ಅವಳದೇ ಆದ ಆ
ಹಳೆಯ ಪೆಟ್ಟಿಗೆ
ಈಗಲೂ ಇದೆ ಅವಳೊಟ್ಟಿಗೆ
ಪಡಿಯಕ್ಕಿ ಕೆಡವಿ
ಹೊಸಿಲು ತುಳಿದು
ನವಬದುಕಿನೊಳಗೆ
ಅಡಿಯಿರಿಸಿದಾಗಲೇ
ಜೊತೆಯಾಗಿ ಸಖಿಯಾಗಿ
ಬಂಧನವ ಬೆಳೆಸಿತ್ತು
ನವ ವಧುವಿನ ನವಿರು
ಭಾವನೆಗಳ ಗೊಂಚಲಿಗೆ
ಹಸಿಹಸಿ ಕನಸುಗಳ
ಭ್ರಾಮಕ ಜಗತ್ತಿನ
ಬಯಕೆಗಳಿಗೆ ಸ್ಪಂದನ
ಋತುಗಳು ಬದಲಾದಂತೆ
ಮನಗಳೂ ಬದಲಾಗಿ
ಕನಸುಗಳೆಲ್ಲಾ ಒಡೆದು
ನಿರ್ಭಾವ ಜಗತ್ತಿನ
ಕಟು ಸತ್ಯದ
ನೋವಿನ ಆಳ ಅಗಲ
ಅಳೆಯುವ ಹೊತ್ತಿಗೆ
ನೆನಪಾಗಿ ಉಳಿದ
ಬೆಂದು ಕರಕಾದ
ಎಲಬುಗಳ ಚೂರು
ಇವೆ ಮಾಸದಂತೆ
ಜರತಾರಿ ಸೀರೆಗಳ
ನಡುವೆ ಹೊದ್ದು
ಮಲಗಿದ್ದ ಪುಳಕದ
ಮಧುರ ಸ್ಮೃತಿಗಳೆಲ್ಲ
ಬಿಕ್ಕಿ ಬಿಕ್ಕಿ ಅಳಹತ್ತಿದರೂ
ಪೆಟ್ಟಿಗೆಯೊಳಗೆ ಮುಚ್ಚಿ
ಭದ್ರಪಡಿಸಿದ್ದಾಳೆ
ಬೆಳಕು ತಗಲದಂತೆ
*****