ಚಿತ್ರದುರ್ಗವೆಂದರೆ ಏಳುಸುತ್ತಿನ ಕೋಟೆ ಕೊತ್ತಲಗಳು, ಬುರುಜು ಬತೇಲಗಳು, ಬಂಡೆಗಲ್ಲುಗಳು, ಬಿಚ್ಚುಗತ್ತಿ ಭರಮಣ್ಣ ನಾಯಕ, ಮದಕರಿನಾಯಕ, ಓಬವ್ವ ಇಷ್ಟೇ ಅಲ್ಲ, ಇವೆಲಾ ಮುನ್ನೂರು ವರ್ಷಗಳ ಮಾತಾಯಿತು. ದುರ್ಗದ ಇತಿಹಾಸ ಅಲ್ಲಿಗೇ ನಿಲ್ಲಲಿಲ್ಲ, ದುರ್ಗದ ವಸುಂಧರೆಯ ಒಡಲು ಬರಿದಾಗಲಿಲ್ಲ, ಇತಿಹಾಸವನ್ನೇ ಮರು ಸೃಷ್ಟಿಸಬಲ್ಲ ಸಮರ್ಥ ರತ್ನಗಳನ್ನು ಆಕೆ ಪದೆ ಪದೆ ನೀಡಿದ್ದಾಳೆಂಬುದನ್ನು ಹೊಸ ಶತಮಾನದ ಸಂದಭ್ರದಲ್ಲಿರುವ ನಾವು ಇದೀಗ ಅಚ್ಚರಿ – ಆದರಗಳೊಂದಿಗೆ ಅವಲೊಕಿಸಬೇಕಿದೆ.

ಈ ಗಂಡುಮೆಟ್ಟಿನ ನಾಡು ಇಂದಿಗೂ ಐತಿಹಾಸಿಕವಾಗಿ, ಧಾರ್ಮಿಕವಾಗಿ, ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಗೌಣವಾಗಿಲ್ಲದಿರುವುದು ತನ್ನದೇ ಆದ ವಿಶಿಷ್ಟ ಗುಣಗಳನ್ನು ಪಡೆದುಕೊಂಡಿರುವುದು ಗಮನಾರ್ಹ ಸಂಗತಿ. ನವೋದಯದ ಕಾಲಕ್ಕೆ ಬಂದರೆ ಚಿತ್ರದುರ್ಗ ಜಿಲ್ಲೆಸಾಹಿತ್ಯಕವಾಗಿ ಹಲವು ಮಹನೀಯರನ್ನು ಕಾಣಿಕೆಯಾಗಿ ನೀಡಿದೆ.

ಸಾಹಿತ್ಯ ಸುಮಗಳು
ಅಗ್ರಗಣ್ಯ ವಿದ್ವಾಂಸರು ಅಶ್ವಿನಿ ದೇವತೆಗಳಲ್ಲೊಬ್ಬರೆಂದು ಹೆಸರಾದ ಟಿ.ಎಸ್. ವೆಂಕಣ್ಣಯ್ಯ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಗ್ರಾಮದವರು. ಅಂತೆಯೇ ವಿದ್ವಾಂಸರ ಮನ್ನಣೆಗೆ ಪಾತ್ರರಾದ ಬಹುಮುಖ ಪ್ರತಿಭೆಯು ತ.ಸು. ಶಾಮರಾಯರು, ದುರ್ಗದ ಇತಿಹಾಸವನ್ನು ರೋಚಕ ಕಾದಂಬರಿಗಳಿಂದ ಕಟಿಕೊಟ್ಟ ತ.ರಾ.ಸು ಇವರೆಲ್ಲಾ ಒಂದೇ ಮನೆತನದಿಂದ ಹುಟ್ಟಿ ಬಂದ ಸಾಹಿತ್ಯ ಸುಮಗಳು. ಈ ಮನೆತನದ ಮೂಲ ತಳುಕಿನ ಸುಬ್ಬಣ್ಣನವರಿಂದ ಪ್ರಾರಂಭವಾಗುತ್ತದೆ. ವೃತ್ತಿಯಲ್ಲಿ ಶೇಕದಾರರಾದರೂ ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತರು ಧರ್ಮ ಶ್ರದ್ಧೆಯುಳ್ಳವರಾಗಿದ್ದರು. ರಾಮಾಯಣ ಭಾಗವತ ಪಾರಾಯಣ ಮಾಡುವುದು, ಹಳ್ಳಿಗಳಲ್ಲಿ ಕೋಲಾಟ, ಬಯಲಾಟ, ಭಜನೆಯಂತಹ ಸಾಂಸ್ಕೃತಿಕ ಕಲೆಗಳತ್ತ ಮನನೆಟ್ಟ ಸುಬ್ಬಣ್ಣ ಗ್ರಾಮೀಣ ಪ್ರದೇಶಗಳಲ್ಲಿ ಸಾಂಸ್ಕೃತಿಕ ಸಸಿಗಳನ್ನು ನೆಟ್ಟಿ ಬೆಳಸಿದ ಸದಭಿರುಚಿಯ ವ್ಯಕ್ತಿ. ಇಂಥ ಸುಬ್ಬಣ್ಣನವರ ಜೇಷ್ಠಪುತ್ರರೇ ತಳುಕಿನ ವೆಂಕಣ್ಣಯ್ಯ, ನವೋದಯ ಕಾಲದ ವಿದ್ವಾಂಸರು. ರಾಷ್ಟ್ರಕವಿಗಳಾದ ಕುವೆಂಪು ಅಂಥವರಿಗೆ ಮಾರ್ಗದರ್ಶನ ನೀಡಿದಂತಹ ಘನ ವಿದ್ವಾಂಸರು. ಬಸವರಾಜರಗಳೆ, ಸಿದ್ದರಾಮ ಚರಿತೆ ಹಲವು ವಿದ್ದತ್ ಪೂರ್ಣ ಲೇಖನಗಳನ್ನು ಬರೆದ ಮಹನೀಯರು ಬರೆದದ್ದು ಅಲ್ಪವಾದರೂ ಎಲ್ಲವೂ ಗಟ್ಟಿ ಕಾಳು.

