ಡೊಂಬರ ಚೆನ್ನೆ

(ಗೋವಿನ ಕಥೆಯ ಮಟ್ಟು)

ಬೆರಗು ಕಣ್ಣಿನ, ಬೆರಳ ಮೀಸೆಯ, ಬೆರಸಿದಾ ನಗುಮೋರೆಯಾ, |
ಅರಸನಿದ್ದನು ಡೊಂಬರಾಟಕೆ ಸೆರೆಯ ಸಿಕ್ಕಿದ ಮನದಲಿ. ||೧||

ದಾಟಿ ಪಡು ಹೊಳೆ, ಜನರ ಸಂದಣಿ ಆಟ ನೋಡಲು ಕೂಡಿತು; |
ಕೋಟೆಕೊತ್ತಳ ಮಾಡುಮನೆ ಮರಕೊಂಬೆಗಳ ಮೇಲಿದ್ದರು. ||೨||

ಗುಲ್ಲು ಮಾಡರು; ಸೊಲ್ಲನಾಡರು; ಎಳ್ಳು ಬಿದ್ದರೆ ಬೊಬ್ಬೆಯು, |
ಅಲ್ಲಿ ಜನಗಳ ನುಗ್ಗುನುಗ್ಗಿಗೆ ಇಲ್ಲ ಸಾಸಿವೆ ಹಾಕಲು, ||೩||

ಅತ್ತಲಿದ್ದರು ಸೆಟ್ಟಿಮುದ್ಯರು, ಗುತ್ತಿನಡ್ಯಂತಾಯರು, |
ಇತ್ತ ಪೊಕ್ಕುಳ ಆರಸುಮಕ್ಕಳ ಒತ್ತಿನಲಿ ಕಳದೆಡದಲಿ. ||೪||

ಗುರು, ಸುಮಂಗಳ, ಬುಧ ಗ್ರಹಂಗಳ ನಡುವೆ ತಿಂಗಳ ಚೆಲುವಿನಾ |
ಅರಸು ಅಂಗಳದಲಿ ಜನಂಗಳ ನಡುವೆ ಸಂಗಳಿಸಿದ್ದನು. ||೫||

ಆಗ ಬಡಿಯಿತು ಡೋಲು ಬಡಬಡ, ಬಾಗಿ ಅರಸಿಗೆ ತಲೆಯನು, |
ಬೇಗ ತಿರ್ರನೆ ತಿರುಗಿ, ಸರ್ರನೆ ಲಾಗ ಹಾಕಿದ ಡೊಂಬನು. ||೬||

ನೀರಿನೊಂದಿಗೆ ಆರು ಬಿಂದಿಗೆ ಹೇರಿ ನೆತ್ತಿಯ ಮೇಲಕೆ, |
ಹಾರಿ ಧಿಕ್ಕಿಟ, ಕುಣಿದನಕ್ಕಟ ನೀರು ಹೊರಗಡೆ ಚೆಲ್ಲದೆ! ||೭||

ತೆಗೆದು ಡೊಂಬನು ಹುರಿಯ ಸುಂಬನು ಬಿಗಿದು ಬಟ್ಟಲನೇರಿಸಿ, |
ಬೊಗರಿಯಂತೆಯೆ ತಿಗರಿಯಂತೆಯೆ ನೆಗೆದು ಕುಣಿದನು ಧಿಮಿಧಿಮಿ, ||೮||

ಮಾವಿನಾಟದ ಹಾವಿನಾಟದ ಸೋವುಸೋಜಿಗ ತಿಳಿಯದು; |
ಯಾವ ತಂತ್ರವೋ? ಮೋಡಿಮಂತ್ರವೋ? ನಾವು ಅರಿಯೆವು ಎಂದರು. ||೯||

ಬಿದಿರು ಒಂದನು ಹೊತ್ತು ತಂದನು ಮುದುಕ ಡೊಂಬನು ಹೆಗಲಲಿ. |
ಅದನು ಬಲದಲಿ ಹೂಡಿ ನೆಲದಲಿ, ಚದುರೆ ಮಗಳನು ಕರೆದನು. ||೧೦||

