Home / ಲೇಖನ / ಇತರೆ / ಮುಪ್ಪು

ಮುಪ್ಪು

ಬದುಕೊಂದು ರೋಚಕ ನಾಟಕ, ಮುಪ್ಪು ಅದರ ಕೊನೆಯ ಅಂಕ. ಬಾಲ್ಯ, ಯೌವನ, ಮುಪ್ಪು ಜೀವನದ ಮೂರು ಮುಖ್ಯ ಹಂತಗಳು. ಪ್ರತೀ ಹಂತಗಳೂ ಜೀವನವೆನ್ನುವ ನಾಟಕದ ಪುಟಗಳಲ್ಲಿ ನವರಸಗಳನ್ನು ತುಂಬುತ್ತವೆ. ಬಾಲ್ಯ ಹೆತ್ತವರಿಗೆ ಸೇರಿದ್ದು, ಯೌವನವೂ ನಮ್ಮ ಕೈಯಲ್ಲಿಲ್ಲ. ಅದು ಉದ್ಯೋಗಕ್ಕೆ, ಹೆಂಡತಿಗೆ, ಮಕ್ಕಳಿಗೆ ಸೇರಿದ್ದು, ಮುಪ್ಪು ಮಾತ್ರ ನಮಗೇ ಸೇರಿದ್ದು. ನಮ್ಮದೇ ಆಗುವ ಈ ಕೊನೆಯ ಅಧ್ಯಾಯವನ್ನು ಬರೆಯುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕಿದವರು ಭಾಗ್ಯಶಾಲಿಗಳು.

ಮುಪ್ಪು ಜೀವನದ ಒಂದು ಮಹತ್ತರ ಘಟ್ಟ. ಒಂದು ಪ್ರಬುದ್ಧ ಹಂತವೂ ಹೌದು. ಈ ಹಂತದಲ್ಲಿ ನಮ್ಮನ್ನು ನಾವು ಕಂಡುಕೊಳ್ಳಲು ಬಹಳ ದೊಡ್ಡ ಅವಕಾಶವಿದೆ. ಜೀವನದುದ್ದಕ್ಕೂ ಎಷ್ಟೋ ಕೆಲಸಗಳನ್ನು ಮಾಡಬೇಕೆನ್ನುವ ತುಡಿತಗಳಿದ್ದರೂ ಸಂಸಾರ ಹಾಗೂ ವೃತ್ತಿಜೀವನದ ಒತ್ತಡಗಳು ಎಲ್ಲಾ ಸಮಯವನ್ನು ಕಿತ್ತುಕೊಳ್ಳುತ್ತಿರುವಾಗ ನಮಗೆ ಪ್ರಿಯವಾದ ಕೆಲಸಗಳು, ಹವ್ಯಾಸಗಳು ಪ್ರಾಮುಖ್ಯತೆ ಕಳಕೊಂಡು ಮನದಾಳಕ್ಕೆ ನೂಕಲ್ಪಟ್ಟು ಅವು ಅಲ್ಲಿ ಗೂಡುಕಟ್ಟುತ್ತವೆ. ಹಲವಾರು ಜವಾಬ್ದಾರಿಗಳ ನಿರ್‍ವಹಣೆಯಲ್ಲಿ ಸ್ವಂತಕ್ಕೆ ಸಮಯ ಸಿಗುವುದೇ ಕಡಿಮೆ. ಆದರೆ ನಿವೃತ್ತರಾಗಿ ಮನೆಯಲ್ಲಿ ಕುಳಿತಾಗ ಸಮಯವೆಲ್ಲ ನಮ್ಮದೇ. ಮಾಡಲಾಗದ ಕೆಲಸಗಳನ್ನು ಮಾಡಲು, ಮರೆತು ಹೋಗಿರುವ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಇದು ಸಮರ್‍ಪಕವಾದ ಸಮಯ. ಈ ಅವಕಾಶವನ್ನು ಉಪಯೋಗಿಸಿಕೊಂಡು ಬೇಕಾದುದನ್ನು ಮಾಡಿಕೊಂಡು ಮಕ್ಕಳು ದೂರದಲ್ಲಿರುವ ನೋವನ್ನು ಮರೆತು ಜೀವನದಲ್ಲಿ ಸ್ವಲ್ಪ ರಂಗು ತುಂಬಿಕೊಂಡು ಜೀವಿಸುವುದರಲ್ಲಿ ಇಡೀ ಜೀವನದ ಸಫಲತೆ ಇದೆ.

