ಸಾವಿರ-ಎರಡು ಸಾವಿರ-ಮೂರು ಸಾವಿರ
ಆಕಾಶ ಮೆಟ್ಟಿಲುಗಳು
ಇನ್ನೂ ಇನ್ನೂ ಎತ್ತರೆತ್ತರಕೇರುತಿದೆ
ನನ್ನ ತೂಗುಯ್ಯಾಲೆ
ನೋಡು ನೋಡುತ್ತಿದ್ದಂತೆಯೇ ಐದು ಸಾವಿರ
ಅಡಿಗಳಿಗೂ ಮೇಲೆ
ತೂಗುತಿದೆ ಉಯ್ಯಾಲೆ ಗಂಧರ್ವ ಲೋಕದಲಿ
ಒಮ್ಮೊಮ್ಮೆ ಗಾಳಿ ಹೆಚ್ಚು ಕುಡಿದು
ಮತ್ತೊಮ್ಮೆ ಸೂರ್ಯನ ಕಿರಣಗಳಿಂದ
ಕಣ್ಣು ಕುಕ್ಕಿಸಿಕೊಂಡು ತೂಗಾಡುತ್ತದೆ
ಜೋಲಾಡುತ್ತದೆ ನಮ್ಮನ್ನೂ
ಕುಡುಕರನ್ನಾಗಿಸಿಬಿಡುತ್ತದೆ
ಸಧ್ಯ ಹಾದಿಗಡ್ಡವಾಗಿ ಯಾರಿಲ್ಲ ಇಲ್ಲಿ
ಉದ್ದಾನ ಉದ್ದ ರಸ್ತೆ ಅಡ್ಡಾನ ಅಗಲ ರಸ್ತೆ
ಉಬ್ಬು ತಗ್ಗಿನ ಭಯವಿಲ್ಲ, ಸಿಗ್ನಲ್ ಹಾವಳಿ ಇಲ್ಲ
ಮಜವೋ ಮಜ, ಒಮ್ಮೊಮ್ಮೆ ಎದೆ ಢವ ಢವ
ಅಂದ ಮಾತ್ರಕೆ ಹಾದಿ ತಪ್ಪಲು ಸಾಧ್ಯವೇ ಇಲ್ಲ
ಇದು ನಿಯತ್ತಿನ ಉಯ್ಯಾಲೆ.
*****


















