ಅನ್ನೆವರಮರಿಯದಿಹ ತನ್ನ ದ್ಯುತಿಯುಚ್ಛೃತಿಯ
ರತ್ನದೊಳು ಕಾಣುತ್ತ ನಲಿವುದಿನಕಿರಣ
ತಾನೆಯರಿಯದ ತನ್ನ ಪ್ರಸ್ಫುರಚೇತವನು
ಕಂಪಿನಲಿ ಕಂಡು ನಲಿವುದು ನೆಲದ ಹರಣ
ತನ್ನಹಂಕಾರವನು ಶಮಿಸಿ ಮಮತೆಯ ತೊರೆದ
ಸರ್ವಮುಕ್ತನೊಳೆ ಮೆರೆವುದು ಸರ್ವಮಮತೆ
ತೋತೋರಿ ಮರೆಗೊಳುವ ಭೂತಭಾವಂಗಳೀ
ಅನಿಕೇತ ಕೇತನದಿ ಪಡೆಯುವವು ಸ್ಥಿರತೆ-
ತಾನೆಯಚ್ಚರಿಗೊಳುವ ತೇಜದೊಳು ಜ್ವಲಿಸುವುದು ಶೈವರಸ್ಯಂ
ಚಿತ್ತಕ್ಕೆ ವಶವಾದ ತೆರದೊಳಗೆ ಭಕ್ತರೊಳು ಭಗವದ್ರಹಸ್ಯಂ
*****


















