Home / Uncategorized / ಕ್ರಾಂತಿಯೊಂದಕ್ಕೆ ನಾಂದಿ ಹಾಡಿದ ಕನ್ನಡ ಚಿತ್ರ

ಕ್ರಾಂತಿಯೊಂದಕ್ಕೆ ನಾಂದಿ ಹಾಡಿದ ಕನ್ನಡ ಚಿತ್ರ

ಅಧ್ಯಾಯ ಏಳು

ಸೀಮಿತ ಮಾರುಕಟ್ಟೆ, ವಿತರಣಾ ಸಮಸ್ಯೆ ಮತ್ತು ಲಾಭದ ಕೊರತೆಯಿಂದ ನರಳುತ್ತಿದ್ದರೂ ಆರಂಭದಿಂದಲೂ ಕನ್ನಡ ಚಿತ್ರರಂಗದಲ್ಲಿ ಪ್ರಯೋಗಶೀಲತೆಗೆ ಅಷ್ಟಾಗಿ ಕೊರತೆಯಿರಲಿಲ್ಲ. ಕನ್ನಡ ಚಿತ್ರವೊಂದರ ಮೇಲೆ ನಡೆಸಲಾದ ಯಶಸ್ವೀ ಪ್ರಯೋಗವೊಂದು ಮುಂದೆ ಇಡೀ ಭಾರತದ ಚಲನಚಿತ್ರೋದ್ಯಮದಲ್ಲೇ ಕ್ರಾಂತಿಯನ್ನೆಬ್ಬಿಸಿತು. ತಾಂತ್ರಿಕ ಆವಿಷ್ಕಾರವು ಕೆಲವೇ ವರ್‍ಷಗಳಲ್ಲಿ ಕನ್ನಡ ಚಿತ್ರೋದ್ಯಮವನ್ನೇ ಬುಡಮೇಲು ಮಾಡುವಷ್ಟು ಪ್ರಬಲವಾಗಿ ಬೆಳೆದದ್ದೊಂದು ವಿಪರ್‍ಯಾಸ!

ಅರವತ್ತರ ದಶಕದಲ್ಲಿ ಚಿತ್ರೀಕರಿಸಿದ ‘ಸತ್ಯ ಹರಿಶ್ಚಂದ್ರ’ ಕತೆಯ ಎರಡನೇ ಅವತರಣಿಕೆಯು ವರ್‍ಣಲೇಪನದೊಂದಿಗೆ ಸಿನಿಮಾಸ್ಕೋಪ್ ರೂಪಾಂತರದಲ್ಲಿ ಬಿಡುಗಡೆಯೂ ಆಗಿರುವುದು ಕನ್ನಡ ಚಲನಚಿತ್ರಗಳು ತಂತ್ರಜ್ಞಾನವನ್ನು ದುಡಿಸಿಕೊಳ್ಳಲು ಹಿಂದೆಬಿದ್ದಿಲ್ಲ ಎಂಬುದನ್ನು ನಿರೂಪಿಸಿದೆ. ಆದರೆ ಇದಕ್ಕೂ ಮೊದಲು ನಿರ್ಮಿಸಲಾದ ‘ಸತ್ಯ ಹರಿಶ್ಚಂದ್ರ’ ಚಿತ್ರವು ಭಾರತೀಯ ಚಲನಚಿತ್ರೋದ್ಯಮಕ್ಕೆ ತಂತ್ರಜ್ಞಾನದ ಹೊಸ ಆವಿಷ್ಕಾರ ನೀಡಿತು.

ಈ ಆವಿಷ್ಕಾರ ಘಟಿಸಿದ್ದು ೧೯೪೩ರಲ್ಲಿ. ಕನ್ನಡ ಚಿತ್ರರಂಗದ ಖಾತೆಯಲ್ಲಿ ಆವರೆಗೆ ಜಮಾ ಆಗಿದ್ದ ಚಿತ್ರಗಳ ಸಂಖ್ಯೆ ಹನ್ನೊಂದು ಮಾತ್ರ. ಆದರೂ ಕನ್ನಡ ಚಿತ್ರವೊಂದರ ಮೇಲೆ ಈ ಪ್ರಯೋಗ ನಡೆಸಲಾಯ್ತು. ಕುತೂಹಲದ ಸಂಗತಿಯೆಂದರೆ ಅದೊಂದು ಸಣ್ಣ ಆವಿಷ್ಕಾರ. ಆದರೆ ಆ ಕಾಲದಲ್ಲಿ ಅಂಥದೊಂದು ಸಾಧ್ಯತೆಯನ್ನು ಯಾರೂ ಕನಸು ಮನಸಿನಲ್ಲಿಯೂ ಊಹಿಸಿರಲಿಲ್ಲ. ಒಂದು ಮೂಲಭಾಷೆಯ ಚಿತ್ರದ ಸಂಭಾಷಣಾ ಟ್ರ್ಯಾಕನ್ನು ತೆಗೆದು ಅದರ ಸ್ಥಾನದಲ್ಲಿ ಮತ್ತೊಂದು ಭಾಷೆಯ ಸಂಭಾಣೆಯನ್ನು ಅಳವಡಿಸಿ, ‘ಹೊಸಚಿತ್ರ’ವೊಂದನ್ನು ನಿರ್‍ಮಿಸುವುದೇ ಆ ತಂತ್ರಜ್ಞಾನದ ಹಿಂದಿನ ಉದ್ದೇಶ. ಇದನ್ನು ಸಾಧ್ಯವಾಗಿಸಲು ಆರಿಸಿಕೊಂಡ ಚಿತ್ರ ‘ಸತ್ಯ ಹರಿಶ್ಚಂದ್ರ’.

