ಹರಿವ ನದಿಯು ನೀನು
ಸುರಿವ ಮಳೆಯು ನೀನು
ನೆಲದಿ ಬಿದ್ದ ಬೀಜ ಮೊಳೆಸಿ
ಫಲದಿ ಬಂದೆ ನೀನು
ಹೂವು ಹಣ್ಣ ಮೈಯೊಳು
ಹೊತ್ತ ಬಳ್ಳಿ ನೀನು
ತಾರೆಗಳಿಗೆ ತೀರವಾಗಿ
ನಿಂತ ಬಾನು ನೀನು
ಭಾರ ತಾಳಿ ನಗುವೆ
ನೋವ ಹೂಳಿ ನಲಿವೆ
ಲೋಕವನೇ ಸಾಕಲು
ನಿನ್ನ ಬಾಳ ಸುಡುವೆ
ಮರೆಯ ಬಾಳು ನಿನ್ನದು
ಹೊರುವ ಬಾಳು ನಿನ್ನದು
ಆನಂದದಿ ಇರಲು ನಾವು
ತೆರುವ ಬಾಳು ನಿನ್ನದು
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.