ವೆಂಕಣ್ಣಯ್ಯನವರ ಸೋದರ ತ.ಸು. ಶಾಮರಾಯರು ಕೂಡ ಅಧ್ಯಾಪಕ ವೃತ್ತಿಯಿಂದ ಹಲವು ವಿದ್ವಾಂಸರನ್ನು ಸೃಷ್ಟಿಸಿದ ಕೀರ್ತಿಗೆ ಪಾತ್ರರಾದವರು. ಶ್ರೀಯುತರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಏನು ಕಡಿಮೆಯದಲ್ಲ ‘ಮೂರು ತಲೆಮಾರು’ ಅವರ ಜೀವನಾನುಭವವನ್ನು ಸಾಕಾರಗೊಳಿಸಿದ ಶ್ರೇಷ್ಟ ಕೃತಿ. ಅಂತೆಯೇ ಸಾಹಿತ್ಯ ಚರಿತೆ, ಪ್ರಾಧಾಪಕ ವೆಂಕಣ್ಣಯ್ಯ ಇಂತಹ ಕೃತಿಗಳೊಂದಿಗೆ ಅವರು ಸಂಪಾದಿಸಿದ ಕುಮಾರವ್ಯಾಸರ ಭೀಷ್ಮಪರ್ವ ಸಂಗ್ರಹ, ಸಭಾಪರ್ವ ಸಂಗ್ರಹ ಇತ್ಯಾದಿ ಕೃತಿಗಳು ಗಮನಾರ್ಹ. ಬರೆದಂತೆಯೇ ಆದರ್ಶವಾಗಿ ಬದುಕಿದ ಹಿರಿಯ ಜೀವ.

ಇಂತಹ ವಿದಾಂಸರ ಪರಂಪರೆಯಲ್ಲಿ ಹುಟ್ಟಿಬಂದ ತ.ರಾ.ಸು. ವಿದ್ವಾಂಸರಲ್ಲದ್ದಿದ್ದರೂ ಶ್ರೀ ಸಾಮಾನ್ಯ ವಿದ್ವಾಂಸರಾದಿಯಾಗಿ ಸರ್ವರ ಮನ್ನಣೆಗೆ ಪಾತ್ರರಾದ ಜನಪ್ರಿಯ ಸಾಹಿತಿ. ಅ.ನ.ಕೃರವರ ಮಾರ್ಗದರ್ಶನದಲ್ಲಿ ಚಿಗುರೊಡೆದ ತ.ರಾ.ಸು ಆನಕೃರಂತಹ ಕಾದಂಬರಿ ಸಾರ್ವಭೌಮರೇ ಬೆರಗಾಗುವ ರೀತಿ ಹೆಮ್ಮರವಾಗಿ ಬೆಳೆದುನಿಂತ ಕಾದಂಬರಿಕಾರ. ಬರಹವನ್ನೇ ಕಸುಬನಾಗಿ ಮಾಡಿಕೊಂಡು ಬದುಕಿದ ದಿಟ್ಟ ಸಾಹಿತಿ. ಬರೆದದ್ದೂ ಬಹಳ ಅನೇಕ ಕಾದಂಬರಿಗಳು ಚಲನಚಿತ್ರವಾಗಿ ಜಯಭೇರಿ ಭಾರಿಸಿವೆ. ಅವರ ಕಾದಂಬರಿಗಳ ಆಧಾರಿತ ‘ನಾಗರಹಾವು’ ಚಿತ್ರವನ್ನು ಅವರೇ ‘ಕ್ಯಾರೆಹಾವು’ ಎಂದು ಜರೆದರೂ ಚಿತ್ರ ಯಶಸ್ವಿಯಾದದ್ದು ಇತಿಹಾಸ. ಶ್ರೀಯುತರ ಕಾದಂಬರಿ ಆಧರಿಸಿದ ಕಲಾತ್ಮಕ ಚಿತ್ರ ‘ಹಂಸಗೀತೆ’ ರಾಷ್ಟ್ರೀಯ ಮನ್ನಣೆಗಳಿಸಿದ ಮೇರು ಚಿತ್ರ. ತ.ರಾ.ಸು. ಅದೆಷ್ಟೇ ಸಾಮಾಜಿಕ ಕಾದಂಬರಿಗಳನ್ನು ಬರೆದಿದ್ದರೂ ಸಾಹಿತ್ಯಾಸಕ್ತರ ಮನದಲ್ಲಿ ಉಳಿದಿದ್ದು ಮಾತ್ರ ಚಾರಿತ್ರಿಕ ಕಾದಂಬರಿಗಳಿಂದ ಮಾತ್ರವೆ ಎಂಬುದಿಲ್ಲಿ ಉಲ್ಲೇಖನಾರ್ಹ. ಚಾರಿತ್ರಿಕ ಕಾದಂಬರಿಗಳೆಂದರೆ ಆಗಲೂ ಈಗಲೂ ಬರೆವವರು ಕಡಿಮೆ. ಅಂತೆಯೇ ಓದುಗರೂ ಕಡಿಮೆ. ಆದರೆ ಇವರ ಕಾದಂಬರಿಗಳಲ್ಲಿ ಘಟನೆಗಳನ್ನೂ ಕಣ್ಣಿಗೆ ಕಟ್ಟಿಕೊಡುವಂತಹ ‘ಜಾದೂ’ ಇರುತ್ತಿತ್ತು. ಸಾಹಿತ್ಯದಲ್ಲಿನ ಪ್ರಬುದ್ಧತೆ, ನಿರೂಪಣೆಯಲ್ಲಿನ ಮೋಹಕತೆ ಕತೆಯಲ್ಲಿ ತರುವ ರೋಚಕತೆಯಿಂದಾಗಿ ಓದುಗರನ್ನು ರೋಮಾಂಚನಗೊಳಿಸುವ ಅಮೃತ ಕಲೆಗಾರಿಕೆ ಸಿದ್ಧಿಸಿತ್ತು. ಅವರು ಬರೆದ ಹದಿನಾಲ್ಕು ಐತಿಹಾಸಿಕ ಕಾದಂಬರಿಗಳಲ್ಲಿ ದುರ್ಗದ ಇತಿಹಾಸವನ್ನು ಆಧರಿಸಿ ಬರೆದವು ಅವರಿಗೆ ಸಾಹಿತ್ಯದ ಹೆದ್ದಾರಿಯನ್ನೇ ಬಿಟ್ಟುಕೊಟ್ಟಂಥವು.

