ಇದೊ! ಹಾ! ಬಾಂದಳದೊಳ್‌ ವಿರಾಜಿಸುದುದೈ ಚಂದ್ರೋದಯಂ. ಮೋಡಮಿ-
ಲ್ಲದ ಬಾಂಬಟ್ಟೆಯೊಳೊಯ್ಯನೊಯ್ಯನೆ ಶಶಾಂಕಂ ಪಚ್ಚೆ ವೋದಂ, ಮುಳುಂ
ಗಿದುದೆಲ್ಲ ಕದಿರೊಳ್‌ ನೆಲಂ; ತೊರೆದುದೈ ನಿಮ್ನೋನ್ನತಾವಸ್ಥೆಯಂ,
ಸುದೆಯಿಂಮಿಂದವೊಲೀಗಳೀ ಪ್ರಕೃತಿ ಮೌನಂಗೊಂಡು ಸಂಶೋಭಿಕುಂ ||೧||

ಒಲವಿಂ ಚುಂಬಿಸಿ ನಾಡೆ ಬೆಟ್ಟದುದಿಯಂ, ವಾರೀತರಂಗಂಗಳೊಳ್
ನಲವಿಂ ನರ್ತಿಸಿ, ಚಂದ್ರಕಾಂತಿ ದಡದೊಳ್‌ ಮೆಲ್ನಿದ್ದೆಯಂಗೊಂಡುದೈ.
ಎಲೆಯೊಳ್‌ ನಿಟ್ಟುಸಿರಿಟ್ಟು ಸಂಚರಿಪುದೈ ತಂಗಾಳಿಯುಂ; ಕೂಡೆ ಮೆ
ಲ್ಲುಲಿಯಂ ಗೈವ ತರಂಗದಿಂ ಪ್ರವಹಿಸುತ್ತಂ, ಪಾರ್ವುದೈ ನಿರ್ಝರಂ ||೨||

ಅಮೃತಂ ನಿನ್ನೊಳಗಿರ್ಪುದೆಂದು ನುಡಿವರ್‌, ನೋಡಲ್ಕಿದೇಂ ಸತ್ಯಮೇಂ!
ಅಮಮಾ! ಚಂದ್ರನೆ! ಶುಕ್ಲ ಚಂದ್ರ! ರಜನೀ ಕಂಠಾವಲಂಬೀಮಣೀ!
ಭ್ರಮೆಯಿಂ ಜೀವನಮಾರ್ಗದೊಳ್‌ ನಡೆದು ಗಾಯಂ ಪೊಂದಿದೆಂ ಕಂದಿದೆಂ
ತಮಮಂ ನೀಗುತೆ ತಣ್ಪನೊಂದಿಸು! ನಿಶಾಕಾಂತ ಪ್ರಶಾಂತಪ್ರಭಾ ||೩||

ಅಹಹಾ! ಸತ್ಯಮೆ ಸತ್ತವರ್‌ ಬಿಡದೆ ನಿನ್ನಂ ಸೇರ್ವರೆಂಬುಕ್ತಿಯುಂ!
ಗೃಹದಾರಾತನುಜರ್ಕಳಂ ತೊರದು, ನಿನ್ನಾ ಲೋಕಮಂ ಸೇರಿ ಮೇ
ಣಿಹದೊಳ್ ದುಃಖಿಪ ಮರ್ತ್ಯರಂ ನಗುವಿನಿಂ ನೋಡುತ್ತೆ, ನಿನ್ನಂತೆವೊಲ್
ಮಹಿಯೊಳ್ ದೇವಮಹತ್ವಮಂ ತಿಳುಪಲೆಂತೋ ಪಾರ್ವುದೆನ್ನೀ ಮನಂ ||೪||
(ಸುವಾಸಿನಿ ೧೯೦೨)
*****