ಕನ್ನಡದ ಖ್ಯಾತ ರಂಗಸಂಸ್ಥೆಗಳಲ್ಲೊಂದಾದ ಶ್ರೀ ಸಾಹಿತ್ಯ ಸಾಮ್ರಾಜ್ಯ (ಎಸ್‌ಎಸ್‌ಎಸ್) ನಾಟಕ ಮಂಡಲಿ ಸಂಸ್ಥೆಯ ಸ್ಥಾಪಕರು ಎಂ.ವಿ. ಸುಬ್ಬಯ್ಯನಾಯ್ಡುರವರು (೧೯೩೨) ಬಳಿಕ ಪಾಲುದಾರರಾದವರು ಆರ್. ನಾಗೇಂದ್ರರಾಯರು. ಇವರಿಬ್ಬರ ಜೋಡಿ ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿ ಯಶಸ್ಸು ಕಂಡದ್ದನ್ನು ಹಿಂದಿನ ಅಧ್ಯಾಯಗಳಲ್ಲಿ ಅರಿತಿದ್ದೇವೆ. ಈ ಸಂಸ್ಥೆಯು ಕನ್ನಡ ಚಿತ್ರವೊಂದನ್ನು ನಿರ್‍ಮಿಸಲು ನಿರ್‍ಧರಿಸಿತು. ಎಸ್‌ಎಸ್‌ಎಸ್ ನಾಟಕ ಮಂಡಳಿಯ ಸುಬ್ಬಯ್ಯನಾಯ್ಡು ಮತ್ತು ಆರ್.ನಾಗೇಂದ್ರರಾಯರು (ಆರೆನ್ನಾರ್) ಹರಿಶ್ಚಂದ್ರನ ಕಥೆಯನ್ನಾಧರಿಸಿದ್ದ ನಾಟಕವನ್ನು ಯಶಸ್ವಿಯಾಗಿ ರಂಗಕ್ಕೆ ತಂದಿದ್ದರು. ಅದಾಗಲೇ ಸಿನಿಮಾ ನಿರ್ಮಾಣದ ಎಲ್ಲ ವಿಭಾಗಗಳನ್ನು ಅರಿತಿದ್ದ ಆರೆನ್ನಾರ್‌ರವರು ‘ಹರಿಶ್ಚಂದ್ರ’ ಕತೆಯನ್ನು ಸೆಲ್ಯುಲಾಯ್ಡ್‌ಗೆ ಅಳವಡಿಸುವ ಯೋಚನೆಯಲ್ಲಿದ್ದರು. ತಮ್ಮ ಯೋಜನೆಯನ್ನು ತಮಿಳಿನ ಖ್ಯಾತ ನಿರ್ಮಾಪಕ ಎ.ವಿ.ಮೇಯಪ್ಪನ್‌ರವರಲ್ಲಿ ಪ್ರಸ್ತಾಪಿಸಿದರು. ಎವಿ‌ಎಂರವರ ಸರಸ್ವತಿ ಸಿನಿಲ್ಯಾಬ್, ಪ್ರಗತಿ ಪಿಕ್ಚರ್ಸ್ ಮತ್ತು ಎಸ್‌ಎಸ್‌ಎಸ್ ನಾಟಕ ಮಂಡಳಿ ಸಂಯುಕ್ತವಾಗಿ ಈ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದವು. ಮದರಾಸಿನ (ಅಂದಿನ) ಅಡ್ಮಿರಾಲಿಟಿ ಹೌಸ್‌ನಲ್ಲಿ ಚಿತ್ರೀಕರಣ ಆರಂಭವಾಯಿತು. ಆರೆನ್ನಾರ್ ಅವರೇ ನಿರ್ದೇಶನದ ಹೊಣೆ ಹೊತ್ತರು. ಜೊತೆಗೆ ವಿಶ್ವಾಮಿತ್ರನ ಪಾತ್ರವನ್ನೂ ವಹಿಸಿದರು. ವಿಶ್ವಾಮಿತ್ರನ ಪಾತ್ರವನ್ನು ಹೆಚ್ಚು ನಾಟಕೀಯಗೊಳಿಸದೆ, ಸಹಜ ಮಾನವನಂತೆ ರೂಪಾಂತರಿಸಿದ್ದು ಆ ಕಾಲಕ್ಕೊಂದು ವಿಶೇಷ. ಸುಬ್ಬಯ್ಯನಾಯ್ಡುರವರು ಹರಿಶ್ಚಂದ್ರ ಹಾಗೂ ಲಕ್ಷ್ಮೀಬಾಯಿಯವರು ಚಂದ್ರಮತಿ ಪಾತ್ರ ನಿರ್‍ವಹಿಸಿದರು.

ಅದು ಎರಡನೇ ಮಹಾಯುದ್ಧದ ಕಾಲ. ಎಲ್ಲೆಲ್ಲೂ ಕಂಟ್ರೋಲ್. ಹಣ, ಕಚ್ಛಾವಸ್ತುಗಳ ಅಭಾವ. ಯಾವುದೇ ಚಿತ್ರ ಹನ್ನೊಂದು ಸಾವಿರ ಅಡಿಗಳಿಗಿಂತಲೂ ಉದ್ದವಿರಬಾರದೆಂದು ಸರ್ಕಾರ ನಿಷೇಧ ಹೇರಿತ್ತು. ಆ ಮಿತಿಗಳಲ್ಲಿಯೇ ೧೦,೯೯೦ ಅಡಿಯ ‘ಸತ್ಯ ಹರಿಶ್ಚಂದ್ರ’ ಚಿತ್ರವನ್ನು ಆರೆನ್ನಾರ್ ಅಚ್ಚುಕಟ್ಟಾಗಿ ರೂಪಿಸಿದ್ದರು. ಆ ಕಾಲದಲ್ಲೇ ತಮ್ಮ ತಂದೆ ತಾಂತ್ರಿಕ ಕೌಶಲ್ಯಗಳನ್ನು ಬಳಸಿಕೊಂಡಿರುವ ವಿಧಾನಗಳನ್ನು ಪುತ್ರ ಆರ್.ಎನ್. ಜಯಗೋಪಾಲ್ ದಾಖಲಿಸಿದ್ದಾರೆ. ಅದರಲ್ಲೂ ಲೋಹಿತಾಶ್ವನಿಗೆ ಸರ್‍ಪ ಕಚ್ಚುವ ದೃಶ್ಯವನ್ನು ಹಾವು, ಹುತ್ತ ಮತ್ತು ಬಾಲಕನನ್ನು ಹಲವಾರು ಕೋನಗಳಲ್ಲಿ ಚಿತ್ರಿಸಿ ಕುತೂಹಲದ ‘ಟೆಂಪೋ’ ಕಾಯ್ದಿಟ್ಟುಕೊಂಡ ರೀತಿ ಅನನ್ಯವಾಗಿತ್ತೆಂದು ಅವರು ಹೇಳಿದ್ದಾರೆ. ‘ಸತ್ಯ ಹರಿಶ್ಚಂದ್ರ’ ಆ ಕಾಲಕ್ಕೆ ಭರ್ಜರಿ ಯಶಸ್ಸು ಸಾಧಿಸಿತ್ತು.

