ಕೋಗಿಲೆಯೊಲವನು ಉಲಿದಾಗ,
ಪೂರ್ವದ ಗಾಳಿಯು ಸುಳಿದಾಗ,
ಪುಲಕದಿ ಮನ ಮೈ ಮರೆತಾಗ,
ಗೆಳತಿ, ನೆನಪೇತಕೆ ಬರುವುದೊ ನಾನರಿಯೆ!

ಗುಲಾಬಿ ಹೂವುಗಳರಳಿ, ತಿರೆ
ಮಲಾಮೆಯಿಂದಲಿ ಮೆರೆಯುತಿರೆ,
ಬಾಳಿನ ಕಂಬನಿ ಮರೆಯುತಿರೆ,
ಗೆಳತಿ, ನೆನಪೇತಕೆ ಬರುವುದೊ ನಾನರಿಯೆ!

ಸಂಜೆಯ ಬಂಗಾರದ ಗುಡಿಯಲ್ಲಿ,
ಇರುಳಿನ ಕಾಳಿಯ ಪೂಜಿಸುವಲ್ಲಿ,
ಮಂಜಿನ ಹೂಮಳೆ ಕರೆದಿರುವರಲ್ಲಿ,
ಗೆಳತಿ, ನೆನಪೇತಕೆ ಬರುವುದೊ ನಾನರಿಯೆ!

ಬಾನಲಿ ಬೆಳುದಿಂಗಳ ಕುಡುಗೋಲು
ತಂಪು ಸಿಡಿಲಿನೊಲು ಸಾಗಿರಲು,
ಹೃದಯ ಎಲ್ಲಿಯೋ ದೂರ ಹಾರಿರಲು,
ಗೆಳತಿ, ನೆನಪೇತಕ ಬರುವುದೋ ನಾನರಿಯೆ!

ಅರೆನಿದ್ರೆಯ ಮಡಿಲಲಿ ಎಚ್ಚರಿಕೆ
ಉಯ್ಯಾಲೆಯನಾಡಿರೆ, ಎಳ ಗರಿಕೆ
ತಾರೆಯ ಸಂಗಕೆ ಕಳುಹಿರೆ ಕೋರಿಕೆ,
ಗೆಳತಿ, ನೆನಪೇತಕೆ ಬರುವುದೊ ನಾನರಿಯೆ!

ಬಿಳಿ ಮೋಡದ ನಡುವಿನ ನೀಲದಲಿ
ಸುಳಿ ಮಿಂಚಿನ ವೇಗದ ತೀರದಲಿ
ಬಳಿ ಸಾರುವ ಇರುಳಿನ ರಾಗದಲಿ
ಗೆಳತಿ, ನೆನಪೇತಕೆ ಬರುವುದೊ ನಾನರಿಯೆ!
*****