ತಿಳಿಗೊಳದ ತೀರದಿಹ ತನಿಗಲ್ಲ ಗದುಗೆ-
ಯನೇರಿ ಸರದ ಸುಯ್ಯನೆ ಶೃತಿಯಲ್ಲಿ
ಕೋಕಿಲ, ಶುಕ, ರವಂಗಳ ಹಿಮ್ಮೇಳದಲಿ
ನವಿಲು ನೃತ್ಯಕೆ ತಾಳ ಮೇಳೈಸಿ
ವೀಣಾತರಂಗ ತನ್ಮಯಳೆ ತಾಯೆ
ತರವೇನೆ ನಿನಗೀಪರಿಯು?
ಕನ್ನಡ ತಾಯ ತಾಪತ್ರಯಂಗಳಂ
ಎವೆಯಿಕ್ಕದನುದಿನ ನೋಡಿ ನೋಡಿ
ಸಂಗೀತ ಸಾಗರದೀಜುಬಿದ್ದೇಳುತಿಹಿ.
ದೇವಿ, ಸರಸ್ವತಿದೇವಿ, ವಾಗ್ದೇವಿ,
ಬ್ರಹ್ಮದೇವನರಾಣಿ, ವೀಣಾ ಪಾಣಿ,
ಕೀರ್‍ವಾಣಿ, ಕವಿಶ್ರೇಣಿ ಕಲ್ಯಾಣಿ
ನಿನ್ನ ನಾನನವರತ ಭಜಿಸಲೇಕೆ?
ಸಪ್ತ ಸಾಗರಗಳಭಿಷವಂ ಗೈದು
ಮೂರ್‍ತ ಮಾರ್‍ತಾಂಡ ಚಂದ್ರಮತೀಡಿ
ಕಾನನೋದ್ಯಾನ ಕುಸುಮಗಳ ಚೆಲ್ಲಿ
ಸುಪ್ರಭಾತ ಸುಮಂಗಲ ಪಾಡಿ
ಕುಣಿದು ಕೊಂಡಾಡಿ ಪೂಜಿಸಲೇಕೆ?
ಬಾ ಹೊರಗೆ ವೀಣೆಯನಿಟ್ಟು ವಿಶ್ರಾಂತಿ
ಕೊಟ್ಟು, ಕೆಲಕಾಲ ಖಡ್ಗ ಪಾಣಿನಿಯಾಗಿ.
ಮಲ್ಲಗಚ್ಚಿಯ ಹಾಕಿ ಬಾ ಬೆಂಗಾವಲಾಗಿ.
ಮೂಜಗಕೆ ಗಂಡ ಭೇರುಂಡ ಗಾಂಡೀವಿ-
ಪುತ್ರಾಭಿಮನ್ಯು ಚಕ್ರವ್ಯೂಹವನೆ
ಭೇದಿಸಿದ ಬಾಣದ ಶಕ್ತಿ ಬಹುದೆನ್ನ
ಗಲುಗಿಗೆ. ಮೌಢ್ಯ ಕೋಟೆಯ ಕೆಡಹಿ
ನಾಡಗುಡಿ ಕಟ್ಟುವೆನು. ಕನ್ನಡ ತಾಯ
ತಣಿಸುವೆನು. ನುಡಿದೇವಿ ನುಡಿಸಾಗ
ನಿನ್ನ ವೀಣೆಯನು ತೋಷದಾಕಾಶದಲಿ.
*****