ಪ್ರವಹಿಸಲಿ ಮುಗಿದ ಕೈ ಮೈನಳಿಗೆಯಿಂದೆಲ್ಲ
ನಮನಂಗಳೆನ್ನ ನಾ ಸಿರಿಪದದ ತಡಿಗೆ,
ಮಣಿಗೆಯೊಳು ಮದವಳಿದು ಋಣಗಳೆಲ್ಲವ ನೆನೆದು
ತಿಳಿಮೆಯೊಳು ಹರಿವೆನ್ನ ಚೇತನದ ಜತೆಗೆ,
ಕುಲ ವಿದ್ಯೆ ಸಂಸ್ಕಾರ ಹಿರಿತನಗಳೆಣಿಕೆಗಳ
ತಡಿಕೆಯೊಳು ಹೊಳೆದ ಕಳೆಗಳು ಭೂತಿನಿಧಿಗೆ
ಪ್ರವಹಿಸಲಿ ವಾತ್ಸಲ್ಯ ಮೈತ್ರ್ಯಗಳ ನೆನೆಕೆಯಿಂ
ನೆನೆದೆನ್ನ ಮನವಾ ಕರುಣೆ ತವರಿನೆಡೆಗೆ-
ಎದೆಯಪ್ಪೆ ನೆಲದ ತಂಪಂ ಧರೆಧರಿಸೆ ತನುಭಾರವಂ ಲಘಿಮೆಯೊಳು ಚಿತ್ತವಾಡೆ
ಬಿಡುವೆಂದರಿದೆ ಬಿಡುವಲಾ ನೆಲೆಬಿಡುಗಡೆಯ ಕಣಸಾಂತೆಲ್ಲ ವೀಡಾಡೆ.
*****


