ಎ.ಟಿ.ಕೃಷ್ಣಸ್ವಾಮಿ ಎಂಬುವರು ಎ.ವಿ.ಎಂ ಪರವಾಗಿ ಈ ಚಿತ್ರದ ನಿರ್ಮಾಣದಲ್ಲಿ ತೊಡಗಿಸಿಕೊಂಡು ಆರೆನ್ನಾರ್‌ರವರಿಗೆ ಎಲ್ಲ ರೀತಿಯಿಂದಲೂ ನೆರವಾದರು.

ಆದರೆ ಈ ತಾಂತ್ರಿಕ ಆವಿಷ್ಕಾರಕ್ಕೆ ಮೂಲಕಾರಣರಾದವರು ಶಬ್ದ ಗ್ರಾಹಕ ವಿ.ಎಸ್. ರಾಘವನ್. ಭಾರತೀಯ ಚಿತ್ರರಂಗದ ಅತ್ಯುತ್ತಮ ಶಬ್ದಗ್ರಾಹಕರಲ್ಲೊಬ್ಬರಾದ ವಿ.ಎಸ್.ರಾಘವನ್‌ರವರನ್ನು ಇಂದು ಎಲ್ಲರೂ ಮರೆತೇ ಹೋಗಿದ್ದಾರೆ. ಅವರು ಆ ಕ್ಷೇತ್ರಕ್ಕೆ ಕೊಟ್ಟ ಕಾಣಿಕೆ ಯಾರ ನೆನಪಿಗೂ ಬರುತ್ತಿಲ್ಲ. ಮದರಾಸಿನ ಚಲನಚಿತ್ರ ನಿರ್ಮಾಣ ಕೇಂದ್ರಗಳಲ್ಲಿ ಶಬ್ದಗ್ರಹಣ ವೃತ್ತಿಯನ್ನು ಕಲಿಸಿಕೊಡುತ್ತಿದ್ದ ಸೌಂಡ್ ಇಂಜಿನಿಯರ್ ಸಿ.ಇ.ಬ್ರಿಗ್ಸ್ ಹತ್ತಿರ ರಾಘವನ್ ಶಿಷ್ಯವೃತ್ತಿ ಮಾಡಿದವರು. ಗುರು ಧಾರಾಳವಾಗಿ ತಮ್ಮ ಜ್ಞಾನವನ್ನು ಶಿಷ್ಯನಿಗೆ ಎರೆದಿದ್ದರು. ಅವರಿಂದ ಶಬ್ದಗ್ರಹಣದ ಎಲ್ಲ ಸಾಧ್ಯತೆಗಳನ್ನು ಕರತಲಾಮಲಕ ಮಾಡಿಕೊಂಡ ರಾಘವನ್ ತಮ್ಮದೇ ಒಂದು ಶಬ್ದಗ್ರಹಣ ಕೇಂದ್ರವನ್ನು ತೆರೆದಿದ್ದರು. ಅನಂತರ ತಮ್ಮ ವೃತ್ತಿಯಲ್ಲಿ ನಾನಾ ಪ್ರಯೋಗಗಳನ್ನು ಮಾಡುತ್ತಾ ಹೋದರು. ಅವರ ನೆಚ್ಚಿನ ಆಸಕ್ತಿ ಎಂದರೆ ‘ಡಬ್ಬಿಂಗ್’.

ಒಂದು ಚಲನಚಿತ್ರದಲ್ಲಿ ಶಬ್ದಗಳ ಬೇರೆ ಬೇರೆ ಟ್ರ್ಯಾಕುಗಳ ಸಂಯೋಜನೆಯಿರುತ್ತದೆ. ಸಂಭಾಷಣೆ, ಹಿನ್ನೆಲೆ ಸಂಗೀತ, ವಿಶೇಷ ಪರಿಣಾಮ ಬೀರುವ ಶಬ್ದಗಳು ಹೀಗೆ ವಿವಿಧ ಶಾಬ್ದಿಕ ಟ್ರ್ಯಾಕುಗಳಲ್ಲಿ ಅವುಗಳನ್ನು ಮುದ್ರಿಸಿಕೊಳ್ಳಲಾಗುತ್ತದೆ. ಅಂತಿಮವಾಗಿ ಈ ಎಲ್ಲಾ ಟ್ರ್ಯಾಕ್‌ನ ಶಬ್ದಗಳನ್ನು ಒಂದೇ ಟ್ರ್ಯಾಕಿಗೆ ಸಂಯೋಜಿಸಿ ನಂತರ ದೃಶ್ಯದೊಡನೆ ಮರುಮುದ್ರಿಸಿದಾಗ ಚಿತ್ರ ಸಿದ್ಧವಾಗುತ್ತದೆ. ಒಮ್ಮೆ ರಾಘವನ್‌ರವರ ತಲೆಯಲ್ಲಿ ಯೋಚನೆಯೊಂದು ಹೊಳೆಯಿತು. ಒಂದು ಭಾಷೆಯ ಸಂಭಾಷಣಾ ಟ್ರ್ಯಾಕ್ ತೆಗೆದು ಆ ಸ್ಥಾನದಲ್ಲಿ ಮತ್ತೊಂದು ಭಾಷೆಯ ಟ್ರ್ಯಾಕ್ ಜೋಡಿಸಿದರೆ ಹೇಗೆ? ಆ ಸಾಧ್ಯತೆಯ ಬಗ್ಗೆ ಸಣ್ಣ ಪ್ರಯೋಗ ನಡೆಸಿದರು. ಟ್ರ್ಯಾಕ್ ಬದಲಿಸುವುದು ಸುಲಭವಾಗಿತ್ತು. ಆದರೆ ತಂತ್ರಜ್ಞಾನವನ್ನು ಮೀರಿದ ಕೆಲವು ತೊಡಕುಗಳಿದ್ದವು. ಪಾತ್ರಗಳು ಮಾತನಾಡದ ಹಿನ್ನೆಲೆಯ ನಿರೂಪಣಾ ಮಾತುಗಳನ್ನು ಜೋಡಿಸುವುದು ಸುಲಭ ಸಾಧ್ಯ. ಆದರೆ ಒಂದು ಭಾಷೆಯ ಪಾತ್ರವು ಸಂಭಾಷಣೆಯನ್ನು ಹೇಳಿದ ರೀತಿ ಮತ್ತು ಮುಖಭಾವಕ್ಕೆ ತಕ್ಕಂತೆ ಮತ್ತೊಂದು ಭಾಷೆಯ ಸಂಭಾಷಣೆಯಿರಬೇಕು. ಅರ್ಥವೂ ಕೆಡಬಾರದು. ಮುಖ್ಯವಾಗಿ ಒಂದು ಭಾಷೆಯ ಸಂಭಾಷಣೆಯ ಪಾತ್ರದ ತುಟಿ ಚಲನೆಗಳಿಗೆ ಅದರ ಬದಲಿ ಭಾಷೆಯ ಸಂಭಾಷಣೆಯು ಸರಿಹೊಂದಿಕೊಳ್ಳಬೇಕು. ಮೂಲಭಾಷೆಯ ಸ್ವರವ್ಯಂಜನ ಮಾತ್ರಾಗಣಗಳನ್ನು ಅನುಸರಿಸಿಯೇ ಬದಲಿ ಭಾಷೆಯ ಸಂಭಾಷಣೆ ರಚನೆಯಾಗಬೇಕು. ಉಭಯಭಾಷಾ ವಿಶಾರದರ ಅಗತ್ಯ ಅಲ್ಲಿ ಹೆಚ್ಚು ಬೀಳುತ್ತದೆ. ಲಾಂಗ್‌ಶಾಟ್‌ನಲ್ಲಿ ತುಟಿ ಚಲನೆ ಹೆಚ್ಚು ಕಡಿಮೆಯಾದರೂ ಆದೀತು. ಆದರೆ ಕ್ಲೋಸ್‌ಅಪ್‌ನಲ್ಲಿ ಭಂಗವಾದರೆ ಆಭಾಸ ಖಂಡಿತ. ಜೊತೆಗೆ ಮೂಲಭಾಷೆಯಲ್ಲಿ ಸಂಭಾಷಣೆ ಒಪ್ಪಿಸಿದ ಕಲಾವಿದನ ಧ್ವನಿಯ ಪ್ರಮಾಣಕ್ಕೆ ಬದಲೀ ಭಾಷೆಯ ಧ್ವನಿಯೂ ಬೆರೆಯಬೇಕು. ಮುಖದ ಭಾವ ಮತ್ತು ಧ್ವನಿಯ ಪ್ರಮಾಣದಲ್ಲಿ ಹೊಂದಾಣಿಕೆಯಾಗದೆ ಬೇರೆ ಬೇರೆಯಾದಾಗ ದೃಶ್ಯ ಕೃತಕವಾಗಿ ಕಾಣುತ್ತದೆ.