ಹೆಣ್ಣು ಬಂದಳು ಹಣ್ಣು ಬಿಡದಾ ಸಣ್ಣ ಬಳ್ಳಿಯ ಬೆಡಗಿನಾ, |
ಮಣ್ಣೊಳಾಡುವ ಬೆಣ್ಣೆಯಂತಿಹ, ಕಣ್ಣುಕಟ್ಟಿನ ಸೊಬಗಿನಾ, ||೧೧||

ಮಣಿದು, ಹಗ್ಗಕೆ ಹಾರಿ ಸಿಡಿದಳು ಕುಣಿವ ಮರಿಸಿಡಿಲಂತೆಯೇ, |
ಹೆಣೆದು ಮೈಯನು, ಹಾವಿನಂತೆಯೆ ಗಣೆಗೆ ಸರಿದಳು ಸರ್ರನೆ. ||೧೨||

ಬಳಿಕ ಬೆನ್ನನು ಕೋದು, ಕೈಕಾಲ್ಗಳನ್ನು ತೇಲಿಸಿ, ಹೊಳೆದಳು- |
ಮೆಳೆಯ ಬಿಲ್ಲಿನ ಹಾಗೆ, ಸ್ಥಾಣುವಿನೆಳೆಯ ಚಂದ್ರನ ಚಂದದಿ. ||೧೩||

ಕೊರಳು ಮಾಲಿತು, ಹೆರಳು ಜೋಲಿತು, ಕುರುಳು ತೇಲಿತು ತರಳೆಯಾ.|
ಉರುಳುತಲೆ ಕಾಲ್‌ಬೆರಳ ಕೊನೆಯಲಿ ಮರಳಿ ಹೊಲಿದಳು ಜಡೆಯನು, ||೧೪||

ಗೆಳೆಯ ಡೊಂಬತಿಯಾಟದಾ ಪರಿ, ಗಾಳಿ ಕೈಗಿರಿಗಿಟಗಿರಿ, |
ಸುಳಿಯ ನೀರಿನ ತಲೆಯ ಹೂಗರಿ, ಸೆಳೆಯ ಮಿಂಚಿನ ತೋಳ್‌ ಸರಿ ||೧೫||

ಆರರೆ! ಡೊಂಬರ ಹೆಣ್ಣು ಮರಿ ಗರಗರನೆ ಎತ್ತರ ಭರದಲಿ |
ತಿರುಗುವಾ ತೆರ ಹುಡಿಯು ಅರಸಿನ ಎರಚಿತೆರಚಿತು ಕಣ್ಣಿಗೆ. ||೧೬||

ಇದ್ದು ನೋಡಿದ, ಎದ್ದು ನೋಡಿದ, ಕದ್ದು ನೋಡಿದ ಹುಡುಗಿಯಾ; |
ಮುದ್ದು ಗಿಳಿಯಲಿ ಅರಸಿನಾ ಮನ ಹದ್ದು ಹಾರಿತು ಬೇಗನೆ. ||೧೭||

ಬಿಗಿದು ಬಿಚ್ಚುವ ಬಿಚ್ಚಿ ಬಿಗಿಯುವ ಮುಗಿಲಕೂದಲ ಬಲೆಯಲಿ |
ಇಗೊ! ಇಗೋ! ಸಿಲುಕಿದುದು ಅರಸನ ಮಿಗದ ಕಣ್ಗಳ ಜೋಡಿಯು. ||೧೮||

‘ಏಕೆ ಡೊಂಬನೆ! ನಿಲ್ಲಿಸಾಟವ! ಈಕೆಯಲಿ ಮನ ಸೋತುದು, |
ಸಾಕು! ಬಂಗರು ನಾನೆ! ಕೈಸ್ರ್ ಹಾಕುವೀಕೆಯ ಕೊರಳಲಿ” ||೧೯||

ಎಂದು ನಂದಾವರದ ಬಂಗರು ನೊಂದು ನಂದದ ತಾಪದಿ |
ಮುಂದೆ ನಿಂದಾ ಡೊಂಬನೊಂದಿಗೆ ‘ಸಂದಿಸಿವಳನು’ ಎಂದನು. ||೨೦||

