ಹುಡುಕುತ್ತಿದ್ದೇನೆ
ನಾನಿನ್ನೂ ಹುಡುಕುತ್ತಿದ್ದೇನೆ!

ಅಂದೆಂದೋ ಹೊಸಹಾದಿ ಸಿಕ್ಕ
ಸಂಭ್ರಮದಲಿ ನಾ
ಧಡಕ್ಕನೆ ಕಿತ್ತು ಹೊತ್ತು ತಂದ
ತಾಯಿಬೇರಿನ ಶೇಷ
ಭೂಮಿಯಾಳದಲ್ಲೇ ಉಳಿದು ಹೋದ
ನಿಶ್ಯೇಷವಲ್ಲದ ಅವಶೇಷ!

ನನ್ನ ಸಶೇಷ ಕನಸುಗಳು
ವಿಶೇಷ ಕಲ್ಪನೆಗಳು
ಶೇಷವಾಗಿಯೇ ಉಳಿದ
ಆಸೆಗಳನೊಳಗೊಂಡ
ಮಣ್ಣಿನಾಳದಲ್ಲೇ ಊರಿಕೊಂಡ
ನಾ ಧಿಮಾಕಿನಿಂದ ಬಿಟ್ಟುಬಂದ
ತಾಯಿಬೇರಿನ ಅವಶೇಷದ
ಆ ಮಿಕ್ಕ ಭಾಗ
ನಾನಿನ್ನೂ ಹುಡುಕುತ್ತಿದ್ದೇನೆ!

ಈಗುಳಿದ ಮೋಟು ತಾಯಿಬೇರಿಗೇ
ಅಸಂಖ್ಯ ಹೊಸರೂಪದ
ಬೇರುಗಳು ಚಿಗುರೊಡೆದರೂ
ಯಾವುವೂ ಆ ನನ್ನ
ಶೇಷ ತಾಯಿಬೇರಾಗಲಿಲ್ಲ
ನಾ ಕಳೆದುಕೊಂಡ
ಎಲ್ಲ ಎಲ್ಲವುಗಳ
ಪ್ರತಿರೂಪವಾಗಲಿಲ್ಲ!

ನಾ ಹೊತ್ತು ತಂದ ತಾಯಿಬೇರಿನ
ಉಳಿದರ್ಧದ ಕನಸು ಕಲ್ಪನೆಗಳೂ
ಉಳಿಯಲಿಲ್ಲ. ಕುಡಿಯೊಡೆಯಲಿಲ್ಲ!
ಮಣ್ಣ ಸಾರ ಹೀರಲು
ಮೊನೆ ಇದ್ದರಲ್ಲವೇ ಉಳಿದುದೆಲ್ಲಾ?

ಪೂರ್ಣ ತಾಯಿಬೇರಿಲ್ಲದ
‘ನಾನು’ ನಾನಾಗದೇ
ಕಳೆದು ಹೋದ ಆ ತಾಯಿಬೇರಿನ
ಅವಶೇಷ ಹುಡುಕುತ್ತಿದ್ದೇನೆ
ಮಣ್ಣಿನಾಳದಲ್ಲೇ ಉಳಿದು ಹೋದ
ನನ್ನತನ ಅರಸುತ್ತಿದ್ದೇನೆ!
*****