ರಾಘವನ್ ಈ ವಿಷಯವನ್ನು ಎ.ಟಿ.ಕೃಷ್ಣಮೂರ್ತಿಯವರಲ್ಲಿ ಪ್ರಸ್ತಾಪಿಸಿದರು. ಆ ಪರಿಕಲ್ಪನೆಯನ್ನು ಕೇಳಿಯೇ ಕೃಷ್ಣಮೂರ್ತಿ ಉತ್ಸಾಹಿತರಾದರು. ಆದರೆ ಮೇಯಪ್ಪನ್‌ರವರ ಮುಂದೆ ಪ್ರಸ್ತಾಪಿಸಿದಾಗ ಅವರಿಂದ ತಣ್ಣನೆಯ ಪ್ರತಿಕ್ರಿಯೆ ಬಂತು. ವ್ಯವಹಾರ ಚತುರ ಎವಿ‌ಎಂರವರಿಗೆ ಈ ಪ್ರಯೋಗ ಯಶಸ್ವಿಯಾಗುವ ಬಗ್ಗೆ ಸಂಶಯಗಳಿದ್ದವು. ಕೃಷ್ಣಮೂರ್ತಿಯವರು ಹಿಡಿದ ಹಠ ಬಿಡಲಿಲ್ಲ. ಅವರ ಒತ್ತಾಯಕ್ಕೆ ಮಣಿದ ಎವಿ‌ಎಂ ಪ್ರಾಯೋಗಿಕವಾಗಿ ಒಂದು ರೀಲ್ ‘ಸತ್ಯ ಹರಿಶ್ಚಂದ್ರ’ ಕನ್ನಡ ಚಿತ್ರವನ್ನು ತಮಿಳು ಭಾಷೆಗೆ ಡಬ್ ಮಾಡಲು ಅವಕಾಶ ನೀಡಿದರು. ಆರೆನ್ನಾರ್ ಸಹ ಪ್ರಯೋಗಶೀಲರು ತಾನೇ? ಅವರು ಈ ಪ್ರಕ್ರಿಯೆಯಲ್ಲಿ ಅತ್ಯುತ್ಸಾಹದಿಂದ ಭಾಗಿಯಾದರು. ಮೂಲ ಕನ್ನಡ ಭಾಷೆಯ ಸಂಭಾಷಣೆಗಳನ್ನು ರಚಿಸಿದ್ದ ಅವರು ತಮಿಳಿಗೆ ಅನುವಾದಿಸಲು ಕೃಷ್ಣಮೂರ್ತಿಯವರಿಗೆ ನೆರವಾದರು. ಕನ್ನಡ ಕಲಾವಿದರ ತುಟಿಗಳಿಗೆ ತಮಿಳು ಡೈಲಾಗುಗಳು ಅರ್ಥಕೆಡದಂತೆ ಹೊಂದಿಕೊಳ್ಳುವಂತೆ ಮಾಡಲು ಆರೆನ್ನಾರ್ ಶ್ರಮಿಸಿದರು. ಆ ಕಾಲದಲ್ಲಿ ಅದು ಸುಲಭದ ಮಾತಾಗಿರಲಿಲ್ಲ. ಡಬ್ಬಿಂಗ್ ಯೋಚನೆಯನ್ನು ಇಟ್ಟುಕೊಳ್ಳದೆಯೇ ತೆಗೆದ ಸಿನಿಮಾ ಅದು. ಒಂದು ರೀಲಿನ ಫಲಿತಾಂಶ ಆಶ್ಚರ್ಯ ಹುಟ್ಟಿಸಿತ್ತು. ಎಲ್ಲರೂ ತಮ್ಮ ಕಾರ್ಯದ ಪ್ರಗತಿ ಕಂಡು ಸಂತೃಪ್ತಿ ವ್ಯಕ್ತಪಡಿಸಿದರು. ಆದರೆ ಹೆಚ್ಚು ಸಂತುಷ್ಟರಾದ ಎವಿ‌ಎಂ ಅವರು ಇಡೀ ಚಿತ್ರವನ್ನೇ ಡಬ್ ಮಾಡಲು ಹಸಿರು ನಿಶಾನೆ ತೋರಿಸಿದರು.

