ಅಕ್ಕರೆಯೊಳೊ ಮರುಕದೊಳೊ
ನೆನೆದರೆ ಸಾಕು ನೀ ನನ್ನ
ಎಂದಾದರು ಒಮ್ಮೆ
ನಿದ್ದೆಯೊಳೊ ಅರೆನಿದ್ದೆಯೊಳೊ
ಕನವರಿಸಿದರೆ ಸಾಕು ನೀ ನನ್ನ
ಎಂದಾದರು ಒಮ್ಮೆ
ಮುಂಜಾವದ ಆಗಸದಲಿ ಬೆಳ್ಳಿಯ
ನೋಡಿದರೆ ಸಾಕು ಒಮ್ಮೆ
ಸಂಜೆಯ ಆಗಸದಲಿ ಅದೇ
ಕಂಡರೆ ಸಾಕು ಒಮ್ಮೆ
ಎಂದಾದರು ಒಮ್ಮೆ
ಯಾರಿಗಲ್ಲದೆಯು ದಾರಿಯ ಪಕ್ಕದಲಿ
ತನಗೆ ತಾನೇ ನಗುವ ಗುಲಾಬಿಯ ಕಂಡು
ಕ್ಷಣ ನಿಂತರೆ ಸಾಕು ಒಮ್ಮೆ
ಎಂದಾದರು ಒಮ್ಮೆ
ಹರಿವ ತೊರೆಯಲಿ ಬರಿಗಾಲನಿರಿಸಿ
ಮುತ್ತುವ ಮೀನಿನ ಕಚಗುಳಿಗೆ
ನಕ್ಕರೆ ಸಾಕು ಒಮ್ಮೆ
ಎಂದಾದರು ಒಮ್ಮೆ
ತಿಳಿನೀರ ಕೊಳದಲಿ ಮುಖವಿಣುಕಿ
ಯಾರೀ ಚೆಲುವೆ ಎಂದು ಭ್ರಮಿಸಿ
ಸರಸಿಯೋ ಅಪ್ಸರೆಯೋ ಯಾರು ಯಾರೀಕೆ
ಬೆರಳಾಡಿಸಿ ಉಂಗುರ ಉಂಗುರ
ಅಲೆಯೆಬ್ಬಿಸಿದರೆ ಸಾಕು ಒಮ್ಮೆ
ಎಂದಾದರು ಒಮ್ಮೆ
*****


















