Home / ಕವನ / ಕವಿತೆ / ಚಂಡಿಗೆ ಮೊರೆ

ಚಂಡಿಗೆ ಮೊರೆ

ಚಂಡಿ! ನೀ ಗುಣವಂತೆ ಬರಿದೆ ದೂರಿದನವನು,
ಮುದಿಗೂಬೆ ಹೇಳಿದುದೆ ಲೋಕಮೆಚ್ಚಿಕೆಯಾಯ್ತು
ಕಂಡ ಕಂಡವರೆಲ್ಲ ಚಂಡಿತನವೆನಲಾಯ್ತು.
ನಿನ್ನಂಥ ಸುಗುಣಿಗಳು ಈಗೆಲ್ಲಿ ದೊರೆಯುವರು !
ವಿಧಿಯ ಕಾರ್ಪಣ್ಯವಂ ಸೃಷ್ಟಿ ವೈರಸ್ಯವಂ
ಈ ಯುಗದ ಹೆಂಗಳಂ ಬಣ್ಣಿಸಲುಮಳವಲ್ಲ.
ಬಾರೆಂದೊಡಂ ಇಲ್ಲ ಹೋಗೆಂದೊಡಂ ಇಲ್ಲ
ಬೇಕೆಂದೊಡಂ ಇಲ್ಲ ಬೇಡೆಂದೊಡಂ ಇಲ್ಲ
ಕಪ್ಪಕಾಣಿಕೆಗಿಲ್ಲ ನಲ್ನುಡಿಗೆ ಮೊದಲಿಲ್ಲ
ಕೋಪತಾಪಕುಮಿಲ್ಲ ಬೇಡಿಕೆಗೆ ಮುನ್ನಿಲ್ಲ
ಏನೇನ ಪೇಳ್ದೊಡಂ ಅವರಲ್ಲಿ ನಿಷ್ಪಲಂ
ಅವರ ಕೈವಿಡಿದರ್ಗೆ ಇಹದಿ ನಾಯಕ ನರಕ.
ಜಗದ ಮೊಂಡುಗಳೆಲ್ಲ ಒಳಸಂಚು ಮಾಡಿಹರೊ
ಹಿರಿಯ ಗುರು ಬೋಧಕಳು ಆವ ದೇವತೆಯಿಹಳೊ
ಇಂತಿರಲು ಮಾತಾಯಿ ಎಂತಿಹಳೊ
ಇದ್ದಿದ್ದು ಆಕೆಗೇನಪರಾಧ ಮಾಡಿದೆವೋ !
ನಿನ್ನ ಗುಣವರಿತರಿತು ವಿಪರೀತಮಂ ನುಡಿದು
ಬಾಳಲಾರದೆ ತಾನು ಕೋಪದಿಂ ಶಾಪಮಂ
ಕೊಟ್ಟ ತಾಪಸನನುದ್ದಾಲಕನ ಬುದ್ದಿಯಂ
ದುರ್ಬುದ್ದಿಯಂ ಜರೆದು ನಿನ್ನ ಮನ್ನಿ ಸರಮ್ಮ !
ಸೂರ್ಯೋದಯಕೆ ಚನ್ನ ಕೋವಳೆಯು ನಗಲೇನೊ
ಚಂದ್ರೋದಯಕೆ ಚನ್ನ ತಾವರೆಯು ನಗಲೇನೊ
ನಿಯಮ ಪಲ್ಲಟವಾಗಿ ಬೇರೊಂದು ವಿಧಿಯಾಗಿ
ಬೆಳಗಿದೊಡೆ ಸಾಲದೇಂ ? ನೀನಿಂದು ಬಾರಮ್ಮ !
ನಿನ್ನ ಸುಗುಣದ ಸಿರಿಯ, ನಿನ್ನ ಘನತರ ವಿಧಿಯ
ಈ ಹೆಂಗಳಿಗೆ ತೋರಿ ಗುಣವಂತೆಯೆನಿಸಮ್ಮ.
ಅವರಲ್ಪ ಸಂಸಾರವಂ ದುಃಖಸಾಗರವ
ನಿನ್ನೊಲುಮೆಯಂ ಬೀರಿ ಸುಖಜಲಧಿ ಮಾಡಮ್ಮ !
ಕಣ್ಣೀರ ಕೋಡಿಗಳು ಚಿಂತಾಗ್ನಿ ನಂದಿಲ್ಲ
ಕಲಿತ ವಿದ್ಯೆಗಳಿಂದ ಅಜ್ಞಾನವಳಿದಿಲ್ಲ
ಲೋಕವಾಳಿದೊಡೇನು ಆಳಾಗಲೊಪ್ಪುವರು
ಶಾಂತಿ ದೊರೆತೊಡೆ ಸಾಕು, ಏನಾದರಾಗುವರು ;
ಆಳಲ್ಲ ಅರಸ ಏನುಮಂ ಸೈರಿಸರು
ಪತಿಯ ಬಾಳ್ಕೆಯ ಲತೆಗೆ ವಿಷವಾಗಿ ಹರಿಯುವರು
ಅವರ ಹರುಷದ ಗುಡಿಗೆ ಸಿಡಿಲಾಗಿ ಎರಗುವರು
ಈ ಹೆಂಗಳನು ಕೋಟಿ ಕೌಂಡಿನ್ಯರರಿದಪರೆ
ಬ್ರಹ್ಮಂಗೆ ರುದ್ರಂಗೆ ವಿಷ್ಣುವಿಂಗಳವಲ್ಲ !
ವಿಪರೀತೆಯಾದೊಡಂ ಗುಣವಂತೆ ನೀನಮ್ಮ
ಚಂಡಿಯೆನಿಸಿರ್ದೊಡಂ ಹದಿಬದೆಯು ನೀನಮ್ಮ
ವೇದಜಡ ಛಾಂದಸಂ ಸುಖಿಸಿದಂ ದೂರಿದಂ
ಅರೆಯಾಗಿ ಹೋಗೆಂದು ನೆವಮಿಲ್ಲದುಸುರಿದಂ
ಲೋಕ ನಿನ್ನನು ಹಳಿದು ಮರುಗುವುದು ತಾಪಸಗೆ
ಲೋಕ ಮತವನು ನಚ್ಚಿ ನಡೆಯೆಂದು ನುಡಿಯುವರು
ಎಂತು ನಚ್ಚುವುದೆಂತು ಮೆಚ್ಚುವುದು ವಿಪರೀತ
ಲೋಕಮಂ, ಎಂತು ನಡೆಯುವುದು ನಾನರಿಯೆನಮ್ಮ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...