ನುಡಿದ ಮಾತಿನ ಮಾನಭಂಗದ ಹೊಡೆತ ನುಂಗಿದ, ಸಿಡುಕಿನಾ |
ಕಿಡಿಯ ಕಣ್ಣೀರಿಂದ ನಂದಿಸಿ, ‘ಒಡೆಯ! ಬನ್ನಹ ಲಾಲಿಸು!’ ||೨೧||

“ಮಗಳ ಹೆಸರಿನ ಮೈಗೆ ಸೂಳೆಯ ಬೆಡಗ ಸೀರೆಯ ಉಡೆಸೆನು. |
ನಗರೆ? ಹೆಸರಿನ ತಲೆಗೆ ಪಾದರಿ ಮುಗುಳು ಹೂವನು ಮುಡಿಸೆನು.” ||೨೨ ||

ಉಲಿಯೆ ಡೊಂಬನು, ಕೆಲರ ಪಿಸಿಪಿಸಿ, ಕೆಲರ ಗುಜುಗುಜು ಕೆಲವರಾ |
ಗಲಭೆ ಕಳಕಳ ಆಟದಾ ಕಳದಲಿ ವಿಶಾಲಕೆ ತುಂಬಿತು. ||೨೩||

ಒಡನೆ ಡೊಂಬನು ಡೋಲು ಬಡಿದನು, ಬಡಿದು ಗುಡುಗುಡು ಗುಡುಗಿದಾ |
ಗುಡುಗಿ ಓಡಿದ, ಓಡಿ ತೋರಿದ ಗಿಡುಗನನು ಗಳೆ ಗುಬ್ಬಿಗೆ. ||೨೪||

ಹೀಗೆ ತೋರಿಸಿ, ಮಾಯವಾದನು ಲಾಗದಲ್ಲಿ ಕಳದಾಚೆಗೆ. |
ಹೋಗಿ ಹೋದನು ಸನ್ನೆ ಮಾಡುತ ಕೈಗಳಿ೦ದಾ ಹುಡುಗಿಗೆ. ||೨೫||

ಕಣ್ಣು ಕತ್ತಲೆಗೊಳಿಪ ಗಣೆಯಿಂ ಹೆಣ್ಣು ದುಮುಕಿತು ಹಳಿಯಲಿ- |
ಬಣ್ಣ ಕಿಡಿಯಲಿ ಬಿದ್ದು ಬಾನಿಂ, ತಣ್ಣಗಾಗುವ ಬಿರುಸಿನೋಲ್. ||೨೬||

ಎಲ್ಲಿ? ಹೋ! ಹೋ! ಹೋಯ್ತು! ಹೋಗಿರಿ! ಎಲ್ಲಿ? ಎಲ್ಲೆಂಬರಸನಾ |
ತಲ್ಲಣದ ಕಟ್ಟಾಜ್ಞೆಗಾಗಲೆ ಎಲ್ಲರೋಡಿದರ್‌ ಅರಸುತಾ. ||೨೭||

ಆಳು ನಾಲ್ವರು ದಡಕೆ ಹಾಯ್ದರು, ಆಳಿವಿಹ ಹೊಳೆನೀರಲಿ |
ಆಳುವೇಳುವ ಇಬ್ಬರನು ತಮ್ಮಾಳುವವನೆಡೆಗೊಯ್ದರು. ||೨೮||

ಗದ್ದಿಗೆಯ ಬಳಿ ಕೆಡವಿದರು-ನೀರ್ ಮೆದ್ದ ಉದ್ದಿನ ತೊಗಲಿನಾ, |
ಬಿದ್ದ ಮೋರೆಯ, ನಿದ್ದೆಗಣ್ಣಿನ, ಒದ್ದೆ ಕೂದಲ ಡೊಂಬನಾ. ||೨೯||

