ತರಂಗಾಂತರ – ೯

ತರಂಗಾಂತರ – ೯

ಕಾರಣವಿರದ ದುಃಖವನ್ನು ವಿವರಿಸುವುದು ಕಷ್ಟ. ರೇಶ್ಮಾ ಜಿಂದಲ್, ಬಿ.ಎ., ೨೩, ಚೆಲುವೆ, ಸ್ಕೂಲ್ ಅಧ್ಯಾಪಿಕೆ. ಕೆಲವೇ ದಿನಗಳಲ್ಲಿ ಡಾಕ್ಟರ್ ಡೇವಿಡ್ ಅಹುಜನನ್ನು ಮದುವೆಯಾಗಿ ಸೌವುದಿ ಅರೇಬಿಯಾಕ್ಕೆ ಹೋಗುವಾಕೆ ಕೆಲವು ದಿನಗಳಿಂದ ಅತ್ಯಂತ ದುಃಖಿತಳು. ವಿನಯಚಂದ್ರನ ಫೋನ್ ಬಂದಾಗ ಅವಳು ತನ್ನ ಕಾಟ್ ನಲ್ಲಿ ಮಲಕ್ಕೊಂಡು ಹಿಂದಿನ ದಿನ ಬಂದಿದ್ದ ಡೇವಿಡ್ ನ ಪತ್ರವನ್ನು ಎರಡನೇ ಬಾರಿ ಓದುತ್ತಿದ್ದಳು. ಡ್ರಾಯಿಂಗ್ ರೂಮ್ ನಲ್ಲಿ ಫೋನ್ ಸದ್ದಾದುದನ್ನು ಕೇಳಿ ಅವಳ ಕಿವಿ ಚುರುಕಾಯಿತು. ನಂತರ ಅಣ್ಣ ಕರೆದುದು ಕೇಳಿ ಕೂಡಲೆ, ಪತ್ರವನ್ನು ಅಲ್ಲೇ ಬಿಟ್ಟು ಓಡಿಹೋಗಿ ಫೋನ್ ಎತ್ತಿಕೊಂಡಳು. ವಿನಯನ ಪರಿಚಯವಾದಂದಿನಿಂದ ಅವಳು ಫೋನ್ ಬಗ್ಗೆ ಬಹಳ ಸೂಕ್ಷ್ಮ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಳು. ವಿನಯ ಯಾವುದೋ ಸದ್ದುಗದ್ದಲದ ಜಾಗದಿಂದ ಮಾತಾಡುತ್ತಿದ್ದುದರಿಂದ ಇವಳೂ ಎತ್ತರದ ದನಿಯಲ್ಲೇ ಮಾತಾಡಬೇಕಾಯಿತು. ಅದೇನೋ ಸ್ಪರ್ಧೆಯ ಬಗ್ಗೆ ಹೇಳಿದ್ದು ಅರ್ಧವಾಗಲೇ ಇಲ್ಲ. ಆದರೆ ಆರು ಗಂಟಿಗೆ ಸಂಗೀತ್ ಸಿನಿಮಾದ ಬಳಿ ಇರಬೇಕೆಂದೂ, ಅಲ್ಲಿ ಅವನು ತನಗೋಸ್ಕರ ಕಾಯುತ್ತಾನೆಂದೂ ಅರ್ಥವಾಯಿತು. ಬ್ಲೇಮಿಟಾನ್ ರಿಯೋ! ಸ್ಕೂಲ್ ಫ಼್ರೆಂಡ್ಸ್ ಜತೆ ಅವಳು ಈಗಾಗಲೆ ಆ ಫ಼ಿಲ್ಮನ್ನ ಒಮ್ಮೆ ನೋಡಿಯಾಗಿತ್ತು. ಇದನ್ನ ತೋರಿಸಿಕೊಳ್ಳದಿರಲೆಂದೇ ಫ಼ಿಲ್ಮಿನ ಹೆಸರನ್ನು ಮತ್ತೆ ಮತ್ತೆ ಕೇಳಿದ್ದು. ಅತ್ಯಂತ ರೋಚಕ ದೃಶ್ಯಗಳನ್ನೊಳಗೊಂಡ ಈ ಫ಼ಿಲ್ಮನ್ನು ವಿನಯ ಬೇಕಂತಲೇ ಆರಿಸಿಕೊಂಡಿದ್ದಾನೆ! ಅವನ ಜತೆ ಅದನ್ನ ನೋಡುವುದರಲ್ಲಿ ಮಜಾ ಇರುತ್ತದೆ! ಆದರೆ…..

