ನನ್ನಮ್ಮ ಪಡುವಣದ ಸೂರ್ಯನಂತೆ
ಬಾಳ ಹಗಲಿನಲಿ ಬೆಳಕು ಕೊಟ್ಟವಳು
ತನ್ನ ತಾನೇ ಕಡಲಲಿ ಮುಳುಗಿಸಿಕೊಂಡವಳು
ಬಾಳ ಮುಸ್ಸಂಜೆಗೆ ತಂಪು ತಂದವಳು
ನನ್ನಮ್ಮನ ಕೋಪ, ವರ್ಷಕ್ಕೊಮ್ಮೆ ಕಾಣಿಸುವ
ಗ್ರಹಣದಂತೆ ಅಪರೂಪ
ಬಂದಾಗ ತರುವ ಭಯ
ಅರೆಕ್ಷಣದಲ್ಲೇ ಮಾಯ
ಕಂಡದ್ದು, ಕಾಡಿದ್ದು ನನ್ನಮ್ಮ
ನಡೆಸಿದ್ದು, ನುಡಿಸಿದ್ದು ನನ್ನಮ್ಮ
ತಿನಿಸಿದ್ದು, ರಮಿಸಿದ್ದು ನನ್ನಮ್ಮ
ಬರವಣಿಗೆಯ ಹುಚ್ಚು ಹಿಡಿಸಿದ್ದು ನನ್ನಮ್ಮ
ಕಂಡ ಮೊದಲ ಮುಖ
ನಾನಾಡಿದ ತೊದಲ ಶಬ್ದ
ಬರೆದ ಮೊದಲ ಪದ
ಎಲ್ಲವೂ ಅಮ್ಮ, ಅಮ್ಮ, ಅಮ್ಮ
ನಾ ಬೆಳೆದೆ ತುಂಬಾ ಎತ್ತರ
ಅವಳೇರದಷ್ಟು
ಆದರೂ ಅವಳೆದುರು ನಾನಿನ್ನೂ ಕಿರಿದು
ಏಕೆಂದರೆ, ಅವಳು ನನ್ನಮ್ಮ.
*****


