ದೇವ ಬಂಗರೆ! ಕರೆವುದೆನ್ನನು ಸಾವು; ಬಾಗಿಲು ತೆರೆದಿದೆ. |
ಜೀವ ನಿಲ್ಲದು, ಅರಿಕೆ ಮಾಡುವೆ ಕಾವುದೆನ್ನಪರಾಧವ.” ||೩೦||

“ಹಿಂದೆ ನಾಲ್‌ಕೈ ವರ್ಷಗಳ ಕೆಳಗೊಂದು ಸಲ ನಾನಿಲ್ಲಿಗೆ |
ಬಂದು, ಗೈದಾಟಕೆ ಪಾದದ ತಂದೆ ತಂಗಿ ಸುನಂದೆಯು -” ||೩೧||

ಎಂದು ನಿಲ್ಲಲು ಡೊಂಬನರೆನುಡಿ, “ಮುಂದೆ ಮುಂದೆ”ನೆ ಬಂಗರು; |
“ಮುಂದೆ ತಮ್ಮ ಸುನಂದೆ ಕಿರುಮಗಳೊಂದಿಗರಮನೆ ಬಿಟ್ಟಳು.” ||೩೨||

“ಆಂದು ರತ್ನಾವತಿಗೆ ತುಂಬದು ಒಂದು ವರ್ಷವು, ಕೂಸಿನಾ |
ಮುಂದು ಎಣಿಸದೆ ನಿಂದೆ ಗಣಿಸದೆ ಹಿಂದೆ ಬಂದಳು ಪಾಪಿಯಾ” ||೩೩||

“ಸಂದವಿಂದಿಗೆ ವರ್ಷಗಳು ಹನ್ನೊಂದು-ಸತ್ತು ಸುನಂದೆಯು. |
ಅಂದಿನಿಂದಿದು ಕೋಗಿಲೆಯ ಮರಿ ಕಾಗೆ ನಾನೆನೆ ಆಯಿತು.” ||೩೪||

“ಇವರೆ ರತ್ನಾವತಿಯು; ಮುಂಚಿನ ಇವರ ಹೆಸರದು ರನ್ನೆಯು, |
ಇವಳೆ ಕೊಳೆ ಸೋಕದ ಸುಕನ್ಯೆಯು, ಇವಳೆ ಡೊಂಬರ ಚೆನ್ನೆಯು” || ೩೫||

“ಆರಿ ದೂರಕೆ ಅಲೆದ ಕಡಲಿನ ನೀರೆ ಕಡಲನೆ ಕೂಡಿತು, |
ಬೇರೆ! ಹಾ! ಹಾ!” ಎಂದು ಡೊಂಬನು ತೀರಿಸದೆ ಕಣ್ಮುಚ್ಚಿದ, ||೩೬||

ಆಳಿದ ಡೊಂಬಗೆ ಉತ್ತರಕ್ರಿಯೆಗಳನು ಬಂಗರು ಮಾಡಿಸಿ, |
ಗೆಳೆಯ ಡೊಂಬರ ಚೆನ್ನೆಯನು ಮದವಳಿಗ ಕೈಯಲಿ ಹಿಡಿದನು ||೩೭||

ತನ್ನ ರಾಜ್ಯದ ಪಾಲು ಬಳುವಳಿಯನ್ನು ಕೊಟ್ಟನು ರನ್ನೆಗೆ, |
ಚೆನ್ನೆ ಸಂತತಿಗಾಯ್ತು ಆದರಿಂ ಹೆಸರು ಡೊಂಬಾ ಹೆಗ್ಗಡೆ. ||೩೮||
*****
(ಪದ್ಯ ಪುಸ್ತಕ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಗೀಗ ಹೂಳೆದ ಚುಕ್ಕಿಗೆ
Next post ದುಃಖ

ಸಣ್ಣ ಕತೆ

 • ಹನುಮಂತನ ಕಥೆ

  ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

 • ಮೈಥಿಲೀ

  "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

 • ಇಬ್ಬರು ಹುಚ್ಚರು

  ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

 • ಕರೀಮನ ಪಿಟೀಲು

  ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

 • ಮುದುಕನ ಮದುವೆ

  ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

cheap jordans|wholesale air max|wholesale jordans|wholesale jewelry|wholesale jerseys