ಕರೆದೇ ಕರೆದೆ
ಗಂಟಲು ಹರಿವ ತನಕ
ಒಂದೇ ಸಮನೆ ಮೊರೆದೆ.
ತಿರುಗಿದೆಯ ನೀನು
ತಿರುಗುವುದೆ ಬಾನು
ಭೂಮಿಯ ತಾಳಕ್ಕೆ?
ಭೂಮಿಯ ತಾಳಕ್ಕೆ
ಋತುಗಳ ಗಾನಕ್ಕೆ
ತಿರುಗುವವರು ನಾವು,
ಯಾವನ ಪುಂಗಿಗೊ ರಾಗದ ಭಂಗಿಗೊ
ಎಳ್ಳುಕಾಳಾಗಿ ಕಲ್ಲಗಾಣಕ್ಕೆ
ದಿನವೂ ಉರುಳುವ ನೋವು.
ವಿಷದ ಬಟ್ಟಲಿಗೆ ಇಳಿದು
ಸಿಲುಬೆಯ ತುದಿಗೂ ಬೆಳೆದು
ಹುಡುಕಿ ಬಂದಿರುವೆ ನಾನು.
ಸಿಗುವಂತೆ ನಟಿಸಿ
ಬರಿಭ್ರಮೆಗೆ ಸಲಿಸಿ
ಮುಗಿಲಾಚೆಗೆಲ್ಲೊ ಮಣಿರಥವನಿಳಿಸಿ
ಮರೆಯಾಗುವೆ ನೀನು
ಆದರು ನಾನು
ನಿಲ್ಲದೆ ಬಂದೇ ಬರುವೆ
ಬಿಲ್ಲನು ಇಳಿಸದೆ ನಿಲುವೆ;
ಬೇಲಿಮರೆಗೆ ಬೆಳದಿದ್ದರು ಬಳ್ಳಿಯ ಕಣ್ಣು
ಕಡೆಗೂ ಬಿಸಿಲಿನ ಕಡೆಗೆ
ಉಳಿದುದು ಬೆನ್ನಿನ ಮರೆಗೆ
ಹೊಳೆಯುತ್ತಿದೆ ಕಣ್ಣಿನಲ್ಲಿ ಮುಗಿಲಾಚೆಯ ಹಣ್ಣು
*****