ಡೇವಿಡ್ ಬರೆದಿದ್ದ : ತನಗೆ ಹಾಸ್ಪಿಟಲ್ ನಲ್ಲಿ ಐದು ವರ್ಷಗಳ ಕಾಂಟ್ರಾಕ್ಟ್ ಸಿಕ್ಕಿದೆ. ಈ ಬೇಸಿಗೇನಲ್ಲಿ ಬರುತ್ತಿದ್ದೇನೆ. ಆಗಲೇ ಮದುವೆ ಯಾಗಿ ಬಿಡೋದು ಇತ್ಯಾದಿ ಇತ್ಯಾದಿ. ತನ್ನ ಕುಟುಂಬದಲ್ಲಿ ಇನ್ನು ಯಾರೂ ಈವರಗೆ ಸಂಪಾದಿಸದಷ್ಟೂ ಹಣವನ್ನ ತಾನು ಸಂಪಾದಿಸಬೇಕೆನ್ನುವುದು ಡೇವಿಡ್ ನ ಉದ್ದೇಶ. ನಂತರ ಅಮೇರಿಕಾಕ್ಕೆ ವಲಸೆ ಹೋಗುವುದು. ಪ್ರತಿ ವರ್ಷ ನಿನ್ನನ್ನ ಜಾಗತಿಕ ಹಾಲಿಡೇ ರಿಸೋರ್ಟುಗಳಿಗೆ ಕರಕೊಂಡು ಹೋಗ್ತೇನೆ, ಬಂಗೆಲೋ ಕಟ್ಟಿಸ್ತೇನೆ, ರಾಲ್ಸ್ ರಾಯ್ಸ್ ಕೊಡಿಸ್ತೇನೆ ಎಂದೆಲ್ಲ ಹೇಳುತ್ತಿದ್ದ. ಅವನೂ ಒಂದು ರೀತಿಯಲ್ಲಿ ಹುಚ್ಚನೇ.

ಬದುಕಿನಲ್ಲಿ ಈ ’ಆದರೆ’ಗಳು ಇಲ್ಲದೇ ಇರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ವಿನಯಚಂದ್ರನ ಭೇಟಿಯಾದ ಮೊದಲು ಅವನನ್ನು ನೆನಸಿಕೊಳ್ಳದ ದಿನವಿಲ್ಲ. ಅವನನ್ನು ಎಂಕರೇಜ್ ಮಾಡುವುದಕ್ಕೆ ಅವಳಿಗೆ ಇಷ್ಟವಿರಲಿಲ್ಲ – ಆದರೆ ಮನಸ್ಸು ಮಾತ್ರ ಅವನನ್ನು ಹುಡುಕಿಕೊಂಡು ಹೋಗುತ್ತಿತ್ತು. ವಿನ್ ಎಸಳು ಮನುಷ್ಯ ನಿಜ; ಆಕರ್ಷಕ ವ್ಯಕ್ತಿತ್ವ. ಯಾರೂ ನಿರೀಕ್ಷೆ ಮಾಡಲಾರದ್ದೇನೋ ಅವನಲ್ಲಿದೆ. ಬೇಕು ಬೇಕೆಂದೇ ನಾಟಕವಾಡ್ತಾನೆ, ಬೇಸ್ತು ಬೀಳ್ತಾನೆ ಅದನ್ನೆಲ್ಲ ನೆನೆಸಿಕೊಂಡರೇ ಅವಳಿಗೆ ನಗು ಬರುತ್ತದೆ. ಆದರೆ ಇದು ಅಳುವ ಪರಿಸ್ಥಿತಿ. ಡೇವಿಡ್ ನ ಜತೆಗಿನ ನಿಶ್ಚಿತಾರ್ಥವನ್ನ ಮುರಿಯುವ ಹಾಗಿಲ್ಲ. ವಿನಯನ್ನ ಮನಸ್ಸಿಂದ ಕಿತ್ತು ಹಾಕುವ ಹಾಗಿಲ್ಲ……

