ಅವಳೋ ಆರ್ಭಟಿಸುವ ಸಿಡಿಲು
ಇಳೆಗೆ ಸುರಿವ ಮಳೆನೀರು
ಭೋರ್ಗರೆವ ಕಡಲು

ತಿಳಿನೀಲ ಮುಗಿಲು
ಚಾಚಿದರೆ ಬಾಹುಗಳಿಗೂ ಆಚೆ
ಹತ್ತಿಕ್ಕಿದರೆ ಇಳೆಗೂ ಈಚೆ
ಕಪ್ಪನೆ ಮಿರುಗುವ ತಿಮಿರ
ಕಂಡು ಕಾಣದಿಹ ಅಂತರ
ಮಂಜುಗೆಡ್ಡೆ ಸನಿಹ
ದೂರಾದರೋ ಯಾತನೆಯ ಬೊಡ್ಡೆ
ಅಂದಿಗೂ ಇಂದಿಗೂ
ಎಂದೆಂದಿಗೂ

ಅರ್ಥವಾಗದವಳು
ಯಾರನೂ ಅರ್ಥೈಸಿಕೊಳದವಳು
ಎಲ್ಲಿಯೂ ನಿಲ್ಲದವಳು
ಯಾರಿಗೂ ಸಿಗದವಳು
ಏನಿವಳ ಈ ಪರಿ
ಯಾವುದರ ಹುನ್ನಾರ
ಸಿಕ್ಕಿಯೂ ಸಿಗದವಳು
ಸಿಕ್ಕರೂ ದಕ್ಕದವಳು
ಬಾಳಿಗವಳೇ ಅರ್ಥ
ಆದರೂ ವ್ಯರ್ಥ
ಅವಳೊಂದು ಛಾಯೆ
ಎಲ್ಲರೊಳಗಿನ ಮಾಯೆ
*****