ಇ೦ದು ಸಂಜೆಯ ನಿಟ್ಟು ನಿಟ್ಟಿಗೆ
ಬೆಳೆದು ನಿಂತಿದೆ ಸಂಪದ
ಹಕ್ಕಿ ಹಾರಿದ ಹಾಗೆ ಹರಿಯಿತು
ಮನದಿ ಊರಿದ ಆ ಪದ
ಚೆಂಗುಲಾಬಿಯ ಬನವು ಅರಳಿದೆ
ನೋಡು ಬಾನಿನ ದಂಡೆಗೆ
ಪ್ರಾಣ ಶುಕವೇ ಕ್ಷುಬ್ಧವಾಯಿತು
ಬಂತು ಕಣ್ಣಿನ ಕಿಂಡಿಗೆ
ಸ್ವರ್ಗಲೋಕದ ಸ್ವರ್ಣ ದ್ವಾರವು
ತೆರೆಯಿತೆನುವೊಲು ಅರೆಚಣ
ಸಂಜೆಗೆಂಪಿನ ಸುಮನ ಕಾಂತಿಗೆ
ತುಂಬ ಹೊತ್ತಿತು ಪಡುವಣ.
ನೋವು ನರಳಿಕೆಯಿಂದ ನವೆದಿಹ
ಜಗದ ಕೊರಳಿಗೆ ತಾಯಿತ
ಸುತ್ತಿಕೊಂಡಿದೆ ಸಂಜೆಗೆಂಪಿನ
ಮುತ್ತು ಮಾಲೆಯು ಮಂತ್ರಿತ
ದೇವ ಮಮತೆಯ ಕೈಯು ಚಾಚಿತು
ತಂಪು ಗಾಳಿಯ ಸುಳಿಯಲಿ
ಬೆಂದ ಹಣೆಗಳ ಬೇಗೆ ಸವರಿತು
ಶಾಂತಿಯೆರಚಿತು ಎದೆಯಲಿ.
ಮಡದಿ ಮಕ್ಕಳ ಮಮತೆ ನುಡಿಸಿತು
ಹಕ್ಕಿಯುಲಿಯುವ ಚಿಲಿಪಿಲಿ
ಕಿರಣ ಶಿಶುಗಳ ಚರಣ ಕಿಂಕಿಣಿ
ನಾದ ತುಂಬಿತು ಜಗದಲಿ
ಜಗದ ಬಗೆವಟ ಹರಡಿ ನಿಂತಿತು
ಟೊಂಗೆ ಟೊಂಗೆಯು ಕೊನರಿತು
ಗಾಳಿಗಡಲಿನ ತೆರೆಗೆ ನೌಕೆಯ
ಹಾಗೆ ಉಯ್ಯಲೆಯಾಡಿತು.
ಕಾಲದಿಕ್ತಟ ದಾಟಿ ಸೇರಿತು
ನೆನಹು ಹಕ್ಕಿಯ ಸಂಕುಲ.
ಕಳೆದ ಸತ್ವ ವಿಭೂತಿ ನೆರೆಯಿತೊ
ಎನ್ನು ವೊಲು ತಾರಾಕುಲ
ಮೋಡ ನೀಡದಿ ಚಿಕ್ಕೆ ಹಕ್ಕಿಯ
ತುಂಬಿ ತುಳುಕುವ ಪಿಕರುತಿ
ಕಾಲವೀಣೆಯು ಮಿಡಿಯ ತೊಡಗಿತೊ
ದೇವ ವಾಣಿಯ ಆ ಶೃತಿ
ಸಪ್ತ ಋಷಿಗಳ ವೇದ ವಾಣಿಯು
ಉಸುರಿತಾ ಗಾಯತ್ರಿಯ
ಯಮನ ಜಯಿಸಿದ ಸತ್ವ ಹೊಮ್ಮಿತು
ಕರಿಯಿತಾ ಸಾವಿತ್ರಿಯ
ವ್ಯಾಸ ವಾಲ್ಮೀಕಿಯರ ಪ್ರತಿಭೆಯ
ಗಂಗೆ ಬಾನೊಳು ಹರಿಯಿತು
ಧರ್ಮ ಭೀಮರ ರಾಮ ಹನುಮರ
ವೀರ ತೇಜವು ಚಿಮುಕಿತು.
ಕ್ರಿಸ್ತ ನೇರಿದ ಶಿಲುಬೆಯಿಂದಲಿ
ಸುರಿದ ರಕ್ತದ ಹನಿಯಲಿ
ಸಾವನರಿಯದ ಸೊಲ್ಲು ಗುಡುಗಿತು
ಚಿಕ್ಕೆ ಚಿಕ್ಕೆಯ ಎಡೆಯಲಿ
ಬುದ್ಧ ಬೋಧಿಯು ಮತ್ತೆ ಚಿಗುರಿತು
ಜಿನನ ವಾಣಿಯು ಅರಳಿತು
ಸೋತು ಸರಿದಿಹ ತತ್ವವೇತ್ತರ
ಶಬ್ದ ಸೌಷ್ಠವ ಕೊನರಿತು.
“ಬೆಂದು ಬಳಲಿದ ಜಗದ ಜೀವವೆ,
ಏಳು ಕುಡಿಯಲು ಸಿಡಿಲನು
ಮರೆತ ಮಾತಿನ ಹಣ್ಣು ಹಂಪಲ-
ದಿಂದ ತುಂಬಾ ಮಡಿಲನು
ಏಕೆ ಅಶುಭದ ಹೊಲೆಗೆ ಆಳುಕುವೆ
ಸಾವಿನಲಿ ನೀ ಬಾಳುವೆ
ಅಮೃತ ಪುತ್ರರ ಪಿತಗೆ ಭಯವೆ
ನೀನೆ ಎಂದಿಗು ಆಳುವೆ”
ಕಾಲಸಾಗರ ಕೆರಳಿ ಕೆದರಿತು
ನಾದ ಹೊಮ್ಮಿತು ತೆರೆತೆರೆ
ಹಾಲ ಸಾಗರ ನಂದ ಕಂದನು
ನೋಡು ನಕ್ಕನು ಜಗದೊರೆ
“ಕ್ಲೈಬೃಂ ಮಾಸ್ಮಗುಮಃ ಪ್ರಾಣೀ
ಸಲ್ಲದಿದು ನಿನಗೆಂದಿಗು
ಕುರುಕ್ಷೇತ್ರವಿದು ಧರ್ಮಕ್ಷೇತ್ರವು
ಉಂಟು ಕೊನೆಯಾ ಸಾವಿಗು.”
*****



















