ಅರ್‍ಧದಲ್ಲೆ ಎದ್ದು ಹೋಗುವರು ನಾವು
ಪೂರ್‍ಣತೆಯ ಮಾತೆಲ್ಲಿ ಬಂತು
ಪೂರ್‍ಣಯ್ಯ
ಅಯ್ಯಾ
ಅರ್‍ಧವೇ ಯಾವಾಗಲೂ
ಕತೆಯರ್‍ಧ ಹರಿಕತೆಯರ್‍ಧ
ಕಾವ್ಯವರ್‍ಧ ಪುರಾಣವು ಅರ್‍ಧ
ನಮ್ಮ ವತಾರವು ಅರ್‍ಧ
ಸುಖವರ್‍ಧ ದುಃಖವರ್‍ಧ
ಹರುಷವರ್‍ಧ ಸ್ಪರ್‍ಶವು ಅರ್‍ಧ
ನಮ್ಮುತ್ಕರ್‍ಷವು ಅರ್‍ಧ
ಹಗಲರ್‍ಧ ಇರುಳರ್‍ಧ
ಸಂಜೆಯರ್‍ಧ ಮುಂಜಾನೆಯರ್‍ಧ
ನಮ್ಮ ವರ್‍ಷವು ಅರ್‍ಧ
ಕನಸರ್‍ಧ ನೆನಸರ್‍ಧ
ಮಾತರ್‍ಹ ಮಾತುಕತೆಯರ್‍ಧ
ಕಟ್ಟಿಸಿದ ಮನೆಯೂ ಅರ್‍ಹ
ಮಾಡಿದ ತಯಾರಿಯರ್‍ಧ
ಕೂಡಿಸಿದ ಸರಂಜಾಮುಗಳರ್‍ಧ
ಹೊರಟ ಪ್ರಯಾಣವು ಅರ್‍ಧ
ಕಾಣಿಸಿದುದರ್‍ಧ ಕೇಳಿಸಿದುದರ್‍ಧ
ಮನನ ಮಾಡಿದುದರ್‍ಧ
ಅರ್‍ಥವಾದುದೂ ಅರ್‍ಧ
ಇಟ್ಟ ಅಡಿಯರ್‍ಧ
ಕಟ್ಟಿದ ಮುಡಿಯರ್‍ಧ
ನಡೆದ ದಾರಿಯೂ ಅರ್‍ಧ
ದಕ್ಕಿದುದು ಅರ್‍ಧ ಮಿಕ್ಕಿದುದು ಅರ್‍ಧ
ಮಾಡಿದ ಲೆಕ್ಕ ಅರ್‍ಧ
ಬರೆದಿಟ್ಟ ದಿನಚರಿಯು ಅರ್‍ಧ
*****


