ತಮ್ಮೂರಿನ ನೆಲ, ಜಲ, ಭಾಷೆ, ಕೋಟೆ ಕೊತ್ತಲಗಳು, ಪಾಳೇಗಾರರ ಶೌರ್ಯ – ಕ್ರೌರ್ಯ, ಪರಾಕ್ರಮಗಳ ಬಗ್ಗೆ ವಿಚಿತ್ರ ಅಭಿಮಾನದಿಂದ ಅವರು ಕಲ್ಪಿಸಿ ಬರೆದದ್ದನ್ನು ದುರ್ಗದ ಜನತೆ ಸತ್ಯವೆಂದೇ ನಂಬಿ ಓದಿದವರು ಪುಳಕಗೊಂಡರು.

ದುರ್ಗದ ಇತಿಹಾಸದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡರು. ಅವರ ಅಸ್ತಮಾನದ ದಿನಗಳಲ್ಲಿ ಬರೆದ ‘ದುರ್ಗಾಸ್ತಮಾನ’ವೆಂಬ ಐತಿಹಾಸಿಕ ಕೃತಿಗೆ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿಯ ಗೌರವ ಪ್ರಾಪ್ತವಾದಾಗ ಆ ಜೀವ ಬದುಕಿರಬೇಕಿತ್ತು. ಬದುಕಿನುದ್ದಕ್ಕೂ ಕಷ್ಟಗಳನ್ನೇ ಉಂಡರೂ ತ.ರಾ.ಸು. ಅವರದು ಅವರ ಕಾದಂಬರಿಗಳಂತೆಯೇ ವರ್ಣರಂಜಿತ ವ್ಯಕ್ತಿತ್ವ.

ಸಂಶೋಧನಾ ಸಿರಿ
ದುರ್ಗದ ಇತಿಹಾಸದ ಜೀವಾಳವಾದ ಶ್ರೀ ಹುಲ್ಲೂರು ಶ್ರೀನಿವಾಸ ಜೋಯಿಸರನ್ನು ದುರ್ಗ ಮರೆಯುವಂತೆಯೇ ಇಲ್ಲ. ಸಾತಂತ್ರ ಚಳುವಳಿಯಲ್ಲಿ ಧುಮುಕಿದ ಜೋಯಿಸರು ತಮ್ಮ ವಕೀಲಿ ವೃತ್ತಿಗೆ ತಿಲಾಂಜಲಿ ಇಟ್ಟ ದೇಶಪ್ರೇಮಿ. ಸ್ವಾತಂತ್ರ್ಯದ ನಂತರವೂ ಅವರು ಕೋರ್ಟಿಗೆ ಹೋಗಿದ್ದಕ್ಕಿಂತ ಕೋಟೆ ಕೊತ್ತಲಗಳಲ್ಲಿ ಸುತ್ತಿದ್ದೆ ಹೆಚ್ಚು. ಯಾವುದೇ ಅಕಾಡೆಮಿಕ್ ಸಹಾಯ – ಸೌಕರ್ಯವಿಲ್ಲದ ಕಾಲದಲ್ಲಿ ದುರ್ಗದಲ್ಲಿ ವ್ಯಾಪಕವಾಗಿ ಕ್ಷೇತ್ರ ಕಾರ್ಯ ನಡೆಸಿದ ಜೋಯಿಸರು ದುರ್ಗದ ಇತಿಹಾಸದ ಬಗ್ಗೆ ನೂರಾರು ಲೇಖನಗಳನ್ನು ಬರೆದು ಛಾಪಿಸಿದರು. ಅದರೊಂದಿಗೆ ಕೋಟೆಯ ಮೊದಲ ಸುತ್ತಿನ ಮಹಾದ್ವಾರ ರಂಗಯ್ಯನ ಬಾಗಿಲ ಬಳಿ ಪ್ರಾಚ್ಯವಸ್ತುಸಂಗ್ರಹಾಲಯ ಒಂದನ್ನು ನಿರ್ಮಿಸಿದ ಇತಿಹಾಸ ಪ್ರೇಮಿ. ಕೋಟೆ ಕೊತ್ತಲಗಳಲ್ಲಿ ದೊರೆತ ಹಾಗೂ ಇತರರಿಂದ ಸಂಗ್ರಹಿಸಿದ ಅನೇಕ ವಸ್ತುಗಳನ್ನು, ಆಯುಧಗಳನ್ನು, ಮಣ್ಣಿನ ಲೋಹದ, ಕಲ್ಲಿನ ಪರಿಕರಗಳು, ತಾಮ್ರಪಟ ನಾಣ್ಯಗಳು ಒಡೆದ ಶಿಲಾ ವಿಗ್ರಹಗಳನ್ನು ತಂದಿಟ್ಟು ದುರ್ಗದವರಲ್ಲಿ ಇತಿಹಾಸದ ಬಗ್ಗೆ ಕುತೂಹಲ ಕೆರಳಿಸಿದ ಪ್ರಥಮ ವ್ಯಕ್ತಿ, ದುರ್ಗದ ಇತಿಹಾಸವನ್ನು ಸಂಶೋಧಿಸಿ ಆ ಕಾಲದಲ್ಲೆ ಅದಕ್ಕೊಂದು ಸ್ವರೂಪ ಕೊಡದೆ ಹೋಗಿದ್ದಿದ್ದರೆ ದುರ್ಗದ ಇತಿಹಾಸ ಕೇವಲ ದಂತಕತೆಯಾಗಿ ಹೋಗಿಬಿಡುವ ಆಪಾಯವಿತ್ತು. ಚೆದುರಿ ಹೋಗಿದ್ದ ಶ್ರೀಯುತರ ನೂರಾರು ಲೇಖನಗಳನ್ನು ಒಂದೆಡೆ ಸಂಗ್ರಹಿಸಿ ಅವುಗಳನ್ನು ಶ್ರೀ ಹುಲ್ಲೂರ ಶ್ರೀನಿವಾಸ ಜೋಯಿಸರ ಲೇಖನಗಳು ಭಾಗ – ೧ ಮತ್ತು ೨ ಎಂಬ ಬೃಹತ್ ಸಂಪುಟಗಳನ್ನು ಹೊರತಂದ ಚಿತ್ರದುರ್ಗ ಜಿಲ್ಲಾ‌ಇತಿಹಾಸ ಮಂಡಳಿಯ ಕಾರ್ಯ ಸ್ತುತ್ಯಾರ್ಹ. ಸಿರಿಗೆರೆ ಬೃಹನ್ಮಠದ ಲಿಂಗೈಕ್ಯ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸಾಮಿಗಳು ಜೋಯಿಸರನ್ನು ‘ಐತಿಹ್ಯ ವಿಮರ್ಶನ ವಿಚಕ್ಷಣ’ ಎಂದು ಬಿರುದು ನೀಡಿ ಗೌರವಿಸಿದ್ದು ಅತಿಶಯೋಕ್ತಿಯೇನಲ್ಲ. ಅನೇಕ ಕಾದಂಬರಿಕಾರರಿಗೆ ಸಂಶೋಧಕರಿಗೆ ಇಂದಿಗೂ ಜೋಯಿಸರೇ ದಾರಿ ದೀಪ.

