ಹರ್ಷವರ್ಧನ, ಚಾಲುಕ್ಯ, ಅಶೋಕ
ಮೌರ್ಯ…..
ಏರ್‌ಫ್ರಾನ್ಸ್, ಬ್ರಿಟೀಷ್ ಏರ್‌ವೇಸ್, ಸ್ವಿಸ್‌ಏರ್
ರಾಯಲ್‌ಡಚ್, ಸ್ಕೆಂಡಿನೇವಿಯಾ, ಕೆಥೆಫೆಸಿಫಿಕ್…..
ಒಂದಕ್ಕಿಂತ ಒಂದು ಚೆಂದದ
ಅಂದದ ಹೆಸರುಗಳು ಈ ರಾಜಹಂಸಗಳು
ನನ್ನ ಪಯಣದ ಜಂಬೋ ಸವಾರಿಗಳು.
ಕಾರ್ಪೇಟ್ ಮೆಟ್ಟಲೇರಿ ಒಳಹೊಕ್ಕರೆ
ಥೇಟ್ ರಾಜನ ಒಡ್ಡೋಲಗ
ಮೆತ್ತನೆಯ ನೆಲಹಾಸುಗೆ ಐಶಾರಾಮಿ ಖುರ್ಚಿಗಳು
ಇಂಪಾಗಿ ತೇಲಿಬರುವ ವಾದ್ಯ ಸಂಗೀತ
ನಡು ನಡುವೆ ಉಲಿಯುವ ಕನ್ನಿಕೆಯರು.
ಲೋಹದ ಹಕ್ಕಿಗಳಾದರೇನಂತೆ
ಒಳಗೆ ಜೀವ ಪ್ರಪಂಚದ ಲೋಕ
ಎಷ್ಟೊಂದು ಹೂವು ಹಸಿರು ಮೊಗ್ಗುಗಳು
ದೇಶ ಭಾಷೆ ಬಣ್ಣದವರ ಸಂಗಮ
ಇದು ಹೂದಾನಿ.
ಹಗಲುರಾತ್ರಿ ನಿಬ್ಬಣ ಹೊರಟಂತೆ
ಜಂಬೋ ತುಂಬ ಇಂಬಾಗಿ ಕೂತ ಪಯಣಿಗರು
ಟೀ, ಕಾಫಿ, ಊಟ, ನಿದ್ದೆ, ಹರಟೆ
ಸಿನೇಮ, ಸುತ್ತಾಟ, ಪರಿಚಯ
ಕೂಲಿಂಗ್‌ಗ್ಲಾಸ್ ಮುದಿಯರ ವಾರೇನೋಟ
ಗುಪ್ತಗಾಮಿನಿ ಸಖಿಯರ ಚಲ್ಲಾಟ
ಹೊಸಬರ ತವಕ ತಲ್ಲಣ
ಪಯಣದ ಆಯಾಸದಲ್ಲೂ ಕುಗ್ಗದೆ
ನಯನ ಮನೋಹರದ ಒಡ್ಡೋಲಗ
ಆಕಾಶದಂಗಳದೊಳು ಜಂಬೋ ಹಂಸಗಳು.
*****