ಅಗಲಿಕೆ

ಸಾರಂಗ

ಅಗಲಿಕೆಯೆ, ನಿನ್ನಗಲನಳೆಯುವವರಾರು ?
ಬಗೆಯೊಲವೆ ನಿನ್ನ ನೆಲೆ ತಿಳಿಯುವವರಾರು ?

ಹಿಂದೆ ಗೋವಳತಿಯರು ನಂದಕಂದನನಗಲಿ
ದಂದುಗದಿ ಮೈಮನದ ಹೊಂದಿಕೆಯ ಮರೆಯುತಲಿ
ನೊಂದು ನಿಡುಸರದಿ ಮನಬಂದಂತೆ ಕೂಗುತಲಿ
ಬೆಂದು ಬಾಯ್‌ಬಿಡುತ ಅಲೆದಾಡಿದರು ಅಡವಿಯಲಿ
“ಹುಲ್ಲೆಯೇ ನಲ್ಲನೆಲ್ಲಿರುವ ನೀನರುಹು !
“ಕೋಗಿಲೆಯೆ ಕೂಗಿ ನುಡಿ ಅವನಿರುವ ಕುರುಹು !
“ಗಿಳಿಹಿಂಡೆ ಕಂಡಿಹೆಯ ಗೆಳೆಯನನು ? ಹೇಳು !
“ಅಳಿಕುಳವೆ ಅಡಗಿರುವನೆಲ್ಲಿ ನಮ್ಮಾಳು ?

“ಅಣ್ಣ ! ಗರಿಗಣ್ಣ ! ಮನದನ್ನನಿರುಹನು ತಿಳುಹು !
“ಹೆಣ್ಣುಗಳ ಹೋಗಲಿಹ ಹರಣಗಳ ನೀನುಳುಹು !
“ಹಕ್ಕಿಗಳೆ, ನುಡಿಹೇಳಿ ಚಿಕ್ಕ ಚೆನ್ನಿಗನೆಲ್ಲಿ?
“ದಿಕ್ಕ ತೋರಿರಿ, ಸಾಕು, ಹೊಕ್ಕು ಹುಡುಕುವೆವಲ್ಲಿ!
“ಜಂಗುಳಿಯ ಹಸುಗಳೇ ರಂಗನೆಲ್ಲಿಹನು?
“ಕಂಗಳಿಗೆ ಕಾಣದೊಲು ಮೈಯ ಮರೆಸಿಹನು;
“ಮಂಗಣ್ಣಗಳಿರ, ಮಿತ್ರನ ಮರೆಯ ಹೇಳಿ!
“ಹೆಂಗಳೀ ಹರಕೆಯನು ಹೊಂದಿ ಸೊಗಬಾಳಿ!

“ಮರಬಳ್ಳಿಗಳೆ ಅರುಹಿ ಹರಿಯಿರುವ ತಾಣವನು !
“ಕೆರೆತೊರೆಗಳೇ ತೋರಿ ಅರಸನಿಹ ಗುರುತನ್ನು !
“ಹೊಳೆಯಮ್ಮ, ತಿಳುಹಿಸೌ ಕೊಳಲಿಗನ ನೆಲೆಯನ್ನು !
“ಬೆಟ್ಟದೊರೆ, ಮೂಗುತನ ಬಿಟ್ಟು ತೋರಾತನನು !
“ಮುಗಿಲೆ, ನಿನ್ನಂತಿರುವ ಸೊಗಸೊಡಲನೆಲ್ಲಿ ?
“ಹಗಲೊಡೆಯ, ನಮ್ಮ ಬಗೆಗಳ್ಳನಿಹನೆಲ್ಲಿ ?
“ಸುಳಿವೆಲರೆ, ನಮ್ಮೊಲವ ಸುಲಿದಾತನೆಲ್ಲಿ?
“ಬನಸಿರಿಯೆ, ನಮ್ಮ ಮನ ತಣಿಸುವವನೆಲ್ಲಿ?”

ಇಂತು ಹೆಣ್ಣುಗಳು ಕಣ್ಣಿಗೆ ಕಂಡುದೆಲ್ಲವನು-
ನಸುವು ತಿಳಿವಿರದಿರುವ ಹಸು ಹಕ್ಕಿ ಮಿಗಗಳನು-
ಉಸಿರಿಲ್ಲದಿಹ ಬಳ್ಳಿ-ಹಸಿರು-ಗಿಡ-ಮರಗಳನು-
ನುಡಿಸುತಳುತಲೆದ ಕತೆಯನ್ನ೦ದು ಕೇಳಿದೆನು.
‘ಹುಚ್ಚು ಹೆಣ್ಣುಗಳವರು !’ ಎಂದು ಬಗೆದಂದೆ
‘ಹೆಚ್ಚು ಇದು ! ಎಲ್ಲ ಕವಿಕಲ್ಪನೆಯು !’ ಎಂದೆ;
‘ಕೆಲಸವಿಲ್ಲದ ಕವಿಗೆ ಹುಸಿಯ ಹೆಣೆಯುವುದೇ
‘ಬಲು ಕೆಲಸ!’ ಎಂದು ಬೀಳ್‌ಗಳೆದು ನಾ ನುಡಿದೆ.

