ಸ್ವಾಗತಿಸಿದೆ ಋತುರಾಜನನು
ರಾಗನಿರತ ಲೋಕ

ಕೋಗಿಲೆಗಳ ಸವಿಗೊರಲಿನಲಿ
ರಾಗಿಣಿಯರ ನಗೆ ಹೊರಳಿನಲಿ
ತೂಗಿ ತಲೆಯೊಲೆವ ತೆನೆಯಲಿ-ಹಕ್ಕಿಯ
ಮೋದಭರಿತ ಸವಿಗಾನದಲಿ

ದೂರದ ಇನಿಯಳ ಕನವರಿಸಿ
ಮಾತು ಮಾತಿಗೂ ಪರಿತಪಿಸಿ
ಕೊರಗುವ ವಿರಹಿಯ ತಾಪದಲಿ
ಪ್ರೀತಿಗೆ ಎತ್ತಿದ ಧೂಪದಲಿ

ಬೇಸಿಗೆ ಇರುಳಿನ ಗಾಳಿಯಲಿ
ಹಾಸಿದ ತಿಂಗಳ ಬೆಳಕಿನಲಿ
ಕೂತು ಕಥೆಗೆ ಗೋಗರೆವ ಚಿಣ್ಣರನು
ತಾತ ನಲಿಯಿಸುವ ಕಥೆಗಳಲಿ
*****