ಓಂ ಅಗ್ನಿಮೀಳೆ!
ನಡೆಡಿದೆ ಒಂದೇ ಮಂತ್ರ ನಿರಂತರ
ನಡುಗಿಸಿ ವಿಶ್ವದ ವಿರಾಟ ಅಂತರ
ಓಂ ಅಗ್ನಿಮೀಳೆ!
ಇದಕ್ಕೆ ಎಲ್ಲಿಯ ವೇಳೆ ಅವೇಳೆ
ಸದಾಸರ್ವದಾ ಅಗ್ನಿಮ್ ಈಳೆ
ಕೋಟಿ ಕಂಠದಲಿ ಕೂಗಿದ ಕಹಳೆ
ನಿನ್ನ ಪೂಜೆಯಲಿ ಲೀನವಾಯಿತಿಳೆ
ಓಂ ಅಗ್ನಿಮೀಳೆ!
ಸರ್ವದೇವತಾ ಜನ ಸಂಪೂಜಿತ
ನೀನೇ ಲೋಕದ ಆದಿ ದೈವತ
ಪ್ರಚಂಡ ತೇಜಃ ಪುಂಜ ಪ್ರಕಾಶಿತ
ಸಮಸ್ತ ವಿಶ್ವಕೆ ನೀನೆ ಪ್ರಾಣಪಿತ
ಓಂ ಅಗ್ನಿಮೀಳೆ!
ಬ್ರಹ್ಮಾಂಡದ ಆ ಮಹಾಕುಂಡದಲಿ
ಉರಿದಳ ಸಾವಿರ ಸ್ಪರ್ಣಕಮಲದಲಿ
ಧಿಮಿ ಧಿಮಿ ಉರಿಯುವ ಪ್ರಖರ ಪ್ರಭೆಯಲಿ
ಗಭೀರ ನಿಶ್ಚಲದಾತ್ಮ ಶಾಂತಿಯಲಿ
ರಾರಾಜಿಸುತಿಹೆ ನೀನಲ್ಲಿ.
ಪಾದಪೀಠವದು ಸೂರ್ಯನ ಮಂಡಲ
ರತ್ನ ಕಿರೀಟವು ತಾರಾ ಮಂಡಲ
ಧಿಯೋ ದೀಧಿತಿಯು ಕರ್ಣಕುಂಡಲ
ಅಸಮ ಪುಣ್ಯಮಯ ಮೂರ್ತಿ ಮಂಗಲ
ನೀನೇ ಅಗ್ನಿಯಲ!
ಲೋಕವ ಕಾಯುವೆ ನೀ ಶಿವಶಂಕರ
ವಿಕಸಿಸಿ ಸುಖಯಿಸಿ ಜೀವ ನಿರಂತರ
ಮರಣದ ಮೂರುತಿ ರುದ್ರ ಭಯಂಕರ
ಅಳಿಸುವೆ ಬೆಳೆಸುವೆ ನೀನು ಮಹೇಶ್ವರ
ನೀನೇ ಕರುಣಕರ!
ಚಿಕ್ಕೆಯ ಕಿಡಿಗಳ ಸಿಡಿಸಿದ ಭಾನು
ನೀನಿಹೆ ಪ್ರಾಣದ ಪ್ರಚಂಡ ಸಾನು
ನಿನ್ನಯ ಅಡಿಯಲಿ ಹೊಮ್ಮಿತು ತಾನು
ಅನಂತ ಜೀವನ ಜಾನ್ಹವಿಯು!
ಓಂ ಅಗ್ನಿ ಮೀಳೆ!
ಬಾನ ಬಯಲಿನಲಿ ಬಯಲ ಬಸಿರಿನಲಿ
ಮಲೆಯ ಮುಡಿಯಲೀ ಕಡಲಿನುಡಿಯಲೀ
ಎಲ್ಲ ಇರವಿನಲಿ, ಅದರ ಬಯಕೆಯಲಿ
ಕೊನರಿತು ಕೆದರಿತು ಪ್ರಾಣಪಾವಕಾ
ಜೀವನವೆಲ್ಲ ಊರ್‍ಧ್ವಶಿಖಿ!
ಬುದ್ಧಿಯೊಳುದಿಸಿತು ತೇಜ ಭಾಸ್ಕರ
ಹೃದಯದಿ ಉಕ್ಕಿತು ಭಾವ ಸಾಗರ
ಧಮನಿಧಮನಿಯಲಿ ಉಕ್ಕಿತು ನೆತ್ತರ
ಕಾಯ ಕಾಯವೂ ಕಾರ್ಯಕಾತರ
ಪ್ರಗಮನವಾಯಿತು ಮನುಜಕುಲ!