ಅದೇ ವೇಳೆ ಅಡ್ಮಿರಾಲಿಟಿ ಹೌಸ್‌ನಿಂದ ಅನತಿ ದೂರದಲ್ಲಿದ್ದ ಜೆಮಿನಿ ಸ್ಟುಡಿಯೋನಲ್ಲಿ ಆ ಕಾಲದ ಪ್ರಸಿದ್ಧನಟಿ ಕನ್ನಾಂಬ ತಮ್ಮ ಪತಿ ಕೆ.ಬಿ.ನಾಗಭೂಷಣಂ ಜೊತೆಗೂಡಿ ತಮಿಳು ಭಾಷೆಯಲ್ಲೂ ‘ಹರಿಶ್ಚಂದ್ರ’ ಚಿತ್ರ ನಿರ್ಮಿಸುತ್ತಿದ್ದರು. ಅವರು ಚಂದ್ರಮತಿಯಾಗಿ, ನಟ ಬಿ.ಯು.ಚಿನ್ನಪ್ಪ ಹರಿಶ್ಚಂದ್ರನಾಗಿಯೂ ಪಾತ್ರ ವಹಿಸಿದ್ದರು.

ಪ್ರಸಿದ್ಧ ತಮಿಳು ನಟರಿದ್ದ ತಮಿಳಿನ ‘ಸತ್ಯಹರಿಶ್ಚಂದ್ರ’ ಹಾಗೂ ತಮಿಳು ಜನರಿಗೆ ಅಪರಿಚಿತರಾಗಿದ್ದ (ಆರೆನ್ನಾರ್ ಹೊರತುಪಡಿಸಿ) ಕನ್ನಡದ ಕಲಾವಿದರೇ ಇದ್ದ ಕನ್ನಡದ ‘ಸತ್ಯ ಹರಿಶ್ಚಂದ್ರ’ ಚಿತ್ರದ ತಮಿಳು ಡಬ್ ಅವತರಣಿಕೆಗಳು ಸರಿಸುಮಾರು ಏಕಕಾಲಕ್ಕೆ ಬಿಡುಗಡೆಯಾದವು. ಕುತೂಹಲದ ವಿಷಯವೆಂದರೆ, ಡಬ್ ಆವೃತ್ತಿಯೇ ಹೆಚ್ಚು ಯಶಸ್ಸು ಗಳಿಸಿತೆಂದು ಚಿತ್ರ ಇತಿಹಾಸಕಾರ ರ್‍ಯಾಂಡರ್ ಗೈ ಹೇಳುತ್ತಾರೆ.

ಹೆಚ್ಚು ವೆಚ್ಚವಿಲ್ಲದೆಯೇ ಮತ್ತೊಂದು ಭಾಷೆಯ ಚಿತ್ರವನ್ನು ತೆಗೆಯುವ ‘ಡಬ್ಬಿಂಗ್’ ತಂತ್ರಜ್ಞಾನಕ್ಕೆ ಹೀಗೆ ಕನ್ನಡ ಚಿತ್ರವೊಂದು ನಾಂದಿ ಹಾಡಿತು. ಇದು ಕ್ರಮೇಣ ಒಂದು ದೊಡ್ಡ ಉದ್ಯಮವಾಗಿ ಬೆಳೆಯಿತು. ಆಗೆಲ್ಲ ತಯಾರಾಗುತ್ತಿದ್ದ ಚಿತ್ರಗಳೆಲ್ಲ ಚಿರಪರಿಚಿತವಾದ ಪೌರಾಣಿಕ, ಐತಿಹಾಸಿಕ ಮತ್ತು ಜಾನಪದ ಕತೆಗಳನ್ನು ಆಧರಿಸಿರುತ್ತಿದ್ದವು. ಹೀಗಾಗಿ ಪ್ರೇಕ್ಷಕರಿಗೆ ಒಂದು ಭಾಷೆಯ ಚಿತ್ರವನ್ನು ಮತ್ತೊಂದು ಭಾಷೆಗೆ ಡಬ್ ಮಾಡುವುದರಿಂದ ಚಿತ್ರಗಳನ್ನು ಸುಲಭವಾಗಿ ತಲುಪಿಸಬಹುದಿತ್ತು. ಪೌರಾಣಿಕ ಚಿತ್ರಗಳಿಗೆ ಹೆಸರಾದ ತೆಲುಗು ಚಿತ್ರರಂಗ ಡಬ್ಬಿಂಗ್‌ನ ಹುಲುಸಾದ ಬೆಳೆ ತೆಗೆಯಿತು. ಕನ್ನಡವೂ ಸೇರಿದಂತೆ ಹಿಂದೀ, ತಮಿಳು ಭಾಷೆಗೆ ತೆಲುಗು ಚಿತ್ರಗಳನ್ನು ಡಬ್ ಮಾಡತೊಡಗಿದರು. ತೆಲುಗಿನ ‘ಮಾಯಾ ಬಜಾರ್’, ‘ಲವಕುಶ’ ಮುಂತಾದವು ಮೂಲಭಾಷೆಯ ಗಳಿಕೆಗಿಂತ ಹೆಚ್ಚು ಗಳಿಕೆಯನ್ನು ಡಬ್ ಆವೃತ್ತಿಯಲ್ಲಿ ಗಳಿಸಿದವು. ೧೯೬೦ರ ದಶಕದ ಆರಂಭದವರೆಗೆ ಈ ಅನ್ಯಭಾಷೆಗಳಿಂದ ಡಬ್ ಆದ ಕನ್ನಡ ಚಿತ್ರಗಳು ಇಡೀ ಕನ್ನಡ ಚಿತ್ರೋದ್ಯಮವನ್ನೇ ಹಿಂಡಿ ಹಾಕಿದವು. ಕನ್ನಡದ ಅಸ್ತಿತ್ವವೇ ಕರಗಿ ಹೋಗುವ ಅಪಾಯ ಎದುರಾಯಿತು. ಸಾಹಿತಿ, ಕಲಾವಿದರು ಮತ್ತು ಕನ್ನಡ ಚಳುವಳಿಗಾರರ ಹೋರಾಟದಿಂದ ಡಬ್ಬಿಂಗ್ ಸಂಸ್ಕೃತಿ ನಿಂತಿತು. ಕನ್ನಡ ಚಿತ್ರವೊಂದು ನಾಂದಿ ಹಾಡಿದ ಡಬ್ಬಿಂಗ್ ತಂತ್ರಜ್ಞಾನ ಕನ್ನಡಕ್ಕೆ ಮುಳುವಾದದ್ದು ಹೀಗೆ.

