ನಿನ್ನೆ ರಾತ್ರಿ ಮಳೆ ಬಂದಿತ್ತು.
ಗಿಡ ಮರ ನೆಲ ಅಂಗಳ
ಎಲ್ಲವೂ ಮೈ ತೊಳೆದಂತೆ ಶುಭ್ರ
ಇರುವೆಗಳ ಗೂಡು ಮಾಯವಾಗಿತ್ತು
ಮತ್ತೆ ಪತ್ರಿಕೆಯಲಿ ಸುದ್ದಿ ಅಚ್ಚಾಗಿತ್ತು.
ರಾತ್ರಿ ಮಳೆ ಬಂದಿತ್ತಯ
ಹೊಸ್ತಿಲು ಸುಮ್ಮನೆ ಮೈ ಚಾಚಿ ಮಲಗಿದರೆ
ಕಿಟಕಿಯ ಫಡಕುಗಳು ಗಾಳಿಗೆ ಹಾರಾಡುತ್ತಿದ್ದವು
ಕರೆಂಟು ಹೋಗಿ ಗಂವ್ ಎನ್ನುವ ಕತ್ತಲು
ಮಿಂಚು ಫಳಪಳಿಸಿ ಮನೆ ಕಣ್ಣೊಡೆಯಿತು.
ರಾತ್ರಿ ಮಳೆ ಬಂದಿತ್ತು.
ನಾನೆಲ್ಲಿರುವೆ ಎಂಬ ಭ್ರಮೆ ಒಳಗೆ ತ್ಯುಯ್ದ
ಮೈ ಮುರಿದು ಮುದುಡಿದ ಜೀವ
ಒಂಥರಾ ಕಳವಳದಲಿ ಮುಲುಕಾಡಿತು
ಒಳಗೊಳಗೆ ಹೆಜ್ಜೆಯ ಗುರುತುಗಳು ಮೂಡಿದ್ದವು
ರಾತ್ರಿ ಮಳೆ ಬಂದಿತ್ತು
ಆದರೂ ಬೆಚ್ಚಗಿನ ಕಾವು ಒಳಗೆ
ಖಚಿತಗೊಳಿಸಲಿಲ್ಲ ಭೂಮಿಯ ತಣ್ಣನೆಯ ಸ್ಪರ್ಶ
ಹಕ್ಕಿಗಳು ಮುದುಡಿದವು ರೆಕ್ಕೆ ಒದ್ದೆಮಾಡುತ್ತ
ಬದುಕಿನ ಸರಳದಾರಿ ಮಾತ್ರ ತೊಳೆದವು
ರಾತ್ರಿ ಮಳೆ ಬಂದಿತ್ತು
ಛತ್ತು ಭೂಮಿ ಅಂಗಳ ಗಿಡಮರಕೆ
ಹನಿ ಹನಿ ಸಿಹಿ ಸಿಂಚನ ಉಸುರಿತ್ತು
ಯಾರ ನೆನಪಲಿ ಯಾವ ಕನವರಿಕೆಗಳೋ
ಅವನಿರುವಲ್ಲಿಗೆ ಮತ್ತೆ ಮನಸ್ಸು ಚಲಿಸಿತು.
*****