ಧಾರ್ಮಿಕ ಹೊಂಬೆಳಕು
ರಾಜಾಬಿಚ್ಚುಗತ್ತಿ ಭರಮಣ್ಣ ನಾಯಕನ ಕಾಲದಲ್ಲಿ ಶಾಂತವೀರ ಮುರುಗೇಶ ಸ್ವಾಮಿಗಳು ದುರ್ಗಕ್ಕೆ ಬಂದು ನೆಲೆಸಿದರು. ದೊರೆ ಮೇಲುದುರ್ಗದಲ್ಲೊಂದು ಕೆಳ ದುರ್ಗದಲ್ಲೊಂದು ಬೃಹನ್ಮಠವನ್ನು ಕಟ್ಟಿಸಿಕೊಟ್ಟನೆಂಬುದು ಇತಿಹಾಸ. ಈ ಪರಂಪರೆಯಲ್ಲಿ ಬಂದ ಗುರುಗಳಲ್ಲಿ ಅತ್ಯಂತ ಕ್ರಿಯಾಶೀಲರು ತಪೋನಿಷ್ಠರು. ಸೇವಾ ತತ್ಪರರು, ವಿದ್ವಾಂಸರು ವಿದ್ಯೆಯನ್ನು ಧಾರೆ ಎರೆಯಲೆಂದೇ ಕಂಕಣ ತೊಟ್ಟು ನಿಂತ ಜಯದೇವ ಜಗದ್ಗುರುಗಳು ಶತಮಾನದ ಆರಂಭದಲ್ಲಿಯೇ ಕಾಣಿಸಿಕೊಂಡ ಚಿನ್ಮೂಲಾದ್ರಿ ಚೇತನ. ಸಮಾನತೆ ಸಮಸ್ಯೆ, ಗುರುವಿರಕ್ತರ ಸಮಸ್ಯೆ, ಒಳ ಪಂಗಡಗಳ ಸಮಸ್ಯೆ, ಹಲವು ಹತ್ತು ಸಮಸ್ಯೆಗಳಿಂದ ಜರ್ಝರಿತವಾಗಿದ್ದ ದುರ್ಬರ ದಿನಗಳಲ್ಲಿ ವಿದ್ಯೆ ಉದ್ಯೋಗಾವಕಾಶಗಳಿಲ್ಲದೆ ಸಮಾಜ ಸೊರಗಿದ್ದ ಕಾಲದಲ್ಲಿ ಕತ್ತಲೆಯ ಪಾಳ್ಯದಿಂದ ರವಿ ಮೂಡಿ ಬಂದಂತೆ ಕಾಣಿಸಿಕೊಂಡ ಚಿನ್ಮೂಲಾದ್ರಿ ಪೀಠದ ಈ ಸನ್ಯಾಸಿ ಧರ್ಮ ಸಮಾಜ ಶಿಕ್ಷಣದ ಆಮೂಲಾಗ್ರ ಅಭಿವೃದ್ಧಿಗೆ ಕೇಂದ್ರ ಬಿಂದುವಾದರು. ೧೯೩೮ರಲ್ಲಿ ಹಾವೇರಿಯಲ್ಲಿ ಮಹಾತ್ಮಾ ಗಾಂಧಿಯವರನ್ನು ಭೇಟಿಯಾಗಿದ್ದು ಶ್ರೀಗಳು ಹರಿಜನೋದ್ವಾರದ ಬಗ್ಗೆ ಬಸವಣ್ಣ ತೋರಿದ ದಿಟ್ಟತನ, ಅನುಸರಿಸಿದ ಮಾರ್ಗವನ್ನು ನಿರೂಪಿಸಿದ್ದುಂಟು. ಕುಲ, ಜಾತಿ, ಮತಭೇದವೆಣಿಸದೆ ಅರ್ಹರೆಂದು ತೋರಿದ ವಿದ್ಯಾರ್ಥಿಗಳಿಗೆ ಉದಾರ ಆಶ್ರಯ ನೀಡಿದ ಅಸಾಧಾರಣ ಪುರುಷ. ಶ್ರೀಗಳ ಹೆಸರಿನಲ್ಲಿ ನಾಡಿನುದ್ದಗಲಕ್ಕೂ ವಿದ್ಯಾ ಕೇಂದ್ರಗಳು, ಪ್ರಸಾದ ನಿಲಯಗಳು, ಗ್ರಂಥಾಲಯಗಳು, ವೈದ್ಯ ವಿದ್ಯಾಲಯಗಳು ಬಹಳವಾಗಿರುವುದೇ ಮೇಲಿನ ಮಾತಿ ಸಾಕ್ಷಿಯಾಗಿದೆ. ಕರ್ನಾಟಕದ ಏಕೀಕರಣಕ್ಕೆ ಶ್ರಮಿಸಿದ ಜೀವ. ನಾಡುನುಡಿ, ಸಂಸ್ಕೃತಿ, ಸಂಪ್ರದಾಯಗಳ ಜೊತೆಗೆ ಹೊಸ ಆಲೋಚನೆಗಳಿಗೆ ಸ್ಪಂದಿಸಿದ ಮಹಾಸ್ವಾಮಿಗಳ ನೆನಪು ಬೃಹನ್ಮಠವಿರುವವರೆಗೂ ಚಿರಸ್ಥಾಯಿಯಾಗಿ ಉಳಿಯುವಂತದ್ದು.

