ಅದರ ಮಾತಿನ್ನೇಕೆ? ಆದುದಾಗಿಯೆ ಹೋಯ್ತು!
ಬಯಸಿದುದು ದೊರೆತಿಲ್ಲ-ದೊರೆತಿಹುದು ಬೇಕಿಲ್ಲ!
ಆಸೆಗಳೂ ಮೋಸಗಳೂ-ಬಯಕೆ ಬಾಡಿಯೆಹೋಯ್ತು!
ಇದುವೆ ಜೀವನದಾಟ-ಮಂಜು ನಂಜಿನದೆಲ್ಲ!
ನಾಬೆಳೆಸಿ, ನಿನ್ನೊಲವನೊಲಿಸಲಿಕೆ ದಿನದಿನವು
ಹೂಗಳನು ಪೇರಿಸಿದೆ ರಾಸಿಯಲಿ!-ಅದರೆದೆಯ
ಕಂಪಿನಲಿ ಹುಚ್ಚಾಗಿ ಹಾಡುತಿದೆ ಎನ್ನೆದೆಯು
‘ನಿನಗಾಗಿ ನನ್ನೆಲ್ಲ’-ಎನ್ನೊಲವ ಕೊಳ್ಳೆನುತ!
ನೀ ಬಯಸಿದುದೆ ಬೇರೆ! ನನ್ನ ಸಾವನು ಬಯಸಿ
ಹೂಗಳನು ಹೊರಗೆಸೆದೆ-ಅದನಿಂದು ದಾರಿಗರು
ಎತ್ತಿ ಮುಡಿಯುತಲಿಹರು! ನಿನ್ನ ದ್ವೇಷಾಗ್ನಿಯಲಿ
ಬಾಡಿದಾ ಹೂವುಗಳು ಒಲವಿನಲಿ ಅರಳಿಹುವು!
ಇದುವೆ ಬಾಳಿನ ಹುಚ್ಚು-ಇದಕೆ ಮದ್ದೇ ಇಲ್ಲ!
ಅದಕಾಗಿಯೇ ಇಂದು ಮರೆಯುತಿಹೆ ಅದನೆಲ್ಲ!
*****