ಪ್ರತಿದಿನ, ಪ್ರತಿಕ್ಷಣ
ಅದೇ ಕೆಲಸ;
ಹುಟ್ಟಿನ ಮನೆಗೆ
ಭೇಟಿ ಕೊಡುವುದು,
ಸಂಭ್ರಮದ ತುಣುಕನ್ನು
ಮೆದ್ದು, ತನ್ನದೊಂದು
ಬೀಜ ನೆಟ್ಟು, ಗುಟ್ಟಾಗಿ
ಓಡಿಬರುವುದು.
ಮತ್ತೆ ಅದೇ ಕೆಲಸ
ಕಾಯುವುದು
ನೆಟ್ಟ ಬೀಜ ಫಲಕೊಟ್ಟು
ಹಣ್ಣಾಗಿ ಕಳಚಿಕೊಳ್ಳುವುದನ್ನೇ
ಕಣ್ಣಾಗಿ ಕಾಯುವುದು.

ಮತ್ತೆ ಅದೇ ಕೆಲಸ
ಆಯುವುದು
ಕವಡೆ ಕಣ್ಣುಗಳನ್ನು
ನಾರುವ ಹುಣ್ಣುಗಳನ್ನು
ತಲೆಬುರುಡೆ, ಎದೆಗೂಡು
ಅಳಿದುಳಿದ ಹಾಡುಗಳನ್ನೂ
ಆಯುವುದು.

ನಿತ್ಯದ ಕೆಲಸದ ಮಧ್ಯೆ
ತುರ್ತಿನ ಕರೆ ಬಂದಲ್ಲಿ….
ಓಡಬೇಕು ಬಿರುಗಾಳಿಯಾಗಿ,
ಇಲ್ಲ. ಯಾವುದಾದರೊಂದು
ನದಿಯೊಳಗೆ ಅವಿತು
ಉಕ್ಕಬೇಕು ಪ್ರವಾಹವಾಗಿ
ಅಥವ ಉಲ್ಕೆಯಾಗಿ
ಉರಿದು ಕಲ್ಲುಗಳ
ಮಳೆಗರೆಯಬೇಕು.

ಒಮ್ಮೊಮ್ಮೆ ಅನಿಸುತ್ತೆ
ಎಲ್ಲ ಮರೆತು
ಎಲ್ಲಾದರೊಂದು ಕಡೆ
ದೂರ ಒಂಟಿಯಾಗಿ
ಮರುಭೂಮಿಯ ಹಾಗೆ
ನಿಂತು ಬಿಡಬೇಕೆಂದು.