ನಿನ್ನೊಳಗಿರುವುದೆ ಒಂದು ವಿಧ
ನಾನರಿತಿರುವುದೆ ಒಂದು ವಿಧ!

ಬಟ್ಟೆಯ ಹಾವನು ಬಿಟ್ಟಿಹೆಯಾ?
ತಿಳಿದೆನು ಬಿಡು ಬಿಡು ಗಾರುಡಿಯಾ!

ಬರಿದೇ ಅಲೆಗಳ ತರಿಸಿಹೆಯಾ?
ಪರಿಶುದ್ಧನೆ ಒಳಗಡಗಿಹೆಯಾ!

ಎಲ್ಲಿಯು ನೀನೇ ತುಂಬಿಹೆಯಾ?
ಸಾಹಸಿಗಲ್ಲದೆ ಕಾಂಬುವೆಯಾ!

ಮೂಡಿತು ಮೂಡಿತು ಸವಿ ನೆನಪು
ಬಂದಿತು ಬಂದಿತು ನಿನ ರೂಪು!

ದೂರದ ಮಿಂಚಿದು ನಿಲಿಸುವೆನೇ?
ಓಡದೆ ನಿನ್ನನು ತಾಗುವೆನೇ?

ಈಗಲೆ ಪಯಣವ ಬೆಳಸುವೆನು
ಸೀಳುತ ಹಾಯ್ವೆನು ಅಲೆಗಳನು!

ತಾವರೆ ಬಿಂದುವು ಆಗುವೆನು
ಈಜುತ ನಿನ್ನೆಡೆ ಸಾಗುವೆನು!

ಮೌನದ ಕ್ಷೇತ್ರದಿ ತಂಗುವೆನು
ಆಗಲೆ ಸ್ವಾಗತ ಕೊಡು ನೀನು!

ದ್ವೈತವನಲ್ಲಿಯೆ ನೀಗುವೆನು
ಜನಕಜೆ ಪೆಸರನು ಅಳಿಸುವೆನು!
*****