ಅಂತೆಯೇ ಚಿತ್ರದುರ್ಗದ ಸಮೀಪದಲ್ಲಿ ಇರುವ ಪುಟ್ಟ ಗ್ರಾಮ ಒಂದರಲ್ಲಿ ಉದಯಿಸಿ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯರು ಸಿರಿಗೆರೆ ಗ್ರಾಮದಲ್ಲಿ ಜ್ಞಾನದ ಸಿರಿ ಆಧಾತ್ಮದ ಗೆರೆಯನ್ನೇ ಮೂಡಿಸಿದ ಮಹಂತ. ವೈಚಾರಿಕವಾಗಿ, ವೈಜ್ಞಾನಿಕವಾಗಿ ಆಲೋಚಿಸ ಶ್ರೀಗಳು ಜಾತಿ, ಮತ, ಮೌಢ್ಯ, ಕಂದಾಚಾರಗಳ ಬಗ್ಗೆ ಖಂಡಿಸಿ ಭಾಷಣ ಬಿಗಿದವರಲ್ಲ. ನುಡಿದಂತೆ ನಡೆದ ಧಾರ್ಮಿಕ ದಿಗ್ಗಜ ‘ಆನೆ ನಡೆದದ್ದೇ ದಾರಿ’ ಎಂಬ ಮಾತಿಗೆ ಪ್ರತೀಕ, ಬಸವಣ್ಣನ ತತ್ವಾದರ್ಶಗಳನ್ನು ಮಠದಲ್ಲಿ ಅಳವಡಿಸಿ ಭಕ್ತ ಸಮೂಹದಲ್ಲಿ ಹಂಚಿದವರು. ಇನ್ನೂರಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ವಿದ್ಯಾದಾಹಿ. ಮಹಾ ಮನೆಯನ್ನು ಕಟ್ಟಿ ಎಲ್ಲಾ ಜಾತಿಯ ವಿದ್ಯಾರ್ಥಿಗಳು ಒಟ್ಟಿಗೆ ಕೂತು ಪಂಕ್ತಿ ಭೋಜನ ಮಾಡುವ ಏರ್ಪಾಡು ಮಾಡಿದ ಸಹೃದಯಿ. ಗುರುಗಳ ಮನಸ್ಸಿಗೆ ಸಮಾಧಾನವೆಂಬುದಿಲ್ಲ. ಕಡೆಗೆ ಹರಿಜನರನ್ನು ಅಡಿಗೆಗೆ ನೇಮಿಸಿಕೊಂಡಿದ್ದುಂಟು. ಹಳ್ಳಿಗರ ಮನೆಗೆ ಹೋಗಿ ಉಂಡು ಅದನ್ನೇ ಶಿವಪ್ರಸಾದವೆಂದು ಹೇಳಿ ಭಕ್ತರ ಮನಗೆದ್ದದಲ್ಲದೆ ಭಕ್ತರು ತಪ್ಪು ಮಾಡಿದಾಗ ಒದ್ದು ಬುದ್ಧಿ ಹೇಳಿದ್ದೂ ಉಂಟು. ಶಿಕ್ಷಣವನ್ನು ಕಡಾಯ ಮಾಡಿದ ಶ್ರೀಗಳು ಸುರೆಯನ್ನು ಸಿರಿಗೆರೆಯಿಂದಾಚೆಗಟ್ಟಿದರು. ಜೊತೆಗೆ ಜಾತಿಸುರೆಯನ್ನೂ ನಿಷೇಧಿಸಿದರು. ಎಲ್ಲರೂ ಒಂದೇ ಮನೆಯವರಂತೆ ಬಾಳುವುದರಲ್ಲಿರುವ ಸುಖವನ್ನು ತೋರಿಸಿಕೊಟ್ಟರು. ಸಂಸ್ಥೆಗಳನ್ನು ಕಟ್ಟುವಾಗ ಕೈ ಕೆಸರು ಮಾಡಿಕೊಂಡು ಗಾರೆ ಕೆಲಸದವರೊಂದಿಗೆ ಮಣ್ಣು ಹೊತ್ತು ‘ಕಾಯಕವೇ ಕೈಲಾಸ’ವೆಂಬ ಮಾತಿಗೆ ನಿದರ್ಶನವಾದ ಗುರುಗಳನ್ನು ನೋಡುವ ಹಳ್ಳಿಗರೂ ಕೈಗೆ ಕೈ ಹೆಗಲಿಗೆ ಹೆಗಲು ಕೊಟ್ಟು ದುಡಿದದ್ದು ಇಂದು ಇತಿಹಾಸ, ‘ಇವನಾರವ ಇವನಾರವ ಇವನಾರವನೆನ್ನದೆ ಇವ ನಮ್ಮವ ಇವನಮ್ಮವ’ ಎಂದು ಸರ್ವರನ್ನೂ ತಮ್ಮೆಡೆಗೆ ಬರಮಾಡಿಕೊಂಡಿದ್ದರ ಫಲವೆಂಬಂತೆ ಮೂಲೆಯಲ್ಲಿನ ಕುಗ್ರಾಮದಲ್ಲಿನ ಮಠ, ಬೃಹನ್ಮಠವಾಯಿತು. ಮತ್ತೊಂದು! ವಿಶೇಷವೆಂದರೆ ಅವರಿಗೆ ಹಳ್ಳಿಯಿಂದ ದಿಲ್ಲಿವರೆಗೆ ರಾಜಕೀಯ ಧುರೀಣರ ಒಡನಾಟವಿತ್ತು. ಶ್ರೀಗಳು ತೆಗೆದುಕೊಳ್ಳುವ ತೀರ್ಮಾನಗಳಿಗೆ ಬಹುಮಹತ್ವ ಬಂದ ಅನೇಕ ಪ್ರಸಂಗಗಳುಂಟು. ಧರ್ಮದ ಬುನಾದಿಯ ಮೇಲೆ ರಾಜಕೀಯ ನಿಲ್ಲಬೇಕೆನ್ನುತ್ತಿದ್ದುದು ಶ್ರೀಗಳವರ ಅಭಿಮತವಾಗಿತ್ತು. ತರಳಬಾಳು ಪೀಠವನ್ನು ಅತ್ಯಂತ ವಿದ್ಯಾವಂತ ಯುವ ಸ್ವಾಮೀಜಿಗೆ ವಹಿಸಬೇಕೆಂಬ ಹಠ, ತಾವು ಹೆಚ್ಚು ಓದಿದ್ದರಿಂದ ಎಲ್ಲರಿಗೂ ವಿದ್ಯಾದಾನ ಮಾಡುವ ಕೈಂಕರ್ಯವನ್ನು ಕೈಗೊಂಡ ಗುರುಗಳು ಶ್ರೀ ಶಿವಮೂರ್ತಿ ಶಿವಾಚಾರ್ಯರನ್ನು ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶಕ್ಕೆ ಕಳುಹಿಸಿದ ವಿಚಾರವಂತ. ಮಾದಿಗ ಮರುಳಸಿದ್ದನು ಪೀಠದ ಮೂಲ ಪುರುಷನೆಂದು ಹೆಮ್ಮೆ ಪಡುತ್ತಿದ್ದ ಶ್ರೀಗಳು ಆ ಬಗ್ಗೆ ಸಂಶೋಧಿಸಿ ಹಲವು ಗ್ರಂಥಗಳನ್ನು ರಚಿಸಿ ದಾಖಲಿಸಿದ್ದಲ್ಲದೆ ಪ್ರಾಯಶಃ ಜಾತಿಮತಗಳ ವಿರುದ್ಧ ಬಂಡಾಯವೆದ್ದ ಮೊದಲ ಸನ್ಯಾಸಿ ಕೂಡ.

ಮಲ್ಲಾಡಿಹಳ್ಳಿ ಶ್ರೀಗಳೆಂದೇ ಪ್ರಖ್ಯಾತರಾದ ಶ್ರೀ ರಾಘವೇಂದ್ರ ಗುರೂಜಿ ಕಾವಿ ತೊಡದ ಮತ್ತೊಬ್ಬ ಸನ್ಯಾಸಿ. ಮಠವನ್ನು ಕಟ್ಟದೆ, ಕಾವಿ ಹಾಕದೆ ಸಮಾಜ ಸೇವೆಗೆಂದೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅನಾಥ ಸೇವಾಶ್ರಮವನ್ನು ಹೊಳಲ್ಕೆರೆ ತಾಲ್ಲೂಕಿನ ಸಮೀಪವೆ ಸೃಷ್ಟಿಸಿ ಗ್ರಾಮ ಸೇವೆಗೆ ಟೊಂಕ ಕಟ್ಟಿನಿಂತ ಧೀಮಂತ. ಗುರೂಜಿ ಜೋಳಿಗೆ ಹಿಡಿದು ಹೊರಟರೆ ನೂರಾರು ನೀಡುವ ಕೈಗಳು ನಾಮುಂದು ತಾಮುಂದು ಎಂದು ಪೈಪೋಟಿ ನಡೆಸುತ್ತಿದ್ದವೆಂಬುದರ ಹಿನ್ನೆಲೆಯಲ್ಲಿಯೇ ಗುರೂಜಿಗಳ ನಿಷ್ಟೆ – ಪ್ರಾಮಾಣಿಕತೆ ಸೇವಾಭಾವವನ್ನು ಅರಿಯಬಹುದು. ಸಂಜೀವಿನಿ ತಮ್ಮನ್ನು ತಾವೇ ‘ತಿರುಕ’ನೆಂದೇ ಕರೆದುಕೊಂಡು ಆ ಹೆಸರಲ್ಲಿಯೇ ಅನೇಕ ಗ್ರಂಥಗಳನ್ನು ಬರೆದ ಈ ಪುಣ್ಯಜೀವಿ, ರೋಗಿಗಳ ಪಾಲಿನ ಸಂಜೀವಿನಿ ಕೂಡ. ಆಶ್ರಮದಲ್ಲಿ ಯೋಗಾಭ್ಯಾಸವನ್ನು ಆರಂಭಿಸಿದ್ದಲ್ಲದೆ ಆಯುರ್ವೇದ ಚಿಕಿತ್ಸೆಗೆ ಆದ್ಯತೆ ಕೊಟ್ಟು ನೊಂದ ಅನಾಥರು, ವೃದ್ದ ರೋಗಿಗಳ ಸೇವೆಗೆಂದೇ ಜೀವ ಸವೆಸಿದ ಧನ್ವಂತರಿ. ಯೋಗದಿಂದ ಮನುಷ್ಯ ಆರೋಗ್ಯ, ಆಯಸ್ಸನ್ನು ವೃದ್ಧಿಸಿಕೊಳ್ಳ ಬಹುದೆಂದು ಸಾಧಿಸಿ ತೋರಿದ ಶತಾಯುಷಿ. ಸರ್ಕಾರದಿಂದ ಕೊಡ ಮಾಡಿದ ಹಲವು ಪ್ರಶಸ್ತಿಗಳಿಗೆ ಕೈ‌ಒಡ್ಡದೆ ಸೇವಾಶ್ರಮದ ಅಭಿವೃದ್ಧಿಗಾಗಿ ಎಗ್ಗಿಲ್ಲದೆ ಮಹಿಳೆಯರು ಅಬಾಲವೃದ್ಧರಾದಿಯಾಗಿ ಎಲ್ಲರ ಎದುರೂ ಕೈ, ಒಡ್ಡಿದ ಈ ತಿರುಕ ಮಲಾಡಿಹಳ್ಳಿಯನ್ನು ಶಿಕ್ಷಣ ಕಾಶಿಯನಾಗಿ ಪರಿವರ್ತಿಸಿದ ಧನಿಕ. ಸರಳ ಜೀವನ, ಸರಳ ಉಡುಪು ಜನತೆಯ ಸೇವೆಯೇ ತನ್ನ ಗುರಿ ಎಂದು ನಂಬಿ ದುಡಿದ ನುಡಿದಂತೆ ನಡೆದ ಸೋಗಿಲ್ಲದ ಸನ್ಯಾಸಿ.

