ಕಪ್ಪು ಮಣ್ಣ ನೆಲದಲಿ ಘಮ್ಮೆಂದು
ಸೂಸಿ ತೇಲುವ ಎಳೆ ಹಾಲು ತುಂಬಿ
ಜೋಳದತೆನೆಗಳ ಅರಿವಿಗೆ ಪರಿವಿಗೆ
ಮೊಗ್ಗೊಡೆದು ಜೀವದ ಹರವಿಗೆ ಗಾಳಿ
ಜೇಕು ಹಾಕುತ್ತಿದೆ ತಣ್ಣನೆಯ ಸ್ಪರ್ಶ
ಜೀವದಾಳಕೆ ಇಳಿಯಲು ಕಾಯಬೇಕು.

ಯಾರು ಹುಕುಂ ಮಂಜೂರ ಮಾಡಿದರು
ಮೊಳಕೆಯೊಡದೆ ಮರ್ಮರಗಳ ಕಂಪನ

ಒಳಗಿನಿಂದ ಅರಳಿ ಹಸಿರಾಗಿ ಉಸಿರಾಗಿ
ನೋಟವಾಗಿ ತೋಟಿಗೆ ಬೀಸಿ ಎಲೆ ಅಲೆ
ಗಳಲಿ ಬೆಳಕು ಪ್ರತಿಫಲಿಸಿ ಜೀವಸ್ಪರ್ಶ
ಆಕಾರಗಳ ಸಾಕಾರಗಳ ಸಾಲು ಸಾಲು ತೆನೆ
ಕುರುಹು ಹಿಡಿಯಲು ಹಕ್ಕಿಗಳು ಹಾರಬೇಕು

ಧಗೆಯ ಬಗೆಯ ನೆಲದ ಬೇರು ಕಲ್ಲು
ಕೊನರು ದಾಟ ಕುರುಹುಗಳ ನಭ
ನಾಭಿಯ ಸೆಳೆತದ ಅಲೆ ಜೀವ ಬಂದು
ಪಿಸುಗುಟ್ಟಿದ ಕ್ಷಣ ಮಿಂದು ಬೆಂದ
ಎದೆ ಹುಟ್ಟು ಸಹಜ ಬಯಲು ಮರ
ಚಿಗುರು ಹಗುರ ರಾಗ ಅನುರಾಗ
ಹೂವಗಂಧ ಮೋಡ ಮಳೆ ಅಂಬರಕೆ ನೀಲಿ ತುಂಬ ಬೇಕು.

ಕಣ್ಣಂಚಿನಲಿ ಬಿರಿದ ತಾವರೆ ಬಿಂಬ ಹಾಡಿ
ಮುತ್ತಿಕ್ಕಿದ ಸ್ವಾತಿ ಹಕ್ಕಿಕೊರಳೊಳಗೆ ಇಳಿದ ತೋಡಿ
ರಾಗ ಭಾವಕೆ ಬಿರಿದ ಮಲ್ಲೆ ಮೊಗ್ಗು ಜಾಜಿ ಸಂಪಿಗೆ
ನೆಲದಲಿ ಅರಳಿದ ಪ್ರಸಾದ ಜೀವ ತುಂಬಿ
ಹಕ್ಕಿ ಹಾಡು ಇಳಿದು ಇಳಿದು ಮಿಡಿತ
ಸದ್ದು ಒಳಗೂ ಹೊರಗೂ ಬೆಳೆದು
ಬಸಿರುಕಟ್ಟಿ ಬಯಲು ಆಲಯದೊಳಗೆ ಸಾಂಗತ್ಯ.
*****