ಉರಿವ ಬಿಸಿಲಿನ ನಡುವೆ
ಮಾವು, ಬೇವುಗಳ ಹೂಗಂಪು
ಮುಂಜಾವಿನ ಕನಸಿನಲಿ
ಕೆಂಡ ಮಿಂದೆದ್ದ ಸೂರ್ಯ
ನಿಟ್ಟಸಿರು ಬಿಟ್ಟ ಕಣ್ಣೀರು!
ಹೊಸ ವರುಷ ಬಂದಿದೆ
ಸಾವಿನ ಸನ್ನಿಧಿಯಲ್ಲಿ
ಪತರುಗುಟ್ಟುವ ಕ್ಷಣಗಳಲ್ಲಿ
ಎಸಳು ಜೀವಗಳ ಹೊಸಕುತ್ತ
ಕನಸುಗಳ ಕನ್ನಡಿ ಚೂರುಚೂರು
ಬರುತ್ತಿದೆ ಯುಗಾದಿ
ಭೂಮಿಯ ಗರ್ಭ ಸೀಳಿ
ಅಬ್ಬರಿಸಿದ ಸುನಾಮಿ
ಕಂಪನಕೆ ನಡುಗಿದೆ ಜೀವಸಂಕುಲ
ಎದೆಯಲಿ ಕೋಲಾಹಲ
ಭಯಂಕರ ತಲ್ಲಣದ
ಕ್ಷಣದಲ್ಲಿ ಉರುಳಿದ ಮನೆ,
ಕಾರು, ರಸ್ತೆ, ಸೇತುವೆ
ಬಾಯ್ತೆರೆದ ನೆಲದಲ್ಲಿ ಹೂತು
ಲೀನವಾದ ಸೀತೆಯಂತೆ
ಮುಳುಗಿದವು ನಗರಗಳು
ಸುನಾಮಿಗೆ ಕೊಳ ತೊಡಿಸಲು
ಸುಡುವ ಕೆಂಡದ
ಭೂಮಿಯ ಒಡಲು ತಂಪಾಗಿಸಲು
ನಡೆದು ಬಂದಿತು ಯುಗಾದಿ
ನೋವಿನ ಗುಟುಕು ಗುಟುಕರಿಸುತ್ತಾ
ಕನಸಿನ ಮಹಲುಗಳ ಬಿಟ್ಟು.
ಬಿಕ್ಕುವ ಅಕ್ಷರಗಳು ಮೂಡಿದವು
ಬಿಳಿ ಕಾಗದದ ಬಂಧಿಯಾಗಿ
ಭಯಂಕರ ಅಲೆಗಳ ಅರ್ಭಟಕೆ
ಅಣು ಸ್ಥಾವರಗಳ ಸ್ಫೋಟಕೆ
ಹಡಗು ಮನೆಗಳು
ಕೊಚ್ಚಿ ಹೋದವು ಅಲೆಯಲಿ.
ಯುಗಾದಿಯೇ ಬರುವುದಾದರೆ ಬಾ
ಮೆಲ್ಲಗೆ ನನ್ನ ಕೈಬೆರಳು ಹಿಡಿದು
ನಡೆವ ಪುಟ್ಟ ಮಗುವಿನಂತೆ
ನಡೆದು ಬಾ ಹೊಸ ವರುಷವೇ
ಅಬ್ಬರಿಸಿ ಗದ್ದರಿಸದಿರು ನನಗೆ
*****



















