರ ಕಣ್ಣಪ್ಪ’ ಭಕ್ತಿ ಪಂಥದ ಎಲ್ಲ ಗುಣಗಳನ್ನು ಅಭಿವ್ಯಕ್ತಿಸಿದ ಚಿತ್ರ. ತಳಸಮುದಾಯದ ವ್ಯಕ್ತಿಯೊಬ್ಬ ವ್ಯವಸ್ಥೆಯ ಕಾಠಿಣ್ಯದಿಂದ ಬಹಿಷ್ಕೃತನಾಗುವುದು; ತನ್ನ ಬದುಕನ್ನು ಕಟ್ಟಿಕೊಳ್ಳಲು ಬಹಿಷ್ಕೃತ ವ್ಯಕ್ತಿಯೊಬ್ಬ ನಡೆಸುವ ಹೋರಾಟ; ವ್ಯವಸ್ಥೆಯ ಮೇಲೆ ನಂಬಿಕೆಯನ್ನು ಕಳೆದುಕೊಂಡು ನಿರೀಶ್ವರವಾದಿಯಾದ ಬೇಡನು ಕ್ರಮೇಣ ದೇವರ ಅನುಗ್ರಹವನ್ನು ಕಂಡುಕೊಳ್ಳುವುದು; ಬೇಡನೊಬ್ಬನ ಕಾಯಕ ಮತ್ತು ಆರಾಧನೆ ಪುರೋಹಿತಶಾಹಿಯ ಅಪಹಾಸ್ಯ ಮತ್ತು ನಿಂದನೆಗೆ ಒಳಗಾಗುವುದು; ಭಕ್ತಿಯ ಗಾಢತೆಯನ್ನು ಜನರಿಗೆ ತಿಳಿಸಲು ದೇವರು ಒಡ್ಡುವ ಕಠಿಣ ಪರೀಕ್ಷೆಯಲ್ಲಿ ಭಕ್ತ ವಿಜಯಿಯಾಗುವುದು… ಹೀಗೆ ಸಹಿಷ್ಣುತೆ, ಆತ್ಮವೇದನೆ, ಆತ್ಮ ಬಲಿದಾನ, ಧರ್ಮ ಜಿಜ್ಞಾಸೆ, ಭಕ್ತಿಯ ಸರಳತೆ-ಸಜ್ಜನಿಕೆ ಮತ್ತು ಸಮುದಾಯದ ವಿಮೋಚನೆಯ ದಾರಿಗಳನ್ನು ತಣ್ಣಗೆ ಈ ಚಿತ್ರ ಪಡಿ ಮೂಡಿಸುತ್ತದೆ.
ಮೊದಲಬಾರಿಗೆ ನಾಯಕರಾದ ರಾಜ್‌ಕುಮಾರ್ ಅವರಿಗೆ ಈ ಚಿತ್ರದಲ್ಲಿ ಎಲ್ಲ ಬಗೆಯ ರಸಗಳನ್ನು ಅಭಿವ್ಯಕ್ತಿಸುವ ಅವಕಾಶ ಸಿಕ್ಕಿದೆ. ಗಂಧರ್ವ ಮಣಿವಂತನಾಗಿ, ದಿಣ್ಣನಾಗಿ, ಕಣ್ಣನಾಗಿ ರಾಜ್ ಅವರ ಅಭಿನಯ ಇಂದಿಗೂ ಅಭ್ಯಾಸಯೋಗ್ಯ. ತಾನು ಮಾಡದ ತಪ್ಪಿಗಾಗಿ ಬೇಡರ ಹಟ್ಟಿಯಿಂದ ಬಹಿಷ್ಕೃತನಾದ ನಂತರ ಪ್ರಕೃತಿಯ ರೋಷಾವೇಶಗಳನ್ನು ಎದುರಿಸಿ ಗೂಡು ನಿರ್ಮಿಸುವ ದೃಶ್ಯ; ತನ್ನ ಹೆಂಡತಿ ನೀಲಾ ದೇವರ ಬಗ್ಗೆ ಅಭಿಮಾನದಿಂದ ಮಾತನಾಡುವಾಗ ಅವನಲ್ಲಿ ವ್ಯಕ್ತವಾಗುವ ನಿರೀಶ್ವರವಾದಿಯ ವ್ಯಗ್ರತೆ; ಅಸಹಾಯಕ ಪರಿಸ್ಥಿತಿಗಳಲ್ಲಿನ ನೋವು- ರಾಜ್ ಅಭಿನಯಕ್ಕೆ ಅವರೇ ಸಾಟಿ. ಒಮ್ಮೆ ತನ್ನ ವ್ಯಗ್ರತೆಯನ್ನೆಲ್ಲ ಕಳೆದುಕೊಂಡು ಶಿವನ ಕೃಪೆಗೆ ಒಳಗಾದ ನಂತರ ಅವರು ಭಕ್ತನಾಗಿಯೇ ಬದಲಾಯಿಸಿಬಿಟ್ಟಿದ್ದಾರೆ. ಇಂದಿಗೂ ಭಕ್ತಿ ಪ್ರಧಾನ ಚಿತ್ರಗಳಲ್ಲಿ ರಾಜ್‌ರವರ ಅಭಿನಯವನ್ನು ಮೀರಿಸುವ ಕಲಾವಿದರು ಕಾಣಿಸಿಲ್ಲ ಎಂಬುದು ಈ ಕಾರಣಕ್ಕಾಗಿಯೇ.
ಇದೇ ಚಿತ್ರದಲ್ಲಿ ನೀಲಾಳಾಗಿ ಪಂಡರೀಬಾಯಿಯವರು ಮತ್ತು ಕಾಶಿ ಪಾತ್ರದಲ್ಲಿ ನರಸಿಂಹರಾಜು ಹಾಗೂ ಕೈಲಾಸನಾಥ ಶಾಸ್ತ್ರಿ ಪಾತ್ರದಲ್ಲಿ ಜಿ.ವಿ.ಅಯ್ಯರ್ ನೀಡಿರುವ ಅಭಿನಯ, ಆ ಚಿತ್ರವನ್ನು ನೋಡಿಯೇ ಸವಿಯಬೇಕು. ನರಸಿಂಹರಾಜು ಅವರು ನಗೆಯುಕ್ಕಿಸುತ್ತಿದ್ದರೆ, ನಗೆಯ ಹಿಂದಿರುವ ಕುತಂತ್ರವನ್ನು ಅಭಿವ್ಯಕ್ತಿಸುವ ಶಾಸ್ತ್ರಿಯ ಪಾತ್ರದಲ್ಲಿ ಜಿ.ವಿ.ಅಯ್ಯರ್ ಅಮೋಘ ಅಭಿನಯ ನೀಡಿದ್ದಾರೆ.
‘ಬೇಡರ ಕಣ್ಣಪ್ಪ’ ಚಿತ್ರದ ಮತ್ತೊಂದು ಹೆಗ್ಗಳಿಕೆಯೆಂದರೆ ಅದರ ಅದ್ಭುತ ಸಂಕಲನ. ದಿಣ್ಣ ಮತ್ತು ನೀಲರ ಮದುವೆಯ ಸಂದರ್ಭದಲ್ಲಿ ಕೇವಲ ಸಂಗೀತಕ್ಕೆ ಹೆಜ್ಜೆ ಹಾಕುವ ಬೇಡರ ಸಮೂಹ ನೃತ್ಯವಿದೆ. ಸುಮಾರು ಹದಿನಾರು ಕೋನಗಳಲ್ಲಿ ಲಾಂಗ್, ಮಿಡ್‌ಷಾಟ್ ಮತ್ತು ಕ್ಲೋಸ್‌ಅಪ್‌ಗಳಲ್ಲಿ ಚಿತ್ರಿಸಿರುವ ಈ ನೃತ್ಯವು ಸಂಕಲನದ ಕೌಶಲ್ಯದಿಂದಾಗಿ ಆಕರ್ಷಕವಷ್ಟೇ ಅಲ್ಲ ಬೆರಗುಮೂಡಿಸುತ್ತದೆ. ಪ್ರಾಯಶಃ ಆ ಕಾಲಕ್ಕೆ ತಮಿಳಿನ ‘ಚಂದ್ರಲೇಖಾ’ ಚಿತ್ರದಲ್ಲಿರುವ ‘ಡ್ರಂ ಡ್ಯಾನ್ಸ್’ ಬಿಟ್ಟರೆ ಇಷ್ಟೊಂದು ದೀರ್ಘವಾದ ಹಾಗೂ ಅಪರೂಪದ ನೃತ್ಯ ಸಂಯೋಜನೆಯ ದೃಶ್ಯ ಭಾರತೀಯ ಚಿತ್ರರಂಗಗಳಲ್ಲಿ ಅಳವಡಿಸಿದ್ದ ಉದಾಹರಣೆ ಸದ್ಯಕ್ಕೆ ನೆನಪಾಗದು. ಇಡೀ ಚಿತ್ರವೇ ಆ ಕಾಲಕ್ಕೆ ಅತ್ಯಾಧುನಿಕವೆನ್ನಬಹುದಾದ ರೀತಿಯಲ್ಲಿ ಸಂಕಲನಗೊಂಡಿದೆ. ಆರ್. ಸುದರ್ಶನಂ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ‘ಶಿವಪ್ಪ ಕಾಯೋ ತಂದೆ’, ‘ಕಾಯೋ ತಂದೆಯೇ…’, ‘ಮಾಯೆಗೆ ಸಿಲುಕಿ ಮರುಳಾದೆ ಮನುಜ…’ ಇತ್ಯಾದಿ ಗೀತೆಗಳ ಜನಪ್ರಿಯತೆಗೆ ಇಂದಿಗೂ ಕುಂದುಂಟಾಗಿಲ್ಲ. ‘ಬೇಡರ ಕಣ್ಣಪ್ಪ’ ಚಿತ್ರದ ಯಶಸ್ಸಿನ ಹಿಂದೆ ಹಾಡುಗಳ ಕಾಣಿಕೆಯೂ ಕಡಿಮೆಯಿಲ್ಲ.
ಹೀಗೆ ತನ್ನ ವಿಶಿಷ್ಟತೆಯಿಂದಾಗಿ ಏಕೀಕರಣಕ್ಕೆ ಮುನ್ನ ಬಿಡುಗಡೆಯಾದ ‘ಬೇಡರ ಕಣ್ಣಪ್ಪ’ ನಾಡಿನಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಂಡಿತು. ಕರ್ನಾಟಕದ ಏಕೀಕರಣಕ್ಕೂ ಒಂದು ಬಗೆಯ ಮುನ್ನುಡಿ ಬರೆಯಿತು.
ಸೈಡ್ ರೀಲ್
‘ಬೇಡರ ಕಣ್ಣಪ್ಪ’ ಚಿತ್ರದ ನಂತರ ರಾಜ್‌ರವರಿಗೆ ಹೆಚ್ಚು ಅವಕಾಶಗಳು ಬರಲಿಲ್ಲ. ಕನ್ನಡದಲ್ಲಿ ಕಂಡ ಯಶಸ್ಸಿನಿಂದ ಉತ್ತೇಜಿತರಾದ ನಿರ್ಮಾಪಕ ಡಾ. ಗುಬ್ಬಿ ವೀರಣ್ಣನವರು ತೆಲುಗು ಭಾಷೆಯಲ್ಲಿಯೂ ಅದನ್ನು ಅದೇ ವರ್ಷ ನಿರ್ಮಿಸಲು ಸಿದ್ಧತೆ ಮಾಡಿಕೊಂಡರು. ಮೂಲ ನಿರ್ದೇಶಕ ಎಚ್.ಎಲ್.ಎನ್. ಸಿಂಹ ಅವರೇ ಸೂತ್ರ ಹಿಡಿದರು. ‘ಕಣ್ಣಪ್ಪ’ನ ಪಾತ್ರಕ್ಕೆ ರಾಜ್‌ರವರನ್ನೇ ಆಯ್ಕೆ ಮಾಡಲಾಯಿತು. ಮೂಲ ಚಿತ್ರದಲ್ಲಿ ಪಾತ್ರವಹಿಸಿದ್ದ ಎಚ್. ರಾಮಚಂದ್ರ ಶಾಸ್ತ್ರಿ (ಶಿವ), ದಾಸಪ್ಪ (ದೊಡ್ಡಯ್ಯ) ಎಸ್.