ಅದೇನೇ ಇರಲಿ ಇಂದು ‘ಡಬ್ಬಿಂಗ್’ ತಂತ್ರಜ್ಞಾನವು ಜಗತ್ತಿನ ದೊಡ್ಡ ಉದ್ಯಮವಾಗಿ ಬೆಳೆದಿದೆ; ಡಬ್ಬಿಂಗ್ ಕಲಾವಿದರ ಪ್ರಕಾರವೇ ಹುಟ್ಟಿಕೊಂಡಿದೆ. ವಿದೇಶಿ ಭಾಷೆಯ ಚಿತ್ರಗಳೂ ಈಗ ಭಾರತೀಯ ಭಾಷೆಗೆ ಡಬ್ ಆಗುತ್ತಿವೆ. ಆದರೆ ಕನ್ನಡ ಚಿತ್ರರಂಗ ಮತ್ತು ಕರ್ನಾಟಕ ಸರ್ಕಾರ ಡಬ್ಬಿಂಗ್ ಅನ್ನು ತಾತ್ವಿಕವಾಗಿ ವಿರೋಧಿಸಿರುವುದು ಕನ್ನಡ ಚಿತ್ರರಂಗದ ದೃಷ್ಟಿಯಿಂದ ಒಳ್ಳೆಯದಾಗಿದೆ.
***

ಕನ್ನಡದ ಪ್ರಥಮ ಚಿತ್ರ ‘ಸತಿ ಸುಲೋಚನ’ದಲ್ಲಿ ನಟರಾಗಿ ಮತ್ತು ಸಂಗೀತ ನಿರ್‍ದೇಶಕರಾಗಿ ಸಿನಿಮಾ ಜಗತ್ತನ್ನು ಪ್ರವೇಶಿಸಿದ ಆರ್.ನಾಗೇಂದ್ರರಾಯರು (ಆರೆನ್ನಾರ್) ಕನ್ನಡ ನಾಡು ಕಂಡ ವಿಶೇಷ ಪ್ರತಿಭೆ. ಕಲೆಗಾಗಿಯೇ ಜೀವನ ಅರ್‍ಪಿಸಿಕೊಂಡ ಜೀವ. ರಂಗಭೂಮಿಯಲ್ಲಿ ನಟರಾಗಿ, ನಾಟಕ ಕಂಪನಿಯ ಮಾಲೀಕರಾಗಿ, ಚಲನಚಿತ್ರಗಳಲ್ಲಿ ನಟ, ಗೀತರಚನಕಾರ, ಸಂಗೀತ ನಿರ್‍ದೇಶಕ, ಚಿತ್ರ ನಿರ್ಮಾಪಕ, ನಿರ್ದೇಶಕರಾಗಿ ಅವರು ಮಾಡಿದ ಸೇವೆ ಅನುಪಮ. ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿದವರಲ್ಲಿ ಆರ್‌ಎನ್‌ಆರ್ ಮೊದಲಿಗರು. ತಮ್ಮ ಆರ್‌ಎನ್‌ಆರ್ ಚಿತ್ರ ಸಂಸ್ಥೆಯ ಮೂಲಕ ಅನೇಕ ಅರ್ಥಪೂರ್ಣ ಕನ್ನಡ ಚಿತ್ರಗಳನ್ನು ನಿರ್‍ಮಿಸಿ ನಿರ್ದೇಶಿಸಿದರು. ತಮ್ಮ ಸಹಜ ನಟನೆಯಿಂದ ಅಭಿನಯಕ್ಕೊಂದು ಹೊಸ ಆಯಾಮ ನೀಡಿದರು.

ಬಹುಪಾಲು ಆರಂಭದ ಕನ್ನಡದ ಚಿತ್ರಗಳ ಪ್ರೇಕ್ಷಕರಿಗೆ ಆರ್‌ಎನ್‌ಆರ್ ಹೆಚ್ಚು ಪರಿಚಿತರು. ಅರವತ್ತರ ದಶಕದಲ್ಲಿ ಹಾಸ್ಯಪಾತ್ರ, ಖಳಪಾತ್ರ, ಪೋಷಕ ಪಾತ್ರಗಳಲ್ಲೇ ಅವರು ಹೆಚ್ಚಾಗಿ ನಟಿಸಿದರು. ಆದರೆ ಅವರು ಸಾಹಸ ಪಾತ್ರ, ವಿಶೇಷವಾಗಿ ಕತ್ತಿವರಸೆಗಳಲ್ಲಿ ನಿಷ್ಣಾತರಾಗಿ ಅಭಿನಯಿಸುತ್ತಿದ್ದರೆಂಬ ವಿಚಾರ ಇಂದಿನ ತಲೆಮಾರಿಗೆ ತಿಳಿಯದು. ತಮಿಳಿನ ‘ಅಪೂರ್ವ ಸಹೋದರ್’ಗಳು ಚಿತ್ರ ಹಾಗೂ ‘ಅರಸಿಳನ್ ರಾಜಕುಮಾರಿ’ ಚಿತ್ರದಲ್ಲಿ ಎಂಜಿ‌ಆರ್‌ಗೆ ಕತ್ತಿ ಕಾಳಗ ಕಲಿಸಿಕೊಡುವ ಗುರುವಾಗಿ ಮತ್ತು ‘ವಿಜಯನಗರದ ವೀರಪುತ್ರ’ದಲ್ಲಿ ಖಳನಾಯಕನಾಗಿ ಅವರು ಪ್ರದರ್ಶಿಸಿರುವ ಸಾಹಸ ದೃಶ್ಯಗಳು ಇಂದಿಗೂ ಅಮೋಘವೆನಿಸುತ್ತವೆ. ರಾಯರು ಕತ್ತಿ ವರಸೆ, ಕುದುರೆ ಸವಾರಿಯನ್ನು ತಮ್ಮ ಮಧ್ಯವಯಸ್ಸಿನಲ್ಲಿ ಚಿತ್ರಗಳಿಗಾಗಿ ಕಲಿತರು.

