ಕಳೆದವು ಹತ್ತು ದಿನ
ನಿಮ್ಮ ಕಾಯುತಲಿ ಎನ್ನರಸ
ಬಾಗಿಲ ಬಳಿಯಲಿ ನಿಂತೇ
ನಿಮ್ಮಯ ಬರವನು ನೋಡುತ್ತ ||

ಬರುವೆನೆಂದು ಹೇಳಿ ಹೋದ ನಿಮ್ಮನು
ಮರಳಿ ಬರುವಿರೆಂದು ಕಾದೆನು
ಬರುವ ಅವರಿವರ ಕಣ್ಣಾಲಿಸಿ ನೋಡಿದೆ
ಪರಿತಪಿಸಿದೆ ||

ಮೊದಲ ರಾತ್ರಿಯ ನಗುಮೊಗದ
ಚಂದದಿ ಬರಸೆಳೆದು ಮುತ್ತನಿತ್ತಿರಿ
ಆ ದಿನ! ಮೃದುವಚನವಿತ್ತು ಹೋದಿರಿ ಎಲ್ಲಿಗೆ ||

ಇರುವಿರಿ ಹೇಗೆ ಇರುವಿರಿ ಪ್ರೀತಿಯಲಿ
ಎನ್ನರಸಿ ನಿಮ್ಮದೇ ಚಿಂತೆಯು ದಿನದಿನವು
ಕುಳಿತರೂ ನಿಂತರು ಮಲಗಿದರು ಕಾಡುತಿದೆ
ನಿಮ್ಮದೇ ನೆನಪು ||

ಬಣ್ಣದ ಓಕುಳಿ ಬರಿದೆ ಚೆಲ್ಲಿದಿರಿ
ಬರಿದಾಗಿಸದಿರಿ ನನ್ನಾಸೆ ಕರಿಮೋಡಗಳಲಿ
ಮಿಂಚು ಹೊಳೆದಂತೆ ಕಾಡುತಿಹುದು ನಿಮ್ಮ ನೆನಪು ||

ನಾನು ನಿಮ್ಮನ್ನು ಮರೆತೆ ಎನ್ನದಿರಿ
ಮರೆಯಲು ಬಿಡುವೆನೇ ನಾ ನಿಮ್ಮ |
ಸುಖಃ ನಿಮ್ಮ ಒಲುಮೆಯಲಿ ನಾನಿರಲು ||

ಬಯಲು ಹಸಿರಿನಲಿ ಬೀಗಲೇ ಇಲ್ಲ
ತನಿ ಬೆಳದಿಂಗಳು ಬರಲಿಲ್ಲ
ಉಕ್ಕಲಿಲ್ಲ ಕಡಲ ಅಲೆಗಳು
ಹಕ್ಕಿಗಳ ಚಿಲಿಪಿಲಿ ದನಿಯಿಲ್ಲಾ ||

ನಂಬಿಹೆನು ನಿಮ್ಮ ಬರುವಿರಿ ಎಂದು
ಸುಖಃ ಕದವ ತೆರೆದು ಬೆಳಕಾಗಿ ಬರಲು
ನೀವು! ಕಾದಿರುವೆನು ಹಗಲು ಇರುಳು ||
*****