ಪಕ್ಕದ ಕೋಣೆಯಲ್ಲಿ ಸುನಯನ ಖಾಸಗಿ ಪರೀಕ್ಷೆಗೆ ಓದ್ತಿದಾಳೆ. ಚಿಕ್ಕ ಮಕ್ಕಳ ಹಾಗೆ ತುಟಿಗಳನ್ನ ಚಲಿಸುತ್ತ ಸದ್ದು ಮಾಡ್ತಿದಾಳೆ. ಸದ್ದಿಲ್ಲದೆ ಓದು, ಕಣ್ಣಿನಿಂದ ಓದಲು ಕಲಿ, ಹಾಗಿದ್ದರೆ ಓದುವ ವೇಗವೂ ಜಾಸ್ತಿ ಯಾಗುತ್ತದೆ, ಹೆಚ್ಚೆಚ್ಚು ಓದೋದಕ್ಕೂ ಸಾಧ್ಯವಾಗುತ್ತದೆ ಎಂದು ಎಷ್ಟೋ ಬಾರಿ ಹೇಳಿದ್ದಾಯಿತು. ಸುನಯನಳ ಓದು ಇಡೀ ಮನೆಯ ವಾತಾವರಣವನ್ನು ಟೆನ್ಯನ್ ನಲ್ಲಿ ಕೆಡವಿತ್ತು. ತಾಯಿಗೆ ಮಾತ್ರ ಕಿವಿ ಸರಿಯಾಗಿ ಕೇಳಿಸುತ್ತಿಲ್ಲವಾದ್ದರಿಂದ ಪಾರಾದಳು. “ಈಕೆ ಸದ್ದಿಲ್ಲದೆ ಓದೋಕೆ ಸುರುಮಾಡಿದ ದಿನ. ನಿನಗೊಂದು ಹೀಯರಿಂಗ್ ಎಯ್ಡ್ ತಂದ್ಕೊಡ್ತೇನೆ,” ಎಂದು ತಂಗಿಯ ಸನ್ನಿಧಿಯಲ್ಲಿ ಹೇಳಿ ನೋಡಿದಳು. ಹಾಗೆ ಹೇಳಿದ ಎರಡು ದಿನ ಅಕ್ಕತಂಗಿಯರ ನಡುವೆ ಶೀತಲ ಯುದ್ಧ. ಅಷ್ಟೇ. ನಂತರ ಎಲ್ಲ ಮೊದಲಿನಂತೆಯೆ. ಸುನಯನಳಿಗೆ ಓದಿನಲ್ಲಿ ಆಸಕ್ತಿಯಿಲ್ಲ. ಯಾವುದರಲ್ಲೂ ಇಲ್ಲ. “ಹಾಗಿದ್ರೆ ಏನು ಮಾಡ್ತಿಯಾ?” ಎಂದರೆ “ಮದುವೆ ಯಾಗ್ತೇನೆ,” ಎಂದು ಹೇಳುತ್ತಾಳೆ! ಒಂದು ಬೀಯೇನಾದ್ರೂ ಮಾಡಿಕೊಳ್ಳದೆ ಇದ್ದರೆ ನಿನ್ನ ಯಾರು ಮದುವೆ ಯಾಗ್ತಾರೆ ಎಂದರೆ ಯಾರಾದ್ರೂ ಇರ್ತಾರೆ ಎನ್ನುವಳು.

