ಋಷಿಗಳಿದ್ದರು ಹೃಷೀಕೇಶದಲಿ ವಿವಿಧ ವೇಷದಲಿ
ಗಡ್ಡಕೂದಲ ಬಿಟ್ಟವರು ಕಾಷಾಯ ತೊಟ್ಟವರು
ಕೆಲರು ತಲೆ ಮರೆಸಿ ಯಾರು ಯಾರನೊ ಅರಸಿ
(ಪ್ರತಿಯೊಂದು ತಲೆ ಹುಡುಕದೇ ತನ್ನ ನೆಲೆ?)
ತಮಾಲವೃಕ್ಷಚ್ಛಾಯೆ ಆಹ ತಣ್ಣನೆ ಹಾಯೆ
ಇದು ಧ್ಯಾನಾಸಕ್ತಿಯೊ ಕೇವಲ ಧೂಮಪಾನಾಸಕ್ತಿಯೊ
ಹೇಳುವುದು ಹೇಗೆ ಅಂಥ ದಟ್ಟದ ಹೊಗೆ!

ಬಣ್ಣಿಸಲೆಂತು ಲಕ್ಷ್ಮಣಜೂಲವೆಂಬ ಮಾಯಾಜಾಲ
ಸುರನದಿಯ ಮೇಲೆ ತೂಗಿ ತೊನೆವುಯ್ಯಾತಿ
ಬೆಟ್ಟ ಕಣಿವೆಯ ಗಾಳಿಗಿದು ಕುಣಿವ ಜೋಕಾಲಿ
ಮನಸು ಡೋಲಾಯಮಾನ ಹೆಜ್ಜೆ ಜೋಪಾನ
ನೋಡಬಾರದು ಕೆಳಗೆ ಗಂಗೆ ಕರೆವಳು ಒಳಗೆ
ಕಂಡವರು ಯಾರವಳ ಅಂತರಂಗದ ಆಳ!
ಅಡಿಯ ಮುಂದೆಯ ಸ್ವರ್ಗ–ಇದೊಂದೆ ಮಾರ್ಗ

ದಾಟು ಎಂದೊಡೆ ಅದರ ಅರ್ಥಕಿನ್ನೆಷ್ಟು ಪದರ!
ಜೂಲ ದಾಟಲು ನಾವು ಏನೇನ ದಾಟಿದೆವು?
ದಾಟಿದೆವೆ ಸಂಸಾರವೆಂಬ ಮಹಾಸಾಗರವ?
ದಾಟದೆವೆ ಮರ್ತ್ಯವನು ದಾಟಿದೆವೆ ಮೃತ್ಯುವನು?
ದಕ್ಷಿಣದೇಶದಿಂದ ಬಂದು ಉತ್ತರಕೆ ಸಂದು
ಸೇರಿ ಅಪರಂಪಾರ ಹೊಂದಿ ರೂಪಾಂತರ
ಫಲಬಿಟ್ಟ ಶ್ರಮವೆ ನಮ್ಮ ಸ್ವರ್ಗಾಶ್ರಮವೆ!

ಎಲಲ ಯಾರಿವನು ವಲಲ! ಇವನೆ ಛೋಟಿವಾಲ
ಕುಳಿತಿರುವ ಹೇಗೆ ನೋಡಿ ಹಾಕಿ ಜನರಿಗೆ ಮೋಡಿ
ಮೈಯೆಲ್ಲ ಬಣ್ಣದ ಹಿಟ್ಟು ಸಟೆದು ನಿಂತಿದೆ ಜುಟ್ಟು
ಸೊಂಟದಲಷ್ಟೆ ಬಟ್ಟೆ ಉಳಿದುದೆಲ್ಲವು ಹೊಟ್ಟೆ
ಜೀವಂತ ಜಾಹೀರು ಖಾನಾವಳಿಯ ಎದುರು
ಮೊದಲಿಗೆ ತಿಂಡಿತೀರ್ಥ ನಂತರವೆ ಪರಮಾರ್ಥ
ಕೊನೆ ಮೊದಲಿಲ್ಲದ ವೃತ್ತ ಕವಿಯುತಿತ್ತು ಸುತ್ತ

ಒಬ್ಬಾತನಿಂತೆಂದ : “ಸುರಲೋಕದಿಂದ
ಗಂಗೆಯನು ತಂದವರು ನನ್ನದೇ ಪೂರ್ವಜರು
ದಾಖಲೆಯಿಲ್ಲ ಏನಿಲ್ಲ, ನನ್ನ ಗತಿ ಯಾರಿಗು ಸಲ್ಲ
ಅನಿಶ್ಚಿತತೆಯ ದಿಗಿಲು ಎಲ್ಲಕಿಂತಲು ಮಿಗಿಲು!”
ಉರಿಯುತಿತ್ತವನ ಕಣ್ಣುಗಳಲಿ ಭಗೀರಥತನ
ಕಾಯುತಿರುವಂತಿತ್ತು, ನಡು ಮಧ್ಯಾಹ್ನದ ಹೊತ್ತು
ಗಂಗಾನದಿಯ ತೀರ ಕೊನೆಯ ಅವತಾರ

ಆಮೇಲೆ ನಡೆದೆವು ನಾವು ನದಿಯ ತಾವು
ಇಳಿದು ಸೋಪಾನಗಳ ಇಳಿಸಿದೆವು ಪಾದಗಳ
ಅರೆ! ಎಂಥ ಸಳೆತ ಈ ನೀರಿಗೆಷ್ಟು ಶೀತ!
ಹಿಮದ ಕಂದರ ಇಳಿದು ಬಂದ ನದಿಯೆ ಸರಿ ಇದು
ಕೊರೆಯುವುದು ಕೆಳಗೆ ಮೇಲೆಯೋ ಬಿಸಿಲ ಧಗೆ
ಮುಳುಗಲಾರೆವು ಮುಳುಗದೆಯೆ ಇರದ ಕಾವು
ಎರಡು ಸ್ಥಿತಿಗಳ ನಡುವೆ ತೊನೆದುದು ನಾವೆ

ಅವತಾರವೆಂದೆನೆ? ಅವತಾರಕುಂಟೆ ಕೊನೆ!
ಬರಿಮೈಯ ಅಬಲೆ ತಿಕ್ಕಿತೊಳದು ಮೊಲೆ
ಬಟ್ಟಬಯಲಿನ ಮರೆಗೆ ಉಟ್ಟುಕೊಳ್ಳುವವರೆಗೆ
ಎಷ್ಟು ಸಾವಿರ ಹುಣ್ಣು ಬಿಟ್ಟಿಕೊಂಡಿತು ಕಣ್ಣು ?
(ಛೇ ಛೇ! ಇದು ಸರಿಯಲ್ಲ ಬಿಡುವೆನೀ ಸೊಲ್ಲ
ಕವಿತೆಗೆ ಬೇಕಿಂದು ವಾಸ್ತವದ ಬಿಗುವೆಂದು
ಬಿಟ್ಟು ನೋಡಿದರೆ ಮತ್ತೇಕೆ ನಡುಗುತಿದೆ ಧರೆ ?)

ಓಹೊ! ನೆಲೆತಪ್ಪಿ ಅಂಡಲೆಯುತಿಹನು ಪಾಪಿ
ಪ್ರಥಮಾವತಾರದಲೆ ಎಷ್ಟು ಬೆಳೆದಿದೆ ತಲೆ!
ಇದ್ದಿಲು ಸುಟ್ಟ ಬೂದಿ ಬಿದ್ದ ಬೀದಿಯ ರಾಡಿ
ಹಾಸುಗಲ್ಲುಗಳ ನಡುವೆ ಸೆಳೆದುದೇನವನ ಗೊಡವೆ
ಯಾರೊ ಚೆಲ್ಲಿದ ಪುಣ್ಯ ರೂಪಾಯಿಯ ನಾಣ್ಯ
ಒಂದು ಕ್ಷಣ ನಿಂತನೀ ಯುಗಾಂತರದ ಸಂತ
ಅದದೊ ನಿಂತಿತು ಯುಗ ಅವನು ನಿಂತಾಗ!
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)