ರಾಜಕೀಯ ತಾರೆಗಳು
ಚಿತ್ರದುರ್ಗ ನೆನಪಿಗೆ ಬಂದಾಗ ತಟ್ಟನೆ ಸ್ಟರಣೆಗೆ ಬರುವ ಮತ್ತೊಂದು ಹಿರಿಯ ಜೀವ ರಾಷ್ಟ್ರ ನಾಯಕ ನಿಜಲಿಂಗಪ್ಪಾಜಿ. ಸ್ವಾತಂತ್ರ್ಯ ಚಳವಳಿಯಲ್ಲಿ ಹೋರಾಡಿ ಜೈಲು ಕಂಡ ಈ ಹೋರಾಟಗಾರ ಕರ್ನಾಟಕದ ಏಕೀಕರಣದ ರೂವಾರಿ. ಬಡತನದಲ್ಲಿ ಹುಟ್ಟಿ ಬೆಳೆದು ವಕೀಲಿ ವೃತ್ತಿಯಿಂದ ಜೀವನವನಾರಂಭಿಸಿದ ನಿಜಲಿಂಗಪ್ಪ ದುರ್ಗದಿಂದ ದಿಲ್ಲಿಯ ತನಕ ಬೆಳೆದು ನಿಂತ ತ್ರಿವಿಕ್ರಮ. ಕರ್ನಾಟಕ ಕಂಡ ಅತ್ಯಂತ ದಕ್ಷ ಪ್ರಾಮಾಣಿಕ ಮುಖ್ಯಮಂತ್ರಿ ಕೂಡ. ಅವರದು ವಿಸ್ತಾರವಾದ ಅನುಭವ. ಗಾಂಧಿ ಕಂಡ ಇಂಡಿಯಾವನ್ನು ನೆಹರು ನಿರ್ಮಿಸಲಿಲ್ಲವೆನ್ನುತ್ತಾರೆ. ಆತ ಪ್ರಾಮಾಣಿಕನೇನೋ ನಿಜ. ಆದರೆ ದೇಶ ಆಳೋ ಅರ್ಹತೆ ಅನುಭವ ಆತನಲ್ಲಿರಲಿಲ್ಲವೆಂದು ಇಂದಿಗೂ ಪರಿತಪಿಸುವ ನಿಜಲಿಂಗಪ್ಪ, ನೆಹರುವಿನಿಂದಾಗಿ ನಮ್ಮದು ಎರಡು ಇ೦ಡಿಯಾ ಆಗೋಯ್ತು. ಒಂದು ಇಂಡಸ್ಟ್ರಿಯಲ್ ಇಂಡಿಯ ಮತ್ತೊಂದು ವಿಲೇಜರ್ಸ್‌ ಇಂಡಿಯ. ಇದರಿಂದಾಗಿ ಶೇಕಡ ೭೫ರಷ್ಟಿರುವ ಗ್ರಾಮೀಣ ಜನತೆ ಅರೆಹೊಟ್ಟೆ, ಅನಾರೋಗ್ಯ, ನಿರುದ್ಯೋಗದಿಂದ ನರಳುವಂತಾಯಿತೆಂದು ನಿಟ್ಟುಸಿರ್ಗರೆಯುತ್ತಾರೆ. ನೆಹರೂಗೆ ಬಡತನವಾಗಲಿ ಹಳ್ಳಿ ಜೀವನವಾಗಲಿ ತಿಳಿಯದ್ದರಿಂದ ದೇಶ ದಾರಿ ತಪ್ಪಿತು. ಗಾಂಧೀಜಿ ಇಂಥವರನ್ನು ಮೇಲೆತ್ತಿದರು. ಅರ್ಹತೆ ಇರೋ ವಲ್ಲಭಬಾಯಿ ಪಟೇಲರನ್ನು ಕೈ ಬಿಟ್ಟರು. ಪಟೇಲರಿಗೆ ಆಡಳಿತ ವಹಿಸಿದ್ದರೆ ದೇಶದ ಚಿತ್ರಣವೇ ಬೇರೆ ಆಗೋದು ಎಂಬ ನಿಷ್ಟುರತೆ ಈಗಲೂ ಅವರಲ್ಲಿದೆ. ಇಂದಿರಾ ಗಾಂಧಿ ವಿಷಯ ಬಂದಾಗ ಆಕೆ ಸಮರ್ಥಳೇನೋ ಸರಿ ಆದರೆ ಮಹಾಸ್ವಾರ್ಥಿ ಹೆಂಗಸು, ಅಹಂಕಾರಿ, ಆಕೆಯಿಂದಲೇ ಕಾಂಗ್ರೆಸ್ ಇಬ್ಭಾಗ ಆಯ್ತು. ಮನನೊಂದು ವಾಪಸ್ ಬಂದೆ ಎನ್ನುವ ಅವರು ಮತ್ತೆಂದೂ ರಾಜಕೀಯದತ್ತ ತಿರುಗಿ ನೋಡದೆ ಯಾವ ಅಧಿಕಾರಗಳಿಗೂ, ಆಮಿಷಗಳಿಗೂ ಬಲಿಯಾಗದೆ ದುರ್ಗದಲ್ಲೇ ನೆಲೆನಿಂತ ಹಠವಾದಿ. ತೊಂಬತ್ತೆಂಟರ ಹರೆಯದಲ್ಲೂ ದೇಶದ ಭವಿಷ್ಯದ ಬಗ್ಗೆ ಆಸಕ್ತಿಯಿಂದ ಕರಾರುವಾಕ್ಕಾಗಿ ಮಾತನಾಡುವ ಧೀಮಂತ ರಾಜಕಾರಣಿ. ಅವರ ನೆನಪಿನ ಗಣಿ ಆಳವಾದದ್ದು. ದುರ್ಗದಲ್ಲೇ ಇದ್ದರೂ ರಾಷ್ಟ್ರ ನಾಯಕರೆಂಬ ಗೌರವಕ್ಕೆ ಪಾತ್ರರಾದ ರಾಜಕೀಯ ಧ್ರುವತಾರೆ.

