ನನ್ನ ಬೆಲ್ಲದಚ್ಚಿನ ಬೊಂಬೆಯೆ!
ನೀನು ನಕ್ಕರೊಂದು ರುಚಿ, ನೀನು ಅತ್ತರೊಂದು ರುಚಿ.
ನೀನು ನಗುತ್ತಲೆ ನಾನು ನಿನ್ನವಳೆಂದೆನಿಸುವುದು.
ನೀನು ಅಳುತ್ತಲೆ ನೀನು ನನ್ನವನೆಂದೆನಿಸುವುದು.
ನೀನು ನಕ್ಕರೊಂದು ರುಚಿ, ನೀನು ಅತ್ತರೊಂದು ರುಚಿ.
ನಿನ್ನ ಬಾಡಿದ ಮೊಗ ನೋಡಿ
ನನ್ನ ಕಣ್ಣಲ್ಲಿ ನೀರು ನಿಲ್ಲುವುದು.
ನನ್ನ ಆರಳಿದ ಮುಖನೋಡಿ
ನಿನ್ನ ತುಟಿಯಲ್ಲಿ ನಗೆಯೂರುವುದು.
ನೀನು ನಕ್ಕರೊಂದು ರುಚಿ, ನೀನು ಅತ್ತರೊಂದು ರುಚಿ.
ನೀನು ನಕ್ಕರೆ ಬೆಳಕಿನ ಬೆಳೆ
ನೀನು ಅತ್ತರೆ ಮುತ್ತಿನ ಮಳೆ;
ನೀನು ನಕ್ಕರೊಂದು ರುಚಿ, ನೀನು ಅತ್ತರೊಂದು ರುಚಿ.
*****