ವಸಂತ ವೈಭವ ಬನ ಬನ ತುಂಬಿತು
ಕಾಮೋದ್ದೀಪಿತ ಮನ ಕುಸುಮಿಸಿತು
ಗಂಡಿನ ಜೊತೆಯಲಿ ಹೆಣ್ಣು ಕುಣಿಯಿತು
ಶೃಂಗಾರಕೆ ವಾತ್ಸಲ್ಯಕೊನರಿತು
ನಿನ್ನಯ ಸ್ಫೂರ್ತಿಯಲಿ!
ಹಿಂಗದ ಹಸಿವೆಯ ಹೊಟ್ಟೆಯೊಳಿರಿಸಿ
ಮುಗಿಯದ ಬೆಳೆಯನು ಬುವಿಯಲಿ ಬೆಳೆಸಿ
ತುಷ್ಪಿ ಪುಷ್ಟಿಯಿರಲೆಂದು ದಿವಾನಿಶಿ
ಹರಿಸಿದೆಯೆಂದೇ ಇಹುದ ವಿನಾಶಿ
ಮರ್ತ್ಯರ ಈ ಕುಲವು!
ಅನಂತ ವಾಯಿಶು ಪ್ರಾಣಸನಾತನ
ಸಂಸಾರದ ಈ ರೂಪ ವಿನೂತನ
ಸಂತತವಾಯಿತು ಕಾಲನರ್‍ತನ
ನಿನ್ನಯ ಕರುಣೆಗೆ ಪುಲಕಿತ ತ್ರಿಭುವನ
ಬೆಳೆಯಿತು ಮನುಜ ಮನ!
ಓಂ ಅಗ್ನಿಮೀಳೆ! ಓಂ ಅಗ್ನಿಮೀಳೆ!
ಬೇಸರ ವಾಯಿತೆ ನಿನಗೀ ಮಾಟ
ಮಾನವ ಕುಲವಾಯಿತೆ ಬರಿಕಾಟ
ಅಂತೇ ಬಂತೇ ಇಂದು ಸಂಕಟ
ಕುಸಿಯಲು ತೊಡಗಿತು ಜೀವ ವಟ!
ರುದ್ರ ಭಯಂಕರನೆ!
ಮಾನಸ ಮಂದಿರ ಮಧ್ಯಸ್ಥಾಪಿತ
ದ್ವೇಷದ ದೈವತ ವಿಂದು ಪೂಜಿತ
ಭೀತಿಯ ಧೂಪವು ಭುವನ ಪೂರಿತ
ಕೊಲ್ಲುವ ಜಪವೇ ಇಂದು ಸುವ್ರತ
ನಡುಗಿದೆ ಜನ ಸ್ವಾಮಿ!
ಗುಡಿಯ ಗರ್ಭದಲಿ ಮಿನುಗುವ ದೀಪ
ಮಾನವ ಪುಣ್ಯದ ಪಾವನ ದೀಪ
ಸತ್ಯಧರ್ಮಗಳ ನಂದಾದೀಪ
ನಿತ್ಯ ವಿನೂತನ ಜ್ಞಾನ ಪ್ರದೀಪ
ಆಡಗಿತು ಜ್ಯೋತಿಕುಲ!
ಗಂಗಾಜಲದಲಿ ವಿಷವನು ಬೆರಸಿದ
ಅಮೃತ ಕುಂಭದಲಿ ಹುಡಿಯನ್ನೆರಚಿದ
ಮಮತೆಯನೆಲ್ಲ ತೊತ್ತುಳಿದುಳಿದ
ಪಶುವರ್‍ತನವೇ ನಮ್ಮ ಪ್ರಮೋದ
ಏನಿದು ದುರ್ದೈವ!
ಹಾಲು ಹರಿದ ಕಡೆ ರಕ್ತ ಸುರಿಯಿತು
ಹಗೆಯ ವಹ್ನಿ ಎಲ್ಲೆಲ್ಲು ಜ್ವಲಿಸಿತು
ಯಜ್ಞಕುಂಡವೆನೆ ಭೂಮಿ ಮಂಡಲ
ಮಾನವ ಕುಲವೇ ಸಮಿತ್ತಂಡುಲ
ಮರಣವೆ ಬಂತೆದುರು!
ಮರಣ ಬಂದರೆ ಬರಲಿ, ಇಲ್ಲ ಭೀತಿ
ಜೀವನಕೆಲ್ಲ ಮರಣವೆ ಪ್ರಕೃತಿ
ಆತ್ಮದಧೋಗತಿಯೊಂದೇ ವಿಕೃತಿ
ಅಂತೇ ಬಳಲುವೆ, ಇಂದಿನ ದುರ್ಗತಿ
ಬರಬಾರದು ಯಾರಿಗು!
ನಾರಾಯಣಕುಲಸಂಭವ ಮಾನವ
ಎನಿತುನ್ನತವೀ ಆತ್ಮದ ವೈಭವ
ಕಂಡಿತಿಂದು ಮಾನವತೆ ಪರಾಭವ
ಪಶುಗಳನೆಸಗಿತು ರಕ್ಕಸಭಾವ
ಅಖಿಲ ಜೀವ ಜಾತವ!
ಓಂ ಅಗ್ನಿಮೀಳೆ! ಓಂ ಅಗ್ನಿಮೀಳೆ!
ಏಳು ಜ್ಯೋತಿಷ್ಮಂತ ಪ್ರಭುವರ
ಬೆಳಗು ಲೋಕವ ಬಾರೊ ಸತ್ವರ
ಕಾಯು ಬಾ ಎನುವೆ!
ನಿನ್ನ ಕಣ್ಣಿನ ಕಿಚ್ಚು ಚಿಮ್ಮಲಿ
ಕೀಳು ಕೊಳೆ ಕೆಡಕೆಲ್ಲ ಅಳಿಯಲಿ
ತೊಳೆಯ ಬಾ, ಕರೆವೆ!
ಸಾಯಬೇಕಾದುದನು ಸಾಯಿಸು
ಲೋಕದೊಳಿತನ್ನೊಂದೆ ಬೆಳೆಯಿಸು
ಬೆಳಗು ಬಾ, ಬೆಳಕೆ!
ಬೆಳೆವ ಕಳೆ ಎಲ್ಲೆಲು ತೊಳಗಲಿ
ಮರಣಛಾಯೆಯ ಭೂತ ತೊಲಗಲಿ
ಬೇಗ ಬಾ, ವಿಭುವೆ!
ಪ್ರಾಣಕಂಟದ ಜಾಡ್ಯ ಕಳೆಯಲಿ
ಕೆಚ್ಚುಗೊಳ್ಳಲಿ ಮೇಲೆ ನೆಗೆಯಲಿ
ನೀನೆ ಚೈತನ್ಯ!
ಓಂ ಅಗ್ನಿಮೀಳೆ, ಅಗ್ನಿಮೀಳೆ!
ಜಗದ ಕ್ಷತಿಜವನೇರಿ ನಿಂತಿತು
ಕಾಲಸಾಗರದೆದುರು ಕೂಗಿತು
ಜೀವ ಕಾತರದಿ-
ಓಂ ಅಗ್ನಿಮೀಳೆ!
ಜಗದ ಹಿತ ಸಾಧನೆಗೆ ತನಿಸುವ
ಲೋಕ-ವಿಭು ಋಷಿವರರು ಜಪಿಸುವ
ದಿವ್ಯ ಮಂತ್ರ ವಿದು!
ಜಗದ ರಕ್ಷಣೆಗೆಂದು ನಿಂತಿಹ
ಯಕ್ಷ ಕಿನ್ನರ ಕಂಠಕೊನರಿತು
ಅಗ್ನಿ ಮೀಳೆಯೆನೆ!
ಬುವಿಯ ಅಧರವ ತೊಳೆದು ಬೆಳಗಿತು
ಬಾನಿನುದರವ ಸೀಳಿ ನೆಗೆದಿತು
ನೋಡು ಮಂತ್ರವಿದು!
ಓಂ ಅಗ್ನಿಮೀಳೆ, ಅಗ್ನಿಮೀಳೆ!
ನೆಲದ ನೆರಳುಗಳೆಲ್ಲ ನಡುಗಿದವು
ಕಿರಣ ಶಿಶುಗಳ ಅಧರ ಮಧುಸ್ಮಿತ
ಕುಣಿದು ಆಡಿದವು!
ಓಂ ಅಗ್ನಿಮೀಳೆ, ಅಗ್ನಿಮೀಳೆ!
ಓ೦ ಶಾಂತಿಃ ಶಾಂತಿಃ ಶಾಂತಿಃ
*****



