ದುರ್ಗದ ರಾಜಕೀಯ ಭೂಪಟದಲ್ಲಿ ಅನೇಕರು ಮಂತ್ರಿಗಳಾಗಿ ಹೋಗಿದ್ದಾರೆ. ದುರ್ಗ ಎಂದಿಗೂ ಮಂತ್ರಿಯ ಸ್ಥಾನದಿಂದ ವಂಚಿತವಾದದ್ದಿಲ್ಲ. ಇಷ್ಟಾದರೂ ದುರ್ಗ ಮಾತ್ರ ಎಂದಿಗೂ ಬರಪೀಡಿತ ಪ್ರದೇಶವೆ. ಅಪ್ಪರ್ ಭದ್ರಾ ಚಾನಲ್ ತರುತ್ತೇವೆಂದು ಪ್ರತಿ ರಾಜಕಾರಣಿಯೂ ಆಶ್ವಾಸನೆ ನೀಡುತ್ತ ಪಟ್ಟ ಪದವಿ ಗಿಟ್ಟಿಸಿ ತಾವು ಬಿಸಿಲೇರಿ ಕುಡಿಯುತ್ತ ಬಿಸಿಲಲ್ಲಿ ನಿಂತ ರೈತರ ಗಂಟಲಿಗೆ ಹನಿ ನೀರೂ ಹರಿಸಿದ್ದಿಲ್ಲ. ಇಂಥವರ ನಡುವೆ ದುರ್ಗದ ಅಭಿವೃದ್ಧಿಗಾಗಿ ಶ್ರಮಿಸಿದ ಅಪರೂಪದ ರಾಜಕಾರಣಿ ಜಾಫರ್ ಷರೀಫ್, ಕಾಂಗ್ರೆಸ್ ಆಫೀಸಿನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಬಡಸಾಬಿ ಕಾಂಗ್ರೆಸ್ ಇಬ್ಭಾಗವಾದಾಗ ಇಂದಿರಾ ಗಾಂಧಿ ಕೃಪೆಯಿಂದಾಗಿ ತೆಂಗಿನ ಮರದಂತೆ ಬೆಳೆದು ಬಡಾಸಾಬಿಯಾದವರು. ಬರಿ ಮಾತಿನಲ್ಲೇ ರೈಲು ಬಿಡುವವರಿರುವ ದೇಶದಲ್ಲಿ ರೈಲ್ವೆ ಇಲಾಖೆಗೆ ಚಾಲನೆ ಕೊಟ್ಟ ಛಲಗಾರ, ಚಿತ್ರದುರ್ಗದವರೂ ರೈಲು ಕಾಣುವಂತೆ ಮಾಡಿದ ಈತ, ಜಿಲ್ಲೆಯ ವ್ಯಾಪಾರ, ವ್ಯವಹಾರಗಳಿಗೆ ಇಂಬು ದೊರಕಿಸಿಕೊಟ್ಟು ಅನೇಕ ರೈಲು ಮಾರ್ಗಗಳನ್ನು ದುರ್ಗಕ್ಕಷ್ಟೇ ಅಲ್ಲ ಕರ್ನಾಟಕದ ಉದ್ದಗಲಕ್ಕೂ ಹರಡಿದರಲ್ಲದೆ ಭಾರತದ ಮಟ್ಟದಲ್ಲಿ ರೈಲ್ವೆ ಇಲಾಖೆಯಲ್ಲಿ ಜಾಗೃತಿ ಮೂಡಿಸಿದ ಕಸುಬುದಾರ. ಎಲ್ಲರ ಬಗ್ಗೆ ಇರುವಂತೆ ಇವರ ಬಗ್ಗೆಯೂ ಭ್ರಷ್ಟಾಚಾರದ ಆಪಾದನೆಗಳಿದ್ದರೂ ಭಾರತ ಮತ್ತು ಕರ್ನಾಟಕದ ಅಭಿವೃದ್ಧಿಗಾಗಿ ದುಡಿದ ಜನಾಬ್ ದುರ್ಗದ ಹೆಮ್ಮೆಯ ಪುತ್ರರೆಂಬುದು ಗರ್ವ್ ಕಿ ಬಾತ್ ಹೈ, ಈ ನವರತ್ನಗಳು ನಮ್ಮ ಪ್ರಾತಃ ಸ್ವರಣೀಯರೆಂಬುದರಲ್ಲಿ ಉತ್ಪ್ರೇಕ್ಷೆಯೇನಿಲ್ಲ.

ಪ್ರಾತಃ ಸ್ಮರಣೀಯರೆಂಬ ಮಾತು ಬಂದಾಗ ನೂರಾರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ದಿವಂಗತರಾದ ದಿಟ್ಟ ಹೋರಾಟಗಾರ ಭೀಮಪ್ಪ ನಾಯಕ ಬ್ರಿಟಿಷರ ವಿರುದ್ಧ ಸೆಣಸಿದ ದಿ|| ಪೈಲ್ವಾನ್‌ ನಂಜಪ್ಪ ಹಾಗೆಯೇ ಇಂದಿಗೂ ಕಲಾ ಪ್ರಪಂಚದಲ್ಲಿ ಮಿನುಗುತ್ತಿರುವ ಹಿರಿಯ ಕಲಾಕಾರ ಪಿ.ಆರ್. ತಿಪೇಪ್ಪೇಸಾಮಿ ಕೂಡ ಸ್ವರಣಾರ್ಹರು.
*****