ಆರಂಭದಲ್ಲಿ ಕನ್ನಡ ಚಿತ್ರಗಳ ನಿರ್ಮಾಣ ವೆಚ್ಚ ತಗ್ಗಿಸಲು ಅವರು ಏಕಕಾಲಕ್ಕೆ ಎರಡು-ಮೂರು ಭಾಷೆಗಳಲ್ಲಿ ಒಂದೇ ಚಿತ್ರವನ್ನು ಚಿತ್ರಿಸುವ ಪ್ರಯೋಗ ನಡೆಸಿದರು. ‘ಜಾತಕ ಫಲ’ (೧೯೫೩) ಕನ್ನಡ ಚಿತ್ರದ ಜೊತೆಗೆ ‘ಜಾತಕಫಲಂ’ (ತೆಲುಗು), ‘ಜಾತಕಂ’ (ತಮಿಳು) ಹಾಗೂ ‘ಪ್ರೇಮದ ಪುತ್ರಿ’ (೧೯೫೭) ಜೊತೆಗೆ ‘ಪ್ರೇಮೇ ದೈವಂ’ (ತೆಲುಗು) ಮತ್ತು ‘ಅನ್ಬೇ ದೈವಂ’ (ತಮಿಳು) ಚಿತ್ರಗಳನ್ನು ತೆರೆಗೆ ನೀಡಿದರು. ಇದಷ್ಟಲ್ಲದೆ ಆರ್‌ಎನ್‌ಆರ್ ಲಾಂಛನದಡಿ ಅದ್ದೂರಿಯ ‘ವಿಜಯನಗರದ ವೀರಪುತ್ರ’ (೧೯೬೧), ‘ಆನಂದಬಾಷ್ಪ’ (೧೯೬೩), ‘ಪತಿಯೇ ದೈವ’ (೧೯೬೪) ಚಿತ್ರಗಳನ್ನೂ ತೆರೆಗಿತ್ತರು. ‘ಪತಿಯೇ ದೈವ’ದ ನಂತರ ಅವರು ಚಿತ್ರ ನಿರ್‍ಮಾಣ ನಿಲ್ಲಿಸಿದರು. ಅವರ ಪುತ್ರ ಆರ್.ಎನ್.ಸುದರ್ಶನ್ ‘ನಗುವ ಹೂವು’ ಮೂಲಕ ಮತ್ತೆ ಆರ್‌ಎನ್‌ಆರ್ ಪರಂಪರೆಯನ್ನು ಮುಂದುವರಿಸಲು ಯತ್ನಿಸಿದರು. ‘ಹಣ್ಣೆಲೆ ಚಿಗುರಿದಾಗ’ (೧೯೬೮) ಚಿತ್ರಕ್ಕಾಗಿ ರಾಜ್ಯ ಸರ್‍ಕಾರದ ಅತ್ಯುತ್ತಮ ನಟ ಪ್ರಶಸ್ತಿಯನ್ನು, ‘ನಮ್ಮ ಮಕ್ಕಳು’ (೧೯೬೯) ಚಿತ್ರದ ನಿರ್‍ದೇಶನಕ್ಕಾಗಿ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿದರು.

ಚಿತ್ರರಂಗದಲ್ಲಿ ಭಾವಾವೇಶದ ಸಂಭಾಷಣೆ ಒಪ್ಪಿಸುವಿಕೆ ಮತ್ತು ನಾಟಕೀಯತೆಯೇ ವಿಜೃಂಭಿಸುತ್ತಿದ್ದ ಕಾಲದಲ್ಲಿ ಆರೆನ್ನಾರ್ ಸಹಜತೆಗೆ ಮತ್ತು ನಿರುದ್ವಿಗ್ನ ಶೈಲಿಗೆ ಒಲಿದರು. ಅಲಂಕಾರಿಕ ನಾಟಕೀಯ ಸಂಭಾಷಣೆಗಳು ಟ್ರೆಂಡ್ ಸೃಷ್ಟಿಸಿದ್ದ ಕಾಲದಲ್ಲಿ ಅವರು ಆಡುಮಾತಿನ ಸ್ವಾರಸ್ಯಪೂರ್‍ಣ ಸಂಭಾಷಣೆಯ ರಚನೆಗೆ ಒತ್ತುಕೊಟ್ಟರು. ನಟನೆಯಲ್ಲಿ ಸಹಜತೆಯನ್ನು ಬಿಟ್ಟು ಕೊಡಲಿಲ್ಲ. ಖಳನ ಪಾತ್ರವಿರಲಿ (ರಣಧೀರ ಕಂಠೀರವ, ವಿಜಯನಗರದ ವೀರಪುತ್ರ) ಹಿರಿಯನ ಪಾತ್ರವಿರಲಿ, ಹಾಸ್ಯ ಪಾತ್ರವಿರಲಿ ಅವರು ಸಂಪೂರ್‍ಣವಾಗಿ ಭಾವನೆಗಳಿಗೆ ಪ್ರಧಾನತೆ ನೀಡುತ್ತಿದ್ದರು. ಆಂಗಿಕ ಅಭಿನಯಕ್ಕಿಂತಲೂ ಮುಖಭಾವದಲ್ಲೇ ಎಲ್ಲ ಭಾವಗಳನ್ನು ಹೊರಹೊಮ್ಮಿಸುತ್ತಿದ್ದರು. ಅವರು ತಮ್ಮ ಚಿತ್ರಗಳಲ್ಲಿ ಕ್ಲೋಸ್ ಅಪ್ ಷಾಟ್‌ಗಳಿಗೆ ಹೆಚ್ಚಿನ ಒತ್ತು ನೀಡಿರುವುದು ಈ ಕಾರಣಕ್ಕಾಗಿಯೇ. ‘ಹಣ್ಣೆಲೆ ಚಿಗುರಿದಾಗ’ ನಾಗೇಂದ್ರರಾಯರ ಅಭಿನಯದ ಪ್ರಾತಿನಿಧಿಕ ಚಿತ್ರ ಎನ್ನುವುದರಲ್ಲಿ ಸಂದೇಹವಿಲ್ಲ. ಅವರ ನಿರ್ದೇಶನ ಶೈಲಿಯೂ ಸಹ ಆಡಂಬರ, ಅಟಾಟೋಪಗಳಿಲ್ಲದ ನೇರ ಶೈಲಿ. ಕತೆಯನ್ನು ನೇರವಾಗಿ ಹೇಳುವ ಕಲೆ ಸಿದ್ಧಿಸಿತ್ತು. ಚಲನಚಿತ್ರದ ಸಾಮರ್ಥ್ಯವನ್ನು ಬಲ್ಲ ಅವರು ಕ್ಲೋಸ್ ಅಪ್ ಷಾಟ್‌ಗಳನ್ನೇ ಹೆಚ್ಚು ಬಳಸಿ ಕಲಾವಿದರ ಮುಖಭಾವವನ್ನು ಸೆರೆಹಿಡಿಯಲು ಒತ್ತು ನೀಡುತ್ತಿದ್ದರು. ಸಮಾಜದ ಸಮಸ್ಯೆಗಳನ್ನು ಕುರಿತು ಚಿತ್ರ ಮಾಡುವುದರಲ್ಲಿ ಅವರಿಗೆ ಆಸಕ್ತಿ. ‘ಪ್ರೇಮದ ಪುತ್ರಿ’ (೧೯೫೭) ಮತ್ತು ‘ನಮ್ಮ ಮಕ್ಕಳು’ ರಾಷ್ಟ್ರಪ್ರಶಸ್ತಿ ಪಡೆದ ಅವರ ನಿರ್ದೇಶನದ ಚಿತ್ರಗಳು.

