ಸಂಜೆಯ ಮಂಜು

ಸಂಜೆಯ ಮಂಜು ಕವಿಯು ವೇಳಗೆ ಬಂದರು ನಾಲ್ಕು ಜನ ಮುಖವೇ ಕಾಣದ ಹೆಸರೇ ಕೇಳದ ಯಾರೋ ದೀನಜನ ಜಗುಲಿಯ ಮೇಲೆ ಕೂರಿಸಿ ಹಾಕಿದೆ ಉಳಿದ ಕೊಂಚ ಅನ್ನ ಹಾಸಲು ಹೊದೆಯಲು ನಾಚದೆ ನೀಡಿದೆ ತುಂಡು ಹೊದಿಕೆಯನ್ನ ಆತುರದಿಂದಲೆ ತಿಂದರು ಅನ್ನವ ಮುಖ ಅರಳಿತು ಹಿತಕೆ, ಏನು ಬೆಚ್ಚಗಿದೆ ಆಹಾ! ಎಂದರು ಮೈಗೆ ಹೊದ್ದು ಹೊದಿಕೆ. ಬೆಳಗಾಗೇಳುತ ಬಂದರೆ ಹೊರಗೆ ಇಡೀ ಜಗಲಿ ಬರಿದು! ಹೇಳದೆ ನಡೆವುದೆ ಎನ್ನುತ ಪೂಜೆಗೆ ಬಂದೆ ನೀರ ಮಿಂದು ಆದರೇನು ಇದು, ದೇವರ…

ಸಂಜೆಯ ಮಂಜು ಕವಿಯು ವೇಳಗೆ
ಬಂದರು ನಾಲ್ಕು ಜನ
ಮುಖವೇ ಕಾಣದ ಹೆಸರೇ ಕೇಳದ
ಯಾರೋ ದೀನಜನ

ಜಗುಲಿಯ ಮೇಲೆ ಕೂರಿಸಿ ಹಾಕಿದೆ
ಉಳಿದ ಕೊಂಚ ಅನ್ನ
ಹಾಸಲು ಹೊದೆಯಲು ನಾಚದೆ ನೀಡಿದೆ
ತುಂಡು ಹೊದಿಕೆಯನ್ನ

ಆತುರದಿಂದಲೆ ತಿಂದರು ಅನ್ನವ
ಮುಖ ಅರಳಿತು ಹಿತಕೆ,
ಏನು ಬೆಚ್ಚಗಿದೆ ಆಹಾ! ಎಂದರು
ಮೈಗೆ ಹೊದ್ದು ಹೊದಿಕೆ.
ಬೆಳಗಾಗೇಳುತ ಬಂದರೆ ಹೊರಗೆ
ಇಡೀ ಜಗಲಿ ಬರಿದು!
ಹೇಳದೆ ನಡೆವುದೆ ಎನ್ನುತ ಪೂಜೆಗೆ
ಬಂದೆ ನೀರ ಮಿಂದು

ಆದರೇನು ಇದು, ದೇವರ ಮನೆಯಲಿ
ಧೂಪದ ಪರಿಮಳವು!
ದೀಪ ಉರಿದಿವೆ ಹೂವು ಸುರಿದಿವೆ
ಸಂದಿವೆ ಪೂಜೆಗಳು!
*****