ನಂಬು ನಂಬೆಲೆ ಮನವೆ ನಿನ್ನನು
ನಂಬದಿದ್ದರೆ ನಶ್ವರಾ
ತುಂಬು ಎದೆಯಲಿ ವಿಶ್ವಮೂರ್ತಿಯ
ಇಲ್ಲದೆಲ್ಲವು ಅಪಸ್ವರಾ || ಪ||

ನಂಬಿ ನಿನ್ನನು ಸುಖವ ಕಂಡರು
ತುಂಬು ಹೃದಯದಿ ಶರಣರು
ನಂಬಿ ನಿನ್ನಯ ಹೊಗಳಿ ದಣಿಯದೆ
ಹಾಡಿ ಕುಣಿದರು ದಾಸರು || ೧ ||

ಹುಟ್ಟಿ ಸಾಯುವ ಉಬ್ಬಿ ಇಳಿಯುವ
ದೇಹವಲ್ಲವು ಜೀವನಾ
ಉಂಡು ಮಲಗುವ ತಿಂದು ತೇಗುವ
ಸುಖವು ಅಲ್ಲವು ಸಾಧನಾ || ೨ ||

ಸುಖದ ದುಃಖದ ತೆರೆಗಳಲ್ಲವು
ಬಾಳಸಾಗರದಾಳವು
ಅದರ ಮೇಗಡೆ ತೇಲಿ ಮುಳುಗುವ
ಕಡ್ಡಿ ಕಸ ನೀನಲ್ಲವು || ೩ ||

ಸಾಗರವೆ ನೀ ಬಾಂದಳವೆ ನೀ
ಭೂಮಿ ಸೃಷ್ಟಿಯೆ ನೀನೆಲೈ
ವಿಶ್ವಪೂರ್ಣನು ಸರ್ವಶಕ್ತನು
ವಿಶ್ವದೇವನು ನಿನ್ನಲೈ || ೪ ||

ನಂಬು ನಂಬೆಲೆ ಮನವೆ ನಿನ್ನನು
ನಂಬದಿದ್ದರೆ ನಶ್ವರಾ
ತುಂಬು ಎದೆಯಲಿ ವಿಶ್ವಮೂರ್ತಿಯ
ಇಲ್ಲದೆಲ್ಲವು ಅಪಸ್ವರಾ || ೫ ||
*****