ಯಶೋಧೆ ಕಂದ ಕೃಷ್ಣನಿಗೆ
ಹೇಳುತ್ತಿದ್ದಳು ಪುಟ್ಟ ಹತ್ತ ಬೇಡ
ಯದುಗಿರಿಯ ಬೆಟ್ಟ ಅದರ ಮೇಲೆ
ಕೂಡಲಿ ಹಾಯಾಗಿ ಬಣ್ಣ ಬಣ್ಣದ ಹಕ್ಕಿಗಳು
ಹಾಡಲಿ ಜೀವ ರಾಗಗಳ.

ಕಂದ ನೀನು ಅಲ್ಲಿ ಸುಳಿದಾಡಬೇಡ
ತೇಲಲಿ ಮೋಡಗಳು ಸುರಿಯಲಿ
ತಂಪು ನಿಶ್ಯಬ್ದಗಳ ಗುಂಗು ಹಿಡಿದು
ಹೂಗಳು ಕಂಪು ಸೂಸಲು ಎದೆ ಆಳಕೆ
ಹರಿಯಲಿ ಭಾವನದಿ.

ಕಂದ ತಕತಕ ಕುಣಿಯಬೇಡ
ಬೆಟ್ಟದ ತಪ್ಪಲಲ್ಲಿ ಹಸಿರು ಹಾಸಿದ
ಬಯಲಲಿ ನರ್ತಿಸಲಿ ನಿನ್ನ ಪ್ರೀತಿಯ ನವಿಲು
ಗರಿಗೆದರಿ ಬಾಚಿ ತಬ್ಬಿಕೊಳ್ಳಲು ಇಂಚರದ ಹಕ್ಕಿಗಳು
ಹುಟ್ಟಲಿ ಸಾಕ್ಷಿಗಳು.

ಪುಟ್ಟ ಹತ್ತ ಬೇಡ ಎತ್ತರದ ಬಂಡೆಗಳು
ಗಿಲಿ ಗಿಲಿ ಗೆಜ್ಜೆಯ ಗೋಪಿಯರು
ನರ್ತಿಸಲಿ ಸರಿದು ಹೋಗುವ
ಮೋಡಗಳ ಜೊತೆಗೂಡಿ ಖುಷಿಯಲಿ ಅರಳಲಿ
ಅಮರ ಪ್ರೇಮ ಕಾವ್ಯ

ಕಂದ ಕೊಳಲನೂದಬೇಡ ಬೆಟ್ಟದಲಿ
ಎಲ್ಲಾ ರಾಗಗಳು ನದಿಯಾಗಿ ಹರಿದು
ಎದೆಯ ಬಯಲ ತುಂಬಾ ಪ್ರೀತಿ
ಅಲೆಗಳು ಕೃಷ್ಣ ಕೃಷ್ಣ ಎಂದು ಅಪ್ಪಳಿಸಲಿ
ಅದು ನೀನು ಜಗದ್ದೋಧಾರಕ ಯಶೋದೆ
ಕಂದ ಕೃಷ್ಣ ಎಂದೆಂದೂ.
*****

Latest posts by ಕಸ್ತೂರಿ ಬಾಯರಿ (see all)