ಸದಾ ಬ್ರಹ್ಮವಿಚಾರಿ
ಏಕ ಜನಿವಾರಧಾರಿ
ಕೆಲವೊಮ್ಮೆ ಮಾತ್ರ ಶನಿವಾರ
ಟೆರಿಲೀನು ವಸ್ತ್ರ ರವಿವಾರ ವಿವಸ್ತ್ರ
ಸಾತ್ವಿಕ ಆಹಾರಿ ಶುದ್ಧ ಶಾಖಾಹಾರಿ
ಮಾಂಸಕ್ಕೆ ಮಾಂಸ ಕೂಡಿಸಿ ಮಾಡುವ ಉತ್ಪತ್ತಿ ಬೇಡಯ್ಯ
ಬೇಯಿಸಿದ ತತ್ತಿಯಾದರೆ ಒಂದೆರಡು ಪರವಾಯಿಲ್ಲ
ಒತ್ತಾಯ ಮಾಡಿದರೆ ಒಂದೇ ಬೀಡಿ
ಕಾಡಿ ಬೇಡಿದರೆ ಜೂಜು ಸೋಡಾ ಕೂಡಿ ಅಷ್ಟೆ
ಮಾತ್ರ ಕಟ್ಟಾ ಬ್ರಹ್ಮಚಾರಿ
ವ್ಯಭಿಚಾರಿ
ಎಂದರೆ ಅಥವಾ ಹೆಣ್ಣು ಎಂದರೆ
ಅವರ ನೆರಳೆಂದರೆ ಅಷ್ಟಕ್ಕೆ ಬಂದರೆ
ಹರದಾರಿ ದೂರ ಸರಿ
ಕೆಲವೊಮ್ಮೆ ಹಿಂದೆ ಕೆಲವೊಮ್ಮೆ ಮುಂದೆ
ಸರ್ವದಾ ಪಾರಮಾರ್ಧಿಕ ವಿಚಾರಿ
ಹಗಲೂ ರಾತ್ರಿ ಒಂದೇ
ಧ್ಯಾನ ಕೊಕ್ಕರೆಯಂತೆ
ಸಕ್ಕರೆಯಿಲ್ಲದೆಯೆ ಕಾಫಿ ಕುಡಿದು ಸಕ್ಕರೆಯದೇ ನೆನಪಾಗಿ
ತುಟಿ ಚಪ್ಚರಿಸಿ-ಈ ಶುದ್ಧ ಅಚುಂಬಿತ ತುಟಿಗಳಯ್ಯಾ
ಮಂತ್ರ ತಂತ್ರಗಳೆಂದು ಪರಧ್ಯಾನದಲ್ಲಿ ಪುಟಿಪುಟಿವ ತುಟಿ
ಯಾರ ಕೆಳತುಟಿಗಳದ್ದೂ ಜೊಲ್ಲು ನೆಕ್ಕದ ಬ್ರಹ್ಮಚಾರಿ ತುಟಿ
ನಗದ ನಗಲಾರದ ತುಟಿ-ಎಲ್ಲಾ ತುಟ್ಟಿ ಕಳ್ಳಭಟ್ಟಿಯ ಹಾಗೆ
ಅಹಹ ಹೇಗೆ ವಿವರಿಸಲಿ ಹೇಗೆ ಹೇಳಲಿ
ಈ ಅವಸ್ಥೆ ಛೇ ಛೇ
*****