ಓ ಗಿರಿಯೆ ಮರಗಳೇ ಓ ಜೀವ ಜೀವಗಳೆ
ನನ್ನೊಡೆಯ ಎಲ್ಲಿಹನು ಬೇಗ ಪೇಳಿ
ಸಾಯುತಿಹೆ ತರಹರಿಸಿ ನಿರ್ಜೀವವಾಗಿರುವೆ
ಅವನಿಲ್ಲದಾನಿನ್ನು ಹೇಗೆ ಇರಲಿ || ೧ ||

ಬಾವಿಯಲಿ ಜಲವೆಲ್ಲ ಬತ್ತಿ ಹೋದಂತಿಹುದು
ಹಣ್ಣಿನಲಿ ರಸವೆಲ್ಲ ಒಣಗಿರುವುದು
ದೀಪದಲಿ ಎಣ್ಣೆಯೇ ತಿರಿಹೋಗಿಹುದಲ್ಲ
ಬಾಳ ಬಳ್ಳಿಯ ರಸವು ಇಂಗಿರುವುದು || ೨ ||

ಇಷ್ಟು ದಿನ ಅವನಿದ್ದ, ಇದ್ದಂತೆ ಇದ್ದಿಲ್ಲ,
ಈಗ ಅವನಿಲ್ಲದೇ ಬರಿದಾಗಿದೆ
ಗಂಡ ಸತ್ತ ಮೇಲೆ ಹೆಂಡತಿಯು ಜಾಣಳೆ
ಕಳಕೊಂಡು ಹುಡುಕುತಿಹೆ ಸಿಗದಾಗಿದೆ || ೩ ||

ಯಾವುದಕೆ ಸಿಟ್ಟಾಗಿ ಹೋಗಿಹನೊ ನನ್ನ ದೊರೆ
ಎನ್ನ ಸಿರಿ ಎನ್ನ ಬಲ ಸರ್ವಸ್ವವು
ಅವನಿಲ್ಲದಿರೆ ನಾನು ಜೀವ ಹಿಡಿದಿರಲಾರೆ
ಬಾವಿಯೋ ಕೆರೆ ತೊರೆಯೊ ಕರೆಯುತಿಹವು || ೪ ||

ಸತ್ತಂತೆ ಬದುಕಿರುವ ಈ ಬಾಳಲೇನಿಹುದು
ಸತ್ತು ಹುಟ್ಟುವ ಇಂಥ ಬಾಳು ಸಾಕು
ಬಿಟ್ಟು ಬಿಟ್ಟೋಡಿದರೆ ಆಳುವಾ ಪತಿದೇವ
ಅಳಬೇಕೊ ನಗಬೇಕೋ ಸಾಕುಸಾಕು || ೫ ||

ಯಾವ ಪ್ರಭುವಿಂದೆನ್ನ ಮಾಂಗಲ್ಯ ಸೌಭಾಗ್ಯ
ಯಾವ ಕೈಯಾಸರೆಯೆ ನನ್ನ ಉಸಿರು
ಅವನನ್ನು ಕಳಕೊಂಡು ಇನ್ನೆಲ್ಲಿ ಸೌಭಾಗ್ಯ
ಕೆಳಗೆ ಮೇಲಾಗುತಿದೆ ಜೀವದುಸಿರು || ೬ ||

ಯೌವನದ ದೇಹವಿದೆ ಅಂದವಿದೆ ಚೆಂದವಿದೆ
ಮನೆಯೊಳಗೆ ಸಿರಿಸಂಪದೆಲ್ಲವಿಹುದು
ಉಂಡು ಉಡಲಿಕ್ಕೆ ಕೊರೆಯೆ ತಿಂದುತೇಗಲು ಅರೆಯೆ
ಏನಿದ್ದು ಎಲ್ಲವೂ ಬರಿದೊ ಬರಿದು || ೭ ||

ನನ್ನ ಕೂಗನ್ನಷ್ಟು ಕೇಳುವಿರ ಗೆಳತಿಯರೆ
ಕೇಳಿ ಎದೆಯಳಲನ್ನು ತೋಡಿಕೊಳುವೆ
ಏನಾದರೊಂದಿಷ್ಟು ಸಾಂತ್ವನವ ಹೇಳಿರಿ
ದುರ್ಭಾಗ್ಯೆ ನೊಂದವಳು ಬೇಡಿಕೊಳುವೆ || ೮ ||
*****