ಮನೆಯ ದೀಪ ಹೆಣ್ಣು
ಸಂಸಾರಕ್ಕೆ ಅವಳೇ ಕಣ್ಣು
ಕೊಳೆ ಜಾಡಿಸಿ ಮನೆಯ
ತಮ ಓಡಿಸಿ ಮನದ
ಹಂಡೆ ಒಲೆಗೆ ಉರಿಹಚ್ಚಿ ನೀರ ಹೊಯ್ದು
ಮನೆ ಮಂದಿಗೆಲ್ಲಾ ಎಣ್ಣೆ ಮಜ್ಜನ ಗೈದು
ಹಿಂಡಲಿ ಕಾಯಿ ಮೆಟ್ಟಿ
ಬಲಿಯ ಪಾತಾಳ ಕಟ್ಟಿ
ಬರುವಾಗ ಪತಿರಾಯಗೆ ಆರತಿಯ ಎತ್ತಿ
ಸಿಹಿ ಊಟ ಉಣಿಸಿ
ಮನೆ ಮನವ ತಣಿಸಿ
ತುಂಬಿಹಳು ಕಜ್ಜಾಯಗಳ ಭರಣಿ
ಹಚ್ಚಿಹಳು ದೀಪಗಳ ಸರಣಿ
ಮೆಲ್ಲ ಮೆಲ್ಲನೆ ಅರಳಿ
ಮಂದಹಾಸವ ತೋರಿ
ಅವಳಿ ಅವಳಿಯಾಗಿ ದೀಪ
ಹೊನ್ನ ಹೊದ್ದುಟ್ಟು
ಬಣ್ಣ ಬಿಚ್ಚಿಟ್ಟು ಸೂಸುತಿದೆ
ಬೆಳಕ ಅಚ್ಚಾದ ರೂಪ
ಈ ಒನಪು ಈ ಹೊಳಪು
ಮರು ಮರುತ ಬರಲಿ
ಹೆಣ್ಣ ಬದುಕಿನ ಬೆಳಕು
ಜಗಮಗಿಸುತಿರಲಿ.