ಅಂದೆನಗೆ ತಿಳಿಯದೆಯೆ ಬಾಯ್ಗೆ ಬಂದುದನೊರೆದೆ;
ಇಂದು ಆ ಕತೆಯೆಲ್ಲ ಸರಿಯೆಂದು ತೋರುತಿದೆ.
ಸಟಿಯಲ್ಲ ಕವಿಯುಸಿರು, ಹುಚ್ಚಲ್ಲ ಹುಡುಗಿಯರು,
ದಿಟವನನುಭವಿಸದೆಯೆ ಅರಿತವರದಾರಿಹರು ?
‘ಮುಳುಗದೆಯೆ ನೀರ ನೆಲೆಯೊಳಗನರಿಯಲಿಕೆ-
‘ಬೆಳಕಳಿದ ಕಣ್ಗೆ ತಿಂಗಳನು ತಿಳಿಯಲಿಕೆ-
‘ಎಂತಾಗುವುದು?’ ಎಂಬ ಕಂಡುಂಡ ಮಾತು
ಇಂತೆನಗೆ ತಿಳಿದು ಮನದಾ ಮುಸುಕು ಹೋಯ್ತು.

ದೂರವಿಹ ನನ್ನಿನಿಯನೂರ ದಿಕ್ಕಿನ ಮುಗಿಲು
ಏರಿ ನನ್ನಯ ಬಳಿಯ ಸಾರಿ ಬರೆ ಬಾನಿನೊಳು,
ನನ್ನವುಗಳೆಂದು ನೇಹದ ನೆಟ್ಟ ನೋಟದಲಿ
ಮುಗಿಲ ನೋಡುತ ನಿಲುವೆ ಹಲವು ಹಾರಯಿಸುತಲಿ;
ದೊರೆಯಿರುವ ದೆಸೆಯಿಂದ ಹಕ್ಕಿಗಳು ಹಾರಿ
ಬರುತಿರಲು, ಹರುಷದೊಳು ನವಿರುಗಳು ನಿಮಿರಿ
ನನ್ನ ನಂಟುಗಳೆಂದು ನೆನೆವೆನವುಗಳನು,
ನನ್ನಾತನೊಸಗೆಯನು ಕೇಳಲೆಳಸುವೆನು.

ಮೆಲುಗಾಳಿಯೆ ಇರಲಿ, ಬಲುಗಾಳಿಯೇ ಇರಲಿ,
ಗೆಳೆಯನಿಹ ಕಡೆಯಿಂದ ಸುಳಿದು ಒರೆ-ಮೋಹದಲಿ
ತಿಳಿಯುವೆನು ನಾ ತೀರ ಬಳಿಯಾಪ್ತನೆಂದದನು-
ತಿಳುಹಿಸಲು ನನ್ನೆದೆಯ ಒಳಮಾತನೆಲ್ಲವನು
ನಾಲಗೆಯು ನಲಿಯುವುದು, ಮನವು ಕುಣಿಯುವುದು
ಕೇಳಲಾತನ ಕತೆಯ ಕಿವಿಯು ಕೋರುವುದು,
ಹೀಗೆನ್ನ ನಾಡಿಸುವುದಾವುದದು ಹುಚ್ಚೋ..?
ಆಗದಿರಲಿನಿಯನಲ್ಲಿರುವೆದೆಯ ನಚ್ಚೋ…?

ಇನಿಯನನು ನೋಡಿ ನುಡಿಸಿದ ಮಂದಿಯೆಲ್ಲರನು
ಮನೆಯವರೆ ಎಂದು ನಾ ಮನ್ನಿಸುವೆನವರನ್ನು
ಮನದನ್ನನಾ ರೂಪುಗುಣದ ಬಣ್ಣನೆಯನ್ನು
ನನಗೊರೆಯೆ ನನ್ನ ನಾನೇ ಮರೆತು ಕೇಳುವೆನು.
ಎನಿತೊ ಜನರಿಲ್ಲವೇ ಮತ್ತೆ ನೆರೆಗಳೊಳು ?
ಎನಿಸುವರು ನನಗವರು ಬರಡುಬೊಂಬೆಯೊಲು;
ಮಾತಿಲ್ಲದುವನೆಲ್ಲ ಮಾತನಾಡಿಸುವೆ,
ಮಾತನಾಡುವರಲ್ಲಿ ಮಗುವಡೆದಿರುವೆ.

ಜಡವಸ್ತುಗಳನ್ನು ಜೀವಿಗಳಂತೆ ಕಾಣಿಸುವ
ನಡೆನುಡಿವ ಜೀವಿಗಳ ಜಡಗಳಂತಾಗಿಸುವ
ಅಗಲಿಕೆಯೆ, ನಿನ್ನ ಗಲಗಳೆಯುವವರಾರಿಹರು?
ಬಗೆಯೊಲವೆ ನಿನ್ನ ನೆಲೆ ತಿಳಿದವರದಾರು ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಡಿ ಬಾರೋ ರಂಗ
Next post ವಿದ್ಯುತ್‌ಪುತ್ರನ ಅವತಾರ

ಸಣ್ಣ ಕತೆ

 • ದಿನಚರಿಯ ಪುಟದಿಂದ

  ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

 • ಮಲ್ಲೇಶಿಯ ನಲ್ಲೆಯರು

  ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

 • ವಿರೇಚನೆ

  ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

 • ಮನೆಮನೆಯ ಸಮಾಚಾರ

  ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

 • ಗ್ರಹಕಥಾ

  [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

cheap jordans|wholesale air max|wholesale jordans|wholesale jewelry|wholesale jerseys