ಆರ್. ರಾಜು (ರಾಮಯ್ಯ), ಎಂ.ಆರ್. ನಂಜಪ್ಪ ಮೊದಲಾದವರು ತೆಲುಗು ಅವತರಣಿಕೆಯಲ್ಲೂ ಅದೇ ಪಾತ್ರಗಳನ್ನೇ ವಹಿಸಿದರು. ರಾಜ ಸುಲೋಚನಾ (ಚಿಂತಾಮಣಿ ಪಾತ್ರ) ಬಿಟ್ಟರೆ ಉಳಿದ ಕಲಾವಿದರೆಲ್ಲ ತೆಲುಗು ಕಲಾವಿದರು. ನಾಯಕಿ ನೀಲಾ ಪಾತ್ರ(ಮೂಲದಲ್ಲಿ ಪಂಡರೀಬಾಯಿ)ವನ್ನು ಕೆ. ಮಾಲತಿ ವಹಿಸಿದರೆ ಕೈಲಾಸನಾಥ ಶಾಸ್ತ್ರಿಯ ಪಾತ್ರವನ್ನು ಎಂ. ಲಿಂಗಮೂರ್ತಿ (ಜಿ.ವಿ. ಅಯ್ಯರ್), ಕಾಶಿ ಪಾತ್ರವನ್ನು ಬಿ. ಪದ್ಮನಾಭಂ (ನರಸಿಂಹರಾಜು), ಗೌರಿಯ ಪಾತ್ರವನ್ನು ಕುಮಾರಿ (ಸಂಧ್ಯಾ) ಮೊದಲಾದವರು ವಹಿಸಿದರು. ಹಾಗಾಗಿ ಇದು ಬಹಳ ಜನ ತಿಳಿದಿರುವಂತೆ ತೆಲುಗು ಭಾಷೆಗೆ ಡಬ್ ಆದ ಚಿತ್ರವಲ್ಲ. ಮರು ಅವತರಣಿಕೆ ಅರ್ಥಾತ್ ರೀಮೇಕ್.
ಕನ್ನಡ ‘ಬೇಡರ ಕಣ್ಣಪ್ಪ’ ಚಿತ್ರದ ಕತೆಯು ತೆಲುಗು ಅವತರಣಿಕೆಯಲ್ಲಿ ಅಲ್ಪ ಮಾರ್ಪಾಡಿಗೆ ಒಳಪಟ್ಟಿದೆ. ಕನ್ನಡ ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ಗಂಧರ್ವ ಮಣಿವಂತ ತಾನು ಬಿಟ್ಟ ಬಾಣ ಗುರಿತಪ್ಪಿ ಹಂಸವೊಂದರ ಸಾವಿಗೆ ಕಾರಣನಾದುದರಿಂದ ಬೇಡನಾಗಿ ಹುಟ್ಟುವಂತೆ ಶಿವ ಶಾಪ ನೀಡುತ್ತಾನೆ. ತೆಲುಗು ಅವತರಣಿಕೆಯಲ್ಲಿ ಮಣಿವಂತನ ಪಾತ್ರವಿಲ್ಲ. ಬದಲು ‘ಕಿರಾತ ಅರ್ಜುನ’ರ ಪ್ರಸಂಗ ತರಲಾಗಿದೆ. ಹಂದಿಯನ್ನು ಕೊಂದ ಬಾಣ ತಮ್ಮದೇ ಎಂದು ಕಿರಾತನ ವೇಷದ ಶಿವ ಮತ್ತು ತಪೊಭಂಗದಿಂದ ಕ್ರುದ್ಧನಾದ ಅರ್ಜುನರ ನಡುವೆ ಸಂಘರ್ಷವಾಗುತ್ತದೆ. ಶಿವನನ್ನು ನಿಂದಿಸಿ, ಕೈಮಾಡಿದ ತಪ್ಪಿಗೆ ಕಲಿಯುಗದಲ್ಲಿ ಕಿರಾತನಾಗಿ ಹುಟ್ಟಲು ಶಿವ ಶಾಪ ನೀಡುತ್ತಾನೆ. ಮುಂದೆ ಬೇಡರ ಹಟ್ಟಿಯ ದಿಣ್ಣೆಯಲ್ಲಿ ಜನಿಸಿದ ಶಿಶುವು ಬೆಳೆದು ಶಿವಭಕ್ತಿಯನ್ನು ಪ್ರಚುರಪಡಿಸುವ ಕತೆಯೆಲ್ಲವೂ ಮೂಲದಲ್ಲಿರುವುದನ್ನೇ ಅನುಕರಿಸಿದೆ. ಮೂಲದಲ್ಲಿರುವ ‘ಮಾಯೆಗೆ ಸಿಲುಕಿ ಮರುಳಾದೆ ಮನುಜ’ ಹಾಡಿನ ಧಾಟಿಯನ್ನು ಹೊರತುಪಡಿಸಿದರೆ ತೆಲುಗಿನ ಹಾಡುಗಳ ಧಾಟಿಯೆಲ್ಲವೂ ಭಿನ್ನವಾಗಿವೆ. (ಸಂಗೀತ-ಆರ್. ಸುದರ್ಶನಂ-ಗೋವರ್ಧನಂ) ಅದರಲ್ಲೂ ಘಂಟಸಾಲ ಹಾಡಿರುವ ‘ಜಯ ಜಯ ಮಹಾದೇವ’ ಹಾಡು ಅಂದಿನ ಕಾಲದಲ್ಲಿ ಜನಪ್ರಿಯವಾಗಿತ್ತು. ಈಗಲೂ ಶಿವರಾತ್ರಿಯ ಸಮಯದಲ್ಲಿ ಕಾಯ್ದು ಕುಳಿತರೆ ಯಾವುದಾದರೊಂದು ತೆಲುಗು ಚಾನಲ್‌ನಲ್ಲಿ ಕನ್ನಡಿಗರಿಗೆ ಮುಖ್ಯವೆನಿಸಿದ ಈ ಚಿತ್ರವನ್ನು ನೋಡಬಹುದು. ಅಥವಾ ಅಂತರ್ಜಾಲದಲ್ಲಿ ತಡಕಾಡಿದರೂ ಸಂಪೂರ್ಣ ಚಿತ್ರ ದೊರೆಯುತ್ತದೆ. ಕನ್ನಡಿಗರು ಅದನ್ನು ನೋಡಬೇಕಿದೆ. ಯಾಕೆಂದರೆ ರಾಜ್‌ರವರು ನಟಿಸಿರುವ ಅನ್ಯ ಭಾಷೆಯ ಚಿತ್ರ ಇದೊಂದೆ!
* ಕೇಂದ್ರ ಸರ್ಕಾರವು ಹಿಂದಿ ಚಿತ್ರಗಳಿಗೆ ನೀಡುತ್ತಿದ್ದ ರಾಷ್ಟ್ರ ಪ್ರಶಸ್ತಿಗಳನ್ನು ಪ್ರಾದೇಶಿಕ ಚಿತ್ರಗಳ ಉತ್ತೇಜನಕ್ಕೂ ೧೯೫೪ರಲ್ಲಿ ವಿಸ್ತರಿಸಿತು. ಮೊದಲನೆಯ ವರ್ಷದಲ್ಲೇ ‘ಬೇಡರ ಕಣ್ಣಪ್ಪ’ ಅತ್ಯುತ್ತಮ ಪ್ರಾದೇಶಿಕ ಪ್ರಶಸ್ತಿಯನ್ನು ಪಡೆಯಿತು.
*****



