ಹೆಚ್ಚೇನಾದರೂ ಹೇಳಿದರೆ ಸುಮ್ಮನೆ ಕುಳಿತು ಬಿಡುತ್ತಾಳೆ, ಅಥವಾ ಟೆನಿಸ್ ರ್ಯಾಕೆಟ್ ತೆಗೆದುಕೊಂಡು ಗೆಳತಿಯರ ಮನೆಗೆ ಹೊರಟು ಬಿಡುತ್ತಾಳೆ. ಅಲ್ಲಿ ಆಕೆ ಯಾರ ಜತೆ ಏನು ಮಾಡುತ್ತಾಳೋ ಯಾರಿಗೂ ತಿಳಿಯದು. ತಂಗಿ ಡೆಲಿಂಕ್ವೆಂಟ್ ಆಗುವ ಸಾಧ್ಯತೆಯನ್ನು ಕಂಡು ರೇಶ್ಮಳಿಗೆ ಆತಂಕ. ತಟ್ಟನೆ ಅವಳ ಮನಸ್ಸಿನಲ್ಲೊಂದು ವಿಚಾರ ಹೊಳೆಯಿತು. ಸುನಯನಗೆ ವಿನ್ ನ ಪರಿಚಯ ಮಾಡಿಸಿದರೆ ಹೇಗೆ? ಈ ವಿಚಾರ ಮನಸ್ಸಿಗೆ ಬಂದದ್ದೇ ಅವರಿಬ್ಬರನ್ನೂ ಜತೆಜತೆಯಾಗಿ ಊಹಿಸಿಕೊಂಡಳು. ವಿನ್, ಸುನ್! ಪಾರ್ಕಿನ ಬೆಂಚಿನಲ್ಲಿ ಅವರು, ಟ್ಯಾಂಕ್ ಬಂಡಿನ ಮೇಲೆ ಅವರು, ನಾಂಕಿಂಗ್ ನಲ್ಲಿ ಅವರು, ಹಾಸಿಗೆ ಮೇಲೆ ಅವರು ಪ್ರೀತಿ, ಜಗಳ ಮನೆ, ಮಕ್ಕಳು! ಯಾವುದೋ ರೆಸ್ಟುರಾದಲ್ಲಿ ಒಂದೇ ಎಳನೀರಿಗೆ ಎರಡು ಸ್ಟ್ರಾ ಹಾಕಿ ಕುಡಿಯುತ್ತಿದ್ದಾರೆ! ವಿನಯ ಯಾವುದೋ ಪ್ರವಾಸ ಸ್ಥಳಕ್ಕೆ ಅವಳನ್ನ ಕರಕೊಂಡು ಹೋಗುತ್ತಾನೆ. ಸುನಯನ ಕೆಟ್ಟ ಚಹಾ ಮಾಡಿ ಅವನಿಗೆ ತಂದುಕೊಡುತ್ತಾಳೆ. ಅವನಿಗೆ ಸಿಟ್ಟು ಬಂದು ಕಪ್ಪನ್ನು ನೆಲಕ್ಕೆ ಅಪ್ಪಳಿಸಿದ್ದಾನೆ. ಅಥವಾ ನಕ್ಕು, ನಿನಗಿನ್ನೂ ಚಹಾ ಮಾಡೋದಕ್ಕೆ ಬರೋದಿಲ್ಲ ಅಲ್ವೆ? ಇರಲಿ ಬಿಡು, ನಾನೇ ಮಾಡ್ತೇನೆ ಅನ್ನುತ್ತಾನೆ. ಸುನ್ ಅಂತ ಕರೆಯುತ್ತಾನೆ. ಈಕೆ ರಾಗವಾಗಿ ಹಾಂ, ಹಾಂ, ಸುನ್ ರಹೀ ಹೂಂ ಅಂತ ಉತ್ತರಿಸುತ್ತಾಳೆ. ಇಲ್ಲ, ಇಲ್ಲ. ಸುನಯನಳ ಸ್ಥಾನದಲ್ಲಿ ಕಲ್ಪಿಸುತ್ತಿರೋದು ತನ್ನನ್ನೇ! ರೇಶ್ಮ ದಿಂಬಿಗೆ ಮುಖವಿಟ್ಟು ನಿಟ್ಟುಸಿರು ಕರೆಯತೊಡಗಿದಳು. ಯಾರದೋ ಕೈ ತನ್ನ ಬೆನ್ನ ಮೇಲಿಟ್ಟಾಂತಾಗಿ ಹೊರಳಿ ನೋಡಿದಳು. ಸುನಯನ!”

“ರೇಶ್ಮ! ಏನಾಗಿದೆ ನಿನಗೆ ಆಳ್ತಾ ಇದ್ದೀ!”

“ಏನಿಲ್ವಲ್ಲ! ನಾನೆಲ್ಲಿ ಅಳ್ತಾ ಇದ್ದೀನಿ? ಸುಮ್ಮಗೆ ಏನೋ ಒಂದು ಚೂರು ತಲೆನೋವು ಅಷ್ಟೇ.”

“ನೀ ಸುಳ್ಲು ಹೇಳಿದರೆ ನನಗೆ ಗೊತ್ತಾಗಲ್ಲ ಅಂತ ತಿಳೀಬೇಡ. ಅದೇನು ನಿನ್ನ ಪ್ರಾಬ್ಲೆಮು ನನ್ನಲ್ಲಿ ಹೇಳು!” ಎಂದು ಸುನಯನ ಅವಳ ಪಕ್ಕದಲ್ಲಿ ಕುಳಿತಳು.

ರೇಶ್ಮ ತನ್ನ ತಂಗಿಯ ಕಣ್ಣುಗಳನ್ನೇ ನೋಡತೊಡಗಿದಳು. ಸುನಯನ! ಇವಳಿಗೀ ಹೆಸರು ಎಷ್ಟು ಚೆನ್ನಾಗಿ ಒಪ್ಪುತ್ತದೆ ಎಂದುಕೊಂಡಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಕ್ಷಣರೇಖೆ
Next post ಗಮ್ಮತ್ತು

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…