ಅವರು ಬಿಳಿ ಬಣ್ಣದ ಮಾಯಾ
ಮಂದರಿ ಹೊದ್ದು ಬಂದಿದ್ದರು
ತೆವಳುತ್ತ, ಸರ್ಪಸಂತತಿ
ಅನ್ನವಿಕ್ಕಿದ್ದಲ್ಲೇ ಕನ್ನವಿಕ್ಕುವುದು.
ಕಸಿದುಕೊಂಡರು-ಹಕ್ಕು, ಸ್ವಾತಂತ್ರ್ಯ
ದತ್ತು ಮಕ್ಕಳಿಗೆ ಹಕ್ಕಿಲ್ಲ, ಕರಾಕರಣೆ,
ಒಡೆದು ಆಳುವ ತಂತ್ರ ಕುತಂತ್ರ
ಶ್ರೇಷ್ಠ ನಾಗರಿಕತೆಯ ಬುಡದಲ್ಲಿತ್ತು
ಅಪರ ಅನಾಗರಿಕತೆ, ಮತ್ತೆ ಕೆಲವರ
ಕೈಯಲ್ಲಿತ್ತು ಧರ್ಮಗಾಥೆಯ ಹೊತ್ತಿಗೆ
ಬೆಣ್ಣೆಮಾತಿನ ಬುದ್ದಿವಂತರ ಮತ್ತೊಂದು
ಅವತಾರ – ಅವಾಂತರ ಮತಾಂತರ
ಕನಸಾಯಿತು ಸ್ವಾತಂತ್ರ್ಯ
ಹೆಣ್ಣು, ಹೊನ್ನು ಮಣ್ಣುಗಳ ಪರತಂತ್ರ
ಹುಟ್ಟದಿದ್ದರೆ ಹೇಗೆ? ಸೇಡು
ಮನೆ ಮನೆಯಂಗಳದಿ ಒಂದೇ ಕಲರವ
ಹಕ್ಕು-ಸ್ವಾತಂತ್ರ್ಯ, ಅಲ್ಲೊಬ್ಬ ಇಲ್ಲೊಬ್ಬರಲ್ಲ
ಅವರೊಳಗೆಲ್ಲಾ ಒಬ್ಬನೆ-ವೀರ
ಮುತ್ತಿದರು ಅಕ್ಷೋಹಿಣಿ, ಅಕ್ಷೋಹಿಣಿ
ಹಣಾಹಣಿಗೆ, ನೆತ್ತರುಕ್ಕಿಸಿದರು. ಗಲ್ಲು ಗೆದ್ದರು.
ಬೂಟು ಕಾಲಿಗೆ, ತುಪಾಕಿ ಪೀರಂಗಿಗೂ
ಗುಂಡುಗುಂಡಿಗೂ ಗುಂಡಿಗೆಯ ಒಡ್ಡಿದರು.
ಒಂದೇ ಮಂತ್ರಘೋಷ -ಆದ್ಯ ಕನಸು
ತರುಣ ಧಮನಿಗಳಲಿ ಉರಿವ ಶಿಖೆ
ಜಾತಿ ಮತ ಪಂಥಗಳ ನಡುವೆ ಒಂದೇ ಮರ್ಮ
ಸ್ವಾತಂತ್ರ್ಯ ನಮ್ಮ ಧರ್ಮ

ಹುತ್ತ ಬೆಳೆದಿತ್ತು ಬೃಹದಾಕಾರ
ಆದರೆ ಪಕ್ಕದಲ್ಲೊಬ್ಬ ಅರೆನಗ್ನ ಮಂತ್ರವಾದಿ
ನಿಂತಿದ್ದ ಪುಂಗಿ ಹಿಡಿದು, ಹೆಡೆ ಎತ್ತಿದ
ಸರ್ಪಗಳ ಹೆಡೆ ಮುರಿಗೆ ಕಟ್ಟಲು
ಮತ್ತೊಬ್ಬ ಬಿಲ್ಲುಗಾರ ಕೋನೆ ಕೋನೆಗೂ
ಕಣ್ಣು ಮುಚ್ಚಿ ಬಾಣ ಬಿಡತೊಡಗಿದ.
ಇರುವೆ ಕಟ್ಟಿದ ಗೂಡು
ತನ್ನದೆಂದು ಬೀಗುತ್ತಿದ್ದ ಸರ್ಪಗಳು
ಸದ್ದಿಲ್ಲದೇ ಸರಿದು ಹೋದವು
ಹುತ್ತಕ್ಕೆ ಬೆಂಕಿ ಬೀಳತೊಡಗಲು
ನನಸಾಯಿತು ಸ್ವಾತಂತ್ರ್ಯ
ಭಾರತೀಯರ ಎದೆಗೂಡ ಕಹಳೆಯಲ್ಲೀಗ
ಜೈಹಿಂದ ಒಂದೇ ಮಂತ್ರ
*****

ನಾಗರೇಖಾ ಗಾಂವಕರ