ಸೈಡ್ ರೀಲ್

* ಅಂದಹಾಗೆ ಕನ್ನಡ ಸಿನಿಮಾ ರಂಗದಲ್ಲಿ ಮೊದಲ ‘ಪದ್ಮಶ್ರೀ’ ಪ್ರಶಸ್ತಿ ಪಡೆದವರು ಆರ್‌ಎನ್‌ಆರ್ (೧೯೭೬). ಅದಕ್ಕೂ ಮೊದಲು ಬಿ.ಸರೋಜಾದೇವಿ (೧೯೬೯) ಅವರಿಗೆ ಪದ್ಮಶ್ರೀ ದೊರಕಿದ್ದರೂ ಅದು ದಕ್ಕಿದ್ದು ಅವರು ತಮಿಳು ಚಿತ್ರಗಳಲ್ಲಿ ಸಲ್ಲಿಸಿದ ಸೇವೆಗಾಗಿ. ನಾಟಕರತ್ನ ಗುಬ್ಬಿ ವೀರಣ್ಣ(೧೯೭೨)ನವರಿಗೆ ಆರೆನ್ನಾರ್‌ರವರಿಗಿಂತ ಮೊದಲು ‘ಪದ್ಮಶ್ರೀ’ ದೊರೆತರೂ, ಅವರ ರಂಗಭೂಮಿ ಸೇವೆಯನ್ನು ಪರಿಗಣಿಸಿ ನೀಡಿದ ಪ್ರಶಸ್ತಿಯಾಗಿತ್ತು.

 

* ಆರ್‌ಎನ್‌ಆರ್ ಅವರು ತಮ್ಮ ಮೂವರು ಪುತ್ರರನ್ನು ಸಿನಿಮಾರಂಗದ ವಿವಿಧ ಭಾಗಗಳಲ್ಲಿ ನಿಯೋಜಿಸಿದರು. ಅವರ ಗರಡಿಯಲ್ಲಿ ಪಳಗಿದ ಆರ್.ಎನ್.ಜಯಗೋಪಾಲ್ ನಮ್ಮ ಅತ್ಯುತ್ತಮ ಗೀತರಚನಕಾರರೂ, ಸಂಭಾಷಣೆಕಾರರೂ ಮತ್ತು ನಿರ್‍ದೇಶಕರೂ ಆಗಿದ್ದರು. ಕನ್ನಡ ಚಿತ್ರರಂಗ ಅಮೃತಮಹೋತ್ಸವ ಆಚರಿಸಿಕೊಳ್ಳುತ್ತಿರುವ ವರ್‍ಶದಲ್ಲೇ ಅವರು ನಿಧನರಾದರು. ಆರ್.ಎನ್.ಕೃಷ್ಣಪ್ರಸಾದ್ ‘ನಾಂದಿ’, ‘ಬೆಳ್ಳಿ ಮೋಡ’ ಮತ್ತು ‘ನಗುವ ಹೂವು’ ಮೊದಲಾದ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದಾರೆ. ‘ಬೆಳ್ಳಿ ಮೋಡ’ ಚಿತ್ರದ ‘ಮೂಡಲ ಮನೆಯ ಮುತ್ತಿನ…’ ಹಾಡಿನಲ್ಲಿ ದೃಶ್ಯಕಾವ್ಯವನ್ನೇ ಮೂಡಿಸಿದ್ದಾರೆ. ಕೃಷ್ಣಪ್ರಸಾದ್ ಅವರು ‘ನಗುವ ಹೂವು’ ಮೂಲಕ ನಿರ್ದೇಶನದಲ್ಲಿ ವಿಶಿಷ್ಟ ಛಾಪು ಮೂಡಿಸಿದರೂ ನೆಲೆಯೂರಲಿಲ್ಲ. ಆರ್.ಎನ್.ಸುದರ್ಶನ್ ನಟರಾಗಿ ಕೆಲವು ವರ್‍ಶ ರಾರಾಜಿಸಿದರೂ ಅಷ್ಟು ಯಶಸ್ವಿಯಾಗಲಿಲ್ಲ. ಉತ್ತಮ ಕಂಠವನ್ನು ಹೊಂದಿದ್ದರೂ ಗಾಯಕರಾಗಿ ಪ್ರಸಿದ್ಧಿಯಾಗಲಿಲ್ಲ. ಈ ಮೂವರು ಸೋದರರು ಮಣಿರತ್ನಂ ಅವರ ‘ನಾಯಗನ್’ ಚಿತ್ರದಲ್ಲಿ ನಾಯ್ಡು ಸೋದರರಾಗಿ ನಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...