ಕೋವಿ ಎತ್ತಿದ್ದೇನು, ಗುರಿಯ ಹೂಡಿದ್ದೇನು
ಕಡೆಗೆ ಹೊಡೆದದ್ದೂ ಹೂವಲ್ಲಿ! ಈ ನೀರಲ್ಲಿ
ಬಿದ್ದ ತುಂಡುಗಳೆಲ್ಲ ಸಾಗಿ, ಬೆಳೆದದ್ದೆಲ್ಲ
ಬಾಗಿ ಹರಿಯುತ್ತಲಿದೆ ಹೀಗೆಯೇ ಹೊರವಾಗಿ.
ಒಂದು ಕ್ಷಣ ಹಿಂದೆ ಏನೆಲ್ಲ ಆಡಿದಿರಪ್ಪ!
ಅಂದ ಮಾತಿಗೆ ಈಗ ತಾವೆ ನಗುವುದು ಬೇರೆ.
ಇಷ್ಟು ದಿನ ಹಾಲು ತುಪ್ಪವ ಬೆರೆಸಿ ಈಗೇಕೆ
ಉಪ್ಪುನೀರಿನ ಮಾತು? “ತಪ್ಪು ಬಿಟ್ಟಿತು” ಎನ್ನಿ!
ನಿಮ್ಮ ಜೊತೆ ಬಂದು ನಿಮ್ಮದೆ ರೂಪಿನಚ್ಚೊಂದ
ಕೈಗಿತ್ತು ಈಗ ಹೀಗಾಡಿದರೆ ಇಗೊ ಹೊರಟೆ.
ಹ್ಞಾ! ನಿಲ್ಲಿ ಅಲ್ಲೆ, ಸರಿಯಿರಿ ದೂರ, ಸೆರಗ ಬಿಡಿ,
ನೋಡುತ್ತಿದ್ದಾನೆ ನಿಮ್ಮಾಟಗಳ ನಿಮ್ಮ ಮಗ!
ವರುಷ ದಾಟಿದ ಹುಡುಗ ತಿಳಿಯದಿರುವುದೆ ಅದಕೆ,
ನೀವಾಡಿದರೆ ಹೀಗೆ ಏನಾಡುವುದೊ ಹೊರಗೆ!
*****