ಮನಸ್ಸಿಗೆ ಮುಪ್ಪು ತಾಗದಿದ್ದರೂ ದೇಹಕ್ಕೆ ಮುಪ್ಪು ಬಂದೇ ಬರುತ್ತದೆ. ಪ್ರಾಯಕ್ಕೆ ತಕ್ಕಂತೆ ಒಂದೊಂದೇ ಖಾಯಿಲೆಗಳು ಕಾಡಿಸಿ ಮುಪ್ಪನ್ನು ಸಾಬೀತು ಪಡಿಸುತ್ತಿರುವಾಗ ಮುಪ್ಪನ್ನು ಮರೆಯುವುದು ಸಾಧ್ಯವಿಲ್ಲ. ಮುಪ್ಪುನ್ನು ಅದರ ಜೊತೆಯಲ್ಲಿ ಬರುವ ಖಾಯಿಲೆಗಳನ್ನು, ಅನಾನುಕೂಲತೆಗಳನ್ನು ಸ್ವಾಭಾವಿಕ ಎನ್ನುವ ಮನೋಭಾವದಿಂದ ಸ್ವೀಕರಿಸಿ ತೃಪ್ತರಾಗಿ ಜೀವಿಸಿದರೆ ಮುಪ್ಪು ಯಾವತ್ತೂ ಶಾಪವಾಗಲಾರದು. ಕಳೆದು ಹೋಗುತ್ತಿರುವ ದೈಹಿಕ ಶಕ್ತಿಗಾಗಿ ಮರುಗದೆ ಮನಸ್ಸಿನ ಹುಮ್ಮಸ್ಸನ್ನು ಕಾಪಾಡಿಕೊಂಡು ನಗುನಗುತ್ತಾ ಬಾಳುವುದನ್ನು ಸಾಧ್ಯ ಮಾಡಿಕೊಂಡರೆ ಮುಪ್ಪು ಕಷ್ಟವೆನಿಸುವುದಿಲ್ಲ. ಮುಪ್ಪಿನೊಡನೆ ನಗುನಗುತ್ತಾ ಜೀವಿಸಲು ಕಲಿಯುವುದರಲ್ಲಿ ಜೀವನದ ನೆಮ್ಮದಿ ಇದೆ.

ಮುಪ್ಪಿನ ಕಾಲದಲ್ಲಿ ಮುಖ್ಯವಾಗಿ ಬೇಕಾಗಿರುವುದು ಸಮಾಧಾನ ಹಾಗೂ ನೆಮ್ಮದಿ. ಚಿಗುರು, ಹೂ, ಕಾಯಿ, ಹಣ್ಣು, ನೆರಳು ಎಲ್ಲವನ್ನೂ ಸ್ವಲ್ಪವೂ ಬೇಸರಿಸದೆ ಕೊಟ್ಟು ಮುಪ್ಪಾದ ಮರ ಎಂದಾದರೂ ಧರೆಗುರುಳದಿದ್ದೀತೇ? ಅದು ಜೀವನದ ಸತ್ಯ.

ಜೀವನದಲ್ಲಿ ಎದುರಾಗುವ ಎಲ್ಲ ಸಿಹಿಕಹಿಗಳನ್ನು ಸಮಾನ ಮಾನಸಿಕ ನೆಲೆಯಿಂದ ಎದುರಿಸಿ ಎಲ್ಲಿಯೂ ನೆಮ್ಮದಿಗೆ ಧಕ್ಕೆ ಬಾರದಂತೆ ಸಮರ್‍ಪಕವಾಗಿ ಬಾಳುವುದು ಒಂದು ಕಲೆ ಹಾಗೂ ದೊಡ್ಡ ಸಾಧನೆ. ಇಪ್ಪತ್ತರಲ್ಲಿ ಐವತ್ತರ ಬುದ್ಧಿವಂತಿಕೆ, ಮೂವತ್ತರಲ್ಲಿ ಎಪ್ಪತ್ತರ, ವಿವೇಚನೆ, ಎಪ್ಪತ್ತರಲ್ಲಿ ಇಪ್ಪತ್ತರ ಹುಮ್ಮಸ್ಸು ಮೈಗೂಡಿಸಿಕೊಂಡಾಗ ಈ ಕಲೆಗಾರಿಕೆ ಯನ್ನು ಜೀವನದುದ್ದಕ್ಕೂ ತೋರಿಸಬಹುದು. ಮುಪ್ಪಿನ ಜತೆಗೆ ಬದುಕಲು ಕಲಿತಾಗ ಜೀವನವೆನ್ನುವ ಸುಂದರ ನಾಟಕದ ಅಥವಾ ಸ್ವಾರಸ್ಯಕರ ಕಾದಂಬರಿಯ ಕೊನೆಯ ಸಾಲುಗಳನ್ನು ತುಂಬಾ ಮೌಲಿಕವಾಗಿ, ಇಡೀ ಕೃತಿಗೆ ಮೆರುಗು ಕೊಡುವ ಹಾಗೆ ಬರೆಯುವುದು ಸಾಧ್ಯವಾಗದೇ?

ಮುಪ್ಪಿನಲ್ಲಿ ಪರಿಪಕ್ವವಾಗಿ ಜೀವಿಸುವುದು ಕೂಡಾ ಒಂದು ಸುಯೋಗ. ಒಂದು ಹಣ್ಣಿನ ಪರಿಪಕ್ವತೆಯ ಸಿಹಿ, ಒಳ್ಳೆಯ ಕಾವ್ಯದ ಸ್ವಾರಸ್ಯವಾದ ಕೊನೆಯ ಸಾಲುಗಳು, ದೀಪ ನಂದುವ ಮೊದಲಿನ ಪ್ರಖರ ಬೆಳಕು, ಸೂರ್‍ಯ ಮುಳುಗುವ ಮೊದಲಿನ ರಂಗು, ಪೂರ್‍ಣ ಚಂದಿರನ ತಂಪಾದ ಬೆಳಕು ಎಲ್ಲವೂ ಜೀವನದ ಕೊನೆಯ ಹಂತದಲ್ಲಿ ಇರುವಂತೆ ನೋಡಿಕೊಂಡರೆ ಮುಪ್ಪಿನ ತೊಡಕುಗಳು, ಸಾವಿನ ಹೆದರಿಕೆ ಯಾವುದೂ ಕಂಗೆಡಿಸಲಾರವು. ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ಸುತ್ತಲಿನ ಪ್ರಪಂಚವನ್ನು ಅದು ಇದ್ದ ಹಾಗೇ ಒಪ್ಪಿಕೊಂಡು ಯಾವ ಕಟ್ಟ ಭಾವನೆಗಳಿಗೂ ಎಡೆಕೊಡದೆ ಆತ್ಮವಿಶ್ವಾಸದಿಂದ ಜೀವನವನ್ನು ಹಾಗೂ ಸುತ್ತಲಿನವರನ್ನು ಪ್ರೀತಿಸುತ್ತ ಜೀವಿಸಲು ಕಲಿತರೆ ಮುಪ್ಪು ಯಾವತ್ತೂ ಒಂದು ಹೊರೆಯಾಗಿ ಕಾಡುವುದಿಲ್ಲ.

ಇಡೀ ಜೀವನದಲ್ಲಿ ಮುಪ್ಪು ಸಂತಸದಿಂದ ಅನುಭವಿಸಬೇಕಾದ ಹಂತ, ಅದನ್ನು ಮನಸಾರೆ ಅನುಭವಿಸುವುದೆಷ್ಟು ಚಂದ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...