ಓ ಸಜ್ಜನ
ಹೋಗು ಒಳಗೆ ಇಕ್ಕು ಕದ
ಬಿಚ್ಚು ಪರೆ ಮುಚ್ಚು ಮರೆ
ಕಳಚು ಮುಖವಾಡ ಕಾಚ
ಮಾಡು ಮಜ್ಜನ
ಹಾಡು ಗೀತೆ. ಭಗವದ್ಗೀತೆ?
ಛೇ! ಮಹಾ ಬಾತ್ ರೂಮ್ ಗೀತೆ.
ಹಾಕಿಕೋ ಮಂಡೆ ಮೇಲೆ
ಹಂಡೆ ಹಂಡೆ ನೀರು
ತೊಳೆದು ಹೋಗಲಿ ಮೈ ಕೆಸರು
ಗೋಡೆಯಲೆ ಇದೆ ಕನ್ನಡಿ
ಹಬೆ ಇದ್ದೀತು ಒರೆಸಿಕೋ.
ಹಾಡು ಗೀತೆ – ಬಾತ್ ರೂಮ್ ಗೀತೆ
ಮಾಡಿಕೋ ದರ್ಶನ
ವಿ – ಸ್ವರೂಪ ದರ್ಶನ
ಏನು ನೋಡುತೀಯ ಕೆಳಗೆ?
ಅದೆ ಬಚ್ಚಲಿನ ಕೆಸರು ರಚ್ಚೆ
ನಾನು ನೀನು ಸೊಂಟದ ಕೆಳಗೆ
ಮಂತ್ರ ಹೇಳಿ ಹರಿಸಿದ ಒಸರು
ನಿಂತಿರಬಹುದು ಇಲ್ಲಿ
ಕ್ಲಿಯೊ ಪಾಟ್ರಾಳದೂ ಬೆವರು
ಮನ್ವಂತರಗಳಿಂದ
ಇದೆ ಹರಿದು ಹರಿದು
ಆಗಿದೆ ಮಹಾಚರಂಡಿ
ಇದೆ ಮರಳಿ ಮರಳಿ
ಮರಳುತಿದೆ ನೈಲ್ ನದಿ
ದಡದ ಮೇಲೆ ಮಹಾಮೌನಿಗಳು
ಮಾಡುತಿದ್ದಾರೆ ಧ್ಯಾನ
ಬೈ ನೈಟ್ ಮೇನಕೆ
ಬಾತ್ ರೂಮಿನ ಕದ ಇಕ್ಕಿ
ಕದ ತೆರೆದಾಗ
ಇವರ ನರಗಳಲ್ಲೂ ಶಾರ್ಟ್ ಸರ್ಕೀಟು
ಶತಮಾನಗಳ ಟಾನಿಕ್ ಶಕ್ತಿ
ಕಟ್ಟೆಯೊಡೆದು
ಫ್ಯೂಸ್ ಆಗುವುದಿಲ್ಲಿ
ಈ ಬಾತ್ ರೂಮಿನಲ್ಲಿ
ಹುಟ್ಟಬಹುದು ಒಮ್ಮೆ
ಶಕುಂತಳೆ
ಮುಗಿಯಲಿಲ್ಲವೋ ನಿನ್ನ ಸ್ನಾನ?
ಏನದು ಏಕೋಧ್ಯಾನ?
ಓಹೋ ಸರಿ. ಅಲ್ಲ ತೂಗಿಹಾಕಿದ ಬ್ರೇಸಿಯರಿ!
ಹರಿಯಲಿ ಮಹಾಪೂರ
ಉಕ್ಕಲಿ ಯಫ್ರೆಟಿಸ್ – ಟೈಗ್ರಿಸ್
ಉರಿಯಲಿ ಗಂಗೆ ಸಿಂಧೂ
ಹೂಂ. ತೆಗೊ ಒಂದಿಷ್ಟು ಲಿಂಗೋದಕ
ಆದೀತು ಇಲ್ಲಿ ಭಗವತೀ ಪೂಜೆಗೆ
ತೆರೆ ಕದ ಬಾ ಹೊರಗೆ
ಆ ಬಚ್ಚಲಿನಿಂದ
ಈ ಬಚ್ಚಲಿಗೆ.
*****