ಮೊನ್ನೆತನಕ ಎಲ್ಲ ಚೆನ್ನಾಗಿತ್ತು ಗೆಳೆಯ
ಸರಳ ಸಮರ್‍ಪಕ ಸೂತ್ರಬದ್ಧ
ಇದ್ದಕ್ಕಿದ್ದಂತೆ ದನಿಯೊಡೆದೆ ಈಗ
ಕನ್ನೆಮಾಡದ ಕನಸಮುಗ್ಧ
ಹಸಿರು ಹಾವು ಅಸಂಖ್ಯ
ಉಸಿರುಗಟ್ಟಿಸುವಂತೆ
ಹರಿದುಬಂದವು ಹತ್ತುದಿಕ್ಕಿನಿಂದ
ಕುಡಿದು ಮಲಗಿದ್ದವನ
ಕಡಿದು ಹೋದವು ಸತ್ತು
ಬೆಸಲಾದೆ ಹೊಸಬ ಅದೆ ದೇಹ ಹೊತ್ತು
ನಿದ್ದೆ ಸಾಕು ಇನ್ನು ಗದ್ದೆ ನಡುವೆ
ನಿಂತು ದುಡಿಯುತ್ತೇನೆ ಗುದ್ದಲಿಯೊಡನೆ
ಕಾಲಕಾಲಕ್ಕೆ ಮಳೆ ಸರಿಯಾಗಿ ಬರಲಿ
ಹಸಿರುಕ್ಕಿಸುತ್ತೇನೆ ಬಂಜರೆದೆಗೆ
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.