ಕವಿತೆಯ ಕಟ್ಟುವ ಜಂಬದ ಕೋಳೀ!
ಬಾ ಬಾ ಎನ್ನುತ ಕೂಗಿದನು
ಅವನೇ ನನ್ನನ್ನು ಕರೆದವೆನೆನ್ನುತ
ಜವದೊಳು ದನಿಹಿಡಿದೋಡಿದೆನು

ಏನಿದು ನಿನ್ನೀ ಆರ್ಭಟವೆನ್ನುತ
ನಸುನಗೆಯಿಂದಲಿ ಕೇಳಿದನು
ನಾನೇನುತ್ತರ ಕೊಡದಿರೆ ಮರುಕದಿ
ಗಡುವನು ನಿಯಮಿಸಿ ಕಳುಹಿದನು

ಗಡುವಿಗೆ ಉತ್ತರ ಕೊಡುವೆನು ಎನ್ನುತ
ಸಡಗರದಿಂದಲಿ ಸಾಗಿದೆನು
ಒಡೆಯಾ, ನಿನ್ನನು ತಿಳಿಯಲೆ ನನ್ನೀ
ಕವಿತೆಗಳೆನ್ನುತ ಓಡಿದೆನು

ನಿನ್ನನು ತಿಳಿಯದ ಘನ ಪಂಡಿತಳೆ
ನನ್ನನು ತಿಳಿಯಲು ಹೊರಟಿಹೆಯಾ?
ನಿನ್ನನು ತಿಳಿದರೆ ನನ್ನನು ತಿಳಿಯುವೆ
ನಡೆ ನೆಡೆ ಎನ್ನುತ ಕಳುಹಿದನು

ಥಟ್ಟನೆ ನನ್ನನು ತಿಳಿಯುವೆನೆನ್ನುತ
ದೃಷ್ಟಿಯ ಮರಳಿಸಿ ನೋಡಿದೆನು
ಸೃಷ್ಟಿಯೆ ತಲೆಕೆಳಗಾಯಿತು ಆಕ್ಷಣ
ಅಬ್ಬಾ ಎನ್ನುತ ನಡುಗಿದೆನು

ಕಾಣದು ಛೀ ಛೀ ಇದು ಹೊಸದಾರಿ
ನಾನಿದನೊಲ್ಲೆನು ಎಡವಿದೆನು
ಹೂವನು ಮುಡಿಯಲು ಬೇರುಗಳೇತಕೆ?
ಬಿಡು ಬಿಡು ಎನ್ನುತ ಕೊಡವಿದೆನು

ಬೇರಿನೊಳಲ್ಲವೆ ಸಾರದ ಸವಿಯು?
ಭುಜಿಸುವುದೇನನು ಎಲೆ ಮರುಳೇ!
ದಾರಿಯನರಿಯದೆ ನಡೆದರೆ ಫಲವೆ?
ಜನಕಜೆ ಎನ್ನುತ